ಗುಜರಾತ್‌(ನ.27): 26/11 ಮುಂಬೈ ದಾಳಿಯನ್ನು ಭಾರತ ಯಾವತ್ತೂ ಮರೆಯಲು ಸಾಧ್ಯವಿಲ್ಲ. ದೇಶವು ಇಂದು ಹೊಸ ನೀತಿ ಹಾಗೂ ರೀತಿಯಡಿ ಭಯೋತ್ಪಾದನೆ ವಿರುದ್ಧ ಹೋರಾಟ ಆರಂಭಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಗುಜರಾತ್‌ನ ಕೇವಡಿಯಾದಲ್ಲಿ ಆಯೋಜಿತವಾಗಿದ್ದ ಶಾಸನಸಭೆಗಳ ಮುಖ್ಯಸ್ಥರ ಸಮ್ಮೇಳನದಲ್ಲಿ ದಿಲ್ಲಿಯಿಂದ ವಿಡಿಯೋ ಕಾನ್ಫರೆನ್ಸ್‌ ಮೂಲಕ ಗುರುವಾರ ಮಾತನಾಡಿದ ಮೋದಿ ಅವರು, ಮುಂಬೈ ಮೇಲೆ 2008ರ ನವೆಂಬರ್‌ 26ರಂದು ಪಾಕಿಸ್ತಾನದ ಉಗ್ರರು ನಡೆಸಿದ್ದ ದಾಳಿಯನ್ನು ಸ್ಮರಿಸಿದರು ಹಾಗೂ ಮಡಿದ ಯೋಧರಿಗೆ ನುಡಿನಮನ ಸಲ್ಲಿಸಿದರು.

ದೇಶದ ಎಲ್ಲರಿಗೂ ಉಚಿತ ಲಸಿಕೆ?: ಕೇಂದ್ರ ಬಜೆಟ್‌ನಲ್ಲಿ ಘೋಷಣೆ ಸಂಭವ!

‘ಇದೇ ದಿನಾಂಕದಂದು ದೇಶದ ಮೇಲೆ ಅತಿದೊಡ್ಡ ಭಯೋತ್ಪಾದಕ ದಾಳಿ ನಡೆದಿತ್ತು. ಪಾಕಿಸ್ತಾನ ಕಳಿಸಿದ ಭಯೋತ್ಪಾದಕರು ಮುಂಬೈ ಮೇಲೆ ದಾಳಿ ನಡೆಸಿದ್ದರು. ಅನೇಕರು ಈ ದಾಳಿಯಲ್ಲಿ ಮೃತರಾದರು. ಇದರಲ್ಲಿ ಅನೇಕ ವಿದೇಶೀಯರೂ ಇದ್ದರು. ಅವರಿಗೆಲ್ಲ ನನ್ನ ಶ್ರದ್ಧಾಂಜಲಿ. ಉಗ್ರರ ವಿರುದ್ಧ ಹೋರಾಡಿ ಅವರನ್ನು ಹಿಮ್ಮೆಟ್ಟಿಸಿ ಪ್ರಾಣತ್ಯಾಗ ಮಾಡಿದ ಭದ್ರತಾ ಸಿಬ್ಬಂದಿಗೆ ನಾನು ತಲೆಬಾಗಿ ನಮಿಸುವೆ’ ಎಂದರು.

ಅಲ್ಲದೆ, ಗಡಿಯಲ್ಲಿ ಉಗ್ರರನ್ನು ಹಿಮ್ಮೆಟ್ಟಿಸಿ ಯೋಧರು ಭಾರತದ ರಕ್ಷಣೆ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ಒಂದು ದೇಶ, ಒಂದು ಎಲೆಕ್ಷನ್‌ ಆಗಬೇಕು: ಮೋದಿ

‘ಭಾರತ ಈ ಗಾಯವನ್ನು ಎಂದೂ ಮರೆಯಲು ಸಾಧ್ಯವಿಲ್ಲ. ದೇಶವು ಇಂದು ಹೊಸ ರೀತಿ ಹಾಗೂ ನೀತಿಯ ಮೂಲಕ ಉಗ್ರವಾದದ ವಿರುದ್ಧ ಹೋರಾಡುತ್ತಿದೆ’ ಎಂದರು.