ಅಗ್ನಿವೀರ್ ಬಗ್ಗೆ ರಾಜನಾಥ್ ಸಿಂಗ್ ಸುಳ್ಳು ಹೇಳುತ್ತಿದ್ದಾರೆ ಎಂಬ ರಾಹುಲ್ ಗಾಂಧಿ ಆರೋಪಕ್ಕೆ ಸೇನೆ ತಿರುಗೇಟು
ದೇಶ ಕಾಯುವ ಕಾಯಕದ ವೇಳೆ ಮಡಿದ ಅಗ್ನಿವೀರರಿಗೆ ಒಂದು ಕೋಟಿ ರೂ. ಪರಿಹಾರ ನೀಡಲಾಗಿದೆ ಎಂಬ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಹೇಳಿಕೆ ಸುಳ್ಳು ಎಂದೆಲ್ಲಾ ಆರೋಪ ಮಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಕ್ಕೆ ಸೇನೆ ತಿರುಗೇಟು ನೀಡಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಟ್ವಿಟ್ ಮಾಡಿದೆ.
ನವದೆಹಲಿ: ಅಗ್ನಿವೀರರು ಯೂಸ್ ಆಂಡ್ ಥ್ರೂ ಇದ್ದಂತೆ, ಅವರು ಮಡಿದರೆ ಅವರಿಗೆ ಯಾವುದೇ ಪರಿಹಾರ ಸಿಗುವುದಿಲ್ಲ, ಪಿಂಚಣಿಯೂ ಸಿಗುವುದಿಲ್ಲ, ದೇಶ ಕಾಯುವ ಕಾಯಕದ ವೇಳೆ ಮಡಿದ ಅಗ್ನಿವೀರರಿಗೆ ಒಂದು ಕೋಟಿ ರೂ. ಪರಿಹಾರ ನೀಡಲಾಗಿದೆ ಎಂಬ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಹೇಳಿಕೆ ಸುಳ್ಳು ಎಂದೆಲ್ಲಾ ಆರೋಪ ಮಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಕ್ಕೆ ಸೇನೆ ತಿರುಗೇಟು ನೀಡಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಟ್ವಿಟ್ ಮಾಡಿದೆ.
ಭಾರತೀಯ ಸೇನೆಯ ಎಡಿಜಿಪಿಗೆ ಸೇರಿದ ಅಧಿಕೃತ ಟ್ವಿಟ್ಟರ್ ಖಾತೆಯಿಂದ ರಾಹುಲ್ ಆರೋಪಕ್ಕೆ ಸಂಬಂಧಿಸಿದಂತೆ ಪ್ರತ್ಯುತ್ತರ ನೀಡಲಾಗಿದೆ. ಸೇನಾ ಕಾರ್ಯಾಚರಣೆ ವೇಳೆ ಮಡಿದ ಅಗ್ನಿವೀರ್ ಅಜಯ್ ಕುಮಾರ್ ಎಂಬವರ ಕುಟುಂಬಕ್ಕೆ 98.39 ಲಕ್ಷ ರೂಪಾಯಿಯನ್ನು ಪಾವತಿ ಮಾಡಲಾಗಿದೆ.
ಅಗ್ನಿವೀರರು ಯೂಸ್ ಅಂಡ್ ಥ್ರೋ ಕಾರ್ಮಿಕರು: ಒಬ್ಬ ಯೋಧನಿಗೆ ಪಿಂಚಣಿ, ಇನ್ನೊಬ್ಬನಿಗೆ ಇಲ್ಲ: ರಾಹುಲ್
ಕರ್ತವ್ಯದಲ್ಲಿರುವಾಗಲೇ ಮಡಿದ ಅಗ್ನಿವೀರ್ ಯೋಧ ಅಜಯ್ ಕುಮಾರ್ ಅವರ ಕುಟುಂಬಕ್ಕೆ ಪರಿಹಾರ ನೀಡಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಕೆಲವು ಪೋಸ್ಟ್‌ಗಳು ಹರಿದಾಡುತ್ತಿವೆ. ಅಗ್ನಿವೀರ್ ಅಜಯ್ ಕುಮಾರ್ ಅವರ ಶ್ರೇಷ್ಠ ತ್ಯಾಗಕ್ಕೆ ಭಾರತೀಯ ಸೇನೆ ಗೌರವ ಸಲ್ಲಿಸುತ್ತದೆ. ಅವರ ಅಂತಿಮ ಕಾರ್ಯಗಳನ್ನು ಸಕಲ ಸೇನಾ ಗೌರವಗಳೊಂದಿಗೆ ಮಾಡಲಾಯ್ತು. ಅವರ ಕುಟುಂಬಕ್ಕೆ 98.39 ಲಕ್ಷವನ್ನು ಪರಿಹಾರವಾಗಿ ನೀಡಲಾಗಿದೆ. ಅಗ್ನಿವೀರ್ ಯೋಜನೆಯ ನಿಯಮಗಳ ಪ್ರಕಾರ, 67 ಲಕ್ಷದ ಹೆಚ್ಚಿನ ( Ex - Gratia and other benefits)ಹಣ ಹಾಗೂ ಸೌಲಭ್ಯಗಳನ್ನು ಕೆಲ ಪೊಲೀಸ್ ಪರಿಶೀಲನೆಯ ನಂತರ ಶೀಘ್ರದಲ್ಲೇ ಸೆಟಲ್‌ಮೆಂಟ್ ಮಾಡಲಾಗುತ್ತದೆ. ಇದೆಲ್ಲ ಸೇರಿ ಒಟ್ಟು ಅಂದಾಝು 1.65 ಕೋಟಿ ಹಣ ಅಗ್ನಿವೀರ್ ಅಜಯ್ ಕುಮಾರ್ ಸಂಬಂಧಿಗಳಿಗೆ ಸೇರುತ್ತದೆ. ಹಾಗೆಯೇ ಹುತಾತ್ಮರಾದ ಇತರ ಯೋಧರಂತೆಯೇ ಅಗ್ನಿವೀರರ ಸಂಬಂಧಿಕರಿಗೂ ಸಿಗಬೇಕಾದ ಸವಲತ್ತುಗಳು ಸಿಗುತ್ತದೆ ಎಂದು ಸೇನೆ ತನ್ನ ಟ್ವಿಟ್ಟರ್ ಪೋಸ್ಟ್‌ನಲ್ಲಿ ಸ್ಪಷ್ಟಪಡಿಸಿದೆ.
ಇದನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಕಚೇರಿಯೀ ಕೂಡ ರೀಪೋಸ್ಟ್ ಮಾಡಿದ್ದು, ಅಗ್ನಿವೀರರ ಕ್ಷೇಮಾಭಿವೃದ್ಧಿಗೆ ಭಾರತೀಯ ಸೇನೆ ಬದ್ಧವಾಗಿದೆ ಎಂದು ಬರೆದುಕೊಂಡಿದ್ದಾರೆ. ಜೂನ್ ಅಂತ್ಯದಲ್ಲಿ ಅಗ್ನಿವೀರ್ ಅಜಯ್‌ಕುಮಾರ್ ಕುಟುಂಬಕ್ಕೆ 98 ಲಕ್ಷ ರೂಪಾಯಿ ಪಾವತಿ ಮಾಡಲಾಗಿದೆ ಎಂದು ಮೂಲವೊಂದರಿಂದ ತಿಳಿದು ಬಂದಿದೆ.
ರಾಹುಲ್ ಗಾಂಧಿ ಟೀಕೆಗಳಿಗೆ ಆ ಕ್ಷಣವೇ ಫಟಾಫಟ್ ಉತ್ತರ: ಲೋಕಸಭೆಯಲ್ಲಿ ಅಪರೂಪದ ಕ್ಷಣ
ನಿನ್ನೆ ರಾಹುಲ್ ಗಾಂಧಿ ಅವರು ಸರ್ಕಾರದ ಅಗ್ನಿವೀರ್ ಯೋಜನೆಗೆ ಸಂಬಂಧಿಸಿದಂತೆ ವೀಡಿಯೋ ಹೇಳಿಕೆ ನೀಡಿದ ಎರಡು ಗಂಟೆಯೊಳಗೆ ಸೇನೆ ಈ ಬಗ್ಗೆ ಸ್ಪಷ್ಟಪಡಿಸಿದೆ. ಅಗ್ನಿವೀರರಿಗೆ ಯಾವುದೇ ಪಿಂಚಣಿ, ಪರಿಹಾರ ಸಿಗುತ್ತಿಲ್ಲ, ಸತ್ಯವನ್ನು ರಕ್ಷಿಸುವುದು ಪ್ರತಿಯೊಂದು ಧರ್ಮದ ಕರ್ತವ್ಯ. ಆದರೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಂಸತ್ ಕಲಾಪದಲ್ಲಿ ಹುತಾತ್ಮರಾದ ಅಗ್ನಿವೀರರಿಗೆ ಸವಲತ್ತು ನೀಡಲಾಗಿದೆ ಎಂದು ಸುಳ್ಳು ಹೇಳಿದರು. ಅಗ್ನಿವೀರ್ ಅಜಯ್ ಕುಮಾರ್ ಅವರ ತಂದೆಯೇ ರಾಜನಾಥ್ ಸಿಂಗ್ ಅವರ ಸುಳ್ಳಿನ ಬಗ್ಗೆ ಸತ್ಯ ಹೇಳಿದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ರಕ್ಷಣಾ ಸಚಿವರು ಸಂಸತ್ ಕಲಾಪದಲ್ಲಿ ಕ್ಷಮೆ ಕೇಳಬೇಕು. ದೇಶ, ಸೇನೆ ಹಾಗೀ ಅಗ್ನಿವೀರ್ ಅಜಯ್ ಕುಮಾರ್ ಕುಟುಂಬದವರ ಜೊತೆ ಕ್ಷಮೆ ಕೇಳಬೇಕು ಎಂದು ಲೋಕಸಭೆ ವಿಪಕ್ಷದ ನಾಯಕನೂ ಆಗಿರುವ ರಾಹುಲ್ ಗಾಂಧಿ ಅವರು ಭಗವಾನ್ ಶಿವನ ಫೋಟೋದ ಪಕ್ಕ ಇರಿಸಿಕೊಂಡು ಮಾತನಾಡಿದ್ದರು.
2022ರಲ್ಲಿ ಶುರುವಾದ ಅಗ್ನಿವೀರ್ ಸ್ಕೀಮ್ ಅನೇಕರಿಗೆ ಕಡಿಮೆ ಅವಧಿಯಲ್ಲಿ ಸೇನೆಯಲ್ಲಿ ಕೆಲಸ ಮಾಡಲು ತರಬೇತಿ ನೀಡಿ ಅವಕಾಶ ಕಲ್ಪಿಸುತ್ತದೆ. ಆದರೆ ಈ ಯೋಜನೆ ಆರಂಭವಾದಾಗಿನಿಂದಲೂ ಕಾಂಗ್ರೆಸ್ ಇದನ್ನು ವಿರೋಧಿಸುತ್ತಲೇ ಬಂದಿದೆ. ಈ ಯೋಜನೆ ಜಾರಿಯ ವೇಳೆ ಸರಿಯಾಗಿ ಚರ್ಚೆ ನಡೆಸಿಲ್ಲ, ಅಗ್ನಿವೀರರಿಗೆ ಸವಲತ್ತು ಸರಿ ಇಲ್ಲ, ಅಗ್ನಿವೀರ್ ಯೂಸ್ ಆಂಡ್ ಥ್ರೂ ಎಂದೆಲ್ಲಾ ರಾಹುಲ್ ಗಾಂಧಿ ಆರೋಪ ಮಾಡಿದ್ದರು. ಆದರೆ ಈಗ ಸೇನೆಯೇ ನೇರವಾಗಿ ರಾಹುಲ್ ಆರೋಪಕ್ಕೆ ಸ್ಪಷ್ಟನೆ ನೀಡಿದ್ದು, ಸತ್ಯ ಹೇಳಿದವರು ಯಾರು ಸುಳ್ಳು ಹೇಳಿದವರು ಯಾರು ಎಂಬುದು ಬಯಲಾಗಿದೆ.