ನವದೆಹಲಿ(ಅ.15): ಡಿಸೆಂಬರ್‌ನಿಂದ ಆರಂಭವಾಗುವ ಚಳಿಗಾಲದಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದ್ದು, ಈ ವೇಳೆ ಆಮ್ಲಜನಕ ಸಿಲಿಂಡರ್‌ಗಳ ಕೊರತೆ ಬೀಳದಂತೆ ನೋಡಿಕೊಳ್ಳಲು ಒಂದು ಲಕ್ಷ ಮೆಟ್ರಿಕ್‌ ಟನ್‌ ದ್ರವ ರೂಪದ ಆಮ್ಲಜನಕ ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಇದಕ್ಕಾಗಿ ಕೇಂದ್ರ ಆರೋಗ್ಯ ಮಂತ್ರಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಎಚ್‌ಎಲ್‌ಎಲ್‌ ಲೈಫ್‌ಕೇರ್‌ ಲಿಮಿಟೆಡ್‌ ಜಾಗತಿಕ ಟೆಂಡರ್‌ ಆಹ್ವಾನಿಸಿದೆ.

ಈ ಆಮ್ಲಜನಕವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸುಪರ್ದಿಯಲ್ಲಿರುವ ಆಸ್ಪತ್ರೆಗೆ ಹಂಚಿಕೆ ಮಾಡಲಾಗುತ್ತದೆ. ಇದಕ್ಕೆ 600-700 ಕೋಟಿ ರು. ವೆಚ್ಚ ತಗುಲಬಹುದು ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಮಂಗಳವಾರದವರೆಗೆ ಒಟ್ಟು ಕೋವಿಡ್‌ ರೋಗಿಗಳ ಪೈಕಿ ಶೇ.3.97 ಮಂದಿ ಆಮ್ಲಜನಕ ಸಹಾಯದಿಂದ ಚಿಕಿತ್ಸೆ ಪಡೆಯುತ್ತಿದ್ದು, ಶೇ.2.46 ಮಂದಿ ಐಸಿಯು ಹಾಗೂ ಶೇ. 0.4 ಮಂದಿ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಲಾಕ್‌ಡೌನ್‌ಗೂ ಮುಂಚಿತವಾಗಿ ಭಾರತದಲ್ಲಿ ದಿನಕ್ಕೆ 6400 ಮೆಟ್ರಿಕ್‌ ಟನ್‌ನಷ್ಟುಆಮ್ಲಜನ ಉತ್ಪಾದನಾ ಸಾಮರ್ಥ್ಯ ಹೊಂದಿತ್ತು. ಈ ಪೈಕಿ 1000 ಮೆಟ್ರಿಕ್‌ ಟನ್‌ ಮಾತ್ರ ವೈದ್ಯಕೀಯ ಅಗತ್ಯಕ್ಕೆ ಬಳಕೆಯಾಗುತ್ತಿದೆ.