ಭಾರತದಲ್ಲಿ ಕೋವಿಡ್ ಪ್ರಕರಣ ಸಂಖ್ಯೆ ದಿಢೀರ್ ಏರಿಕೆಯಾಗುತ್ತಿದೆ. ಇದರ ನಡುವೆ ಸಾವು ವರದಿಯಾಗುತ್ತಿರುವುದು ಆತಂಕ ಹೆಚ್ಚಿಸಿದೆ. ಇಂದು ಒಂದೇ ದಿನ 22 ವರ್ಷದ ಯುವತಿ, 25 ವರ್ಷದ ಯುವಕ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ.

ನವದೆಹಲಿ(ಜೂ.02) ಕೊರೋನಾ ಪ್ರಕರಣ ಸಂಖ್ಯೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ಏರಿಕೆಯಾಗುತ್ತಿದೆ. ಹಾಂಕಾಂಗ್, ಸಿಂಗಾಪುರ, ಚೀನಾ ಸೇರಿದಂತೆ ಹಲು ದೇಶಗಳಲ್ಲಿ ತೀವ್ರವಾಗಿ ಹರಡುತ್ತಿರುವ ಕೋವಿಡ್ ಪ್ರಕರಣ ಇದೀಗ ಭಾರತದಲ್ಲೂ ಏರಿಕೆಯಾಗುತ್ತಿದೆ. ಭಾರತದಲ್ಲಿ ಇಂದು ಕೋವಿಡ್ ಕೇಸ್ 4000 ಗಡಿ ಸನಿಹಕ್ಕೆ ತಲುಪಿದೆ. ಇದರ ನಡುವ ಒಂದೇ ದಿನ ನಾಲ್ಕು ಸಾವು ಪ್ರಕರಣ ವರದಿಯಾಗಿದೆ. ಈ ಪೈಕಿ 22 ವರ್ಷದ ಯುವತಿ ಹಾಗೂ 25 ವರ್ಷದ ಯುವಕ ಬಲಿಯಾಗುವುದು ಇದೀಗ ಆತಂಕ ಹೆಚ್ಚಿಸಿದೆ.

ಇಂದು (ಜೂ.02) ರಾತ್ರಿ 8 ಗಂಟೆ ವರೆಗಿನ ಕೋವಿಡ್ ವರದಿ ಪ್ರಕಾರ ಭಾರತದಲ್ಲಿ 3,961 ಸಕ್ರೀಯ ಕೋವಿಡ್ ಪ್ರಕರಣ ದಾಖಲಾಗಿದೆ. ದಿನದಿಂದ ದಿನಕ್ಕೆ ಭಾರತದಲ್ಲಿ ಕೋವಿಡ್ ಪ್ರಕರಣ ಸಂಖ್ಯೆ ಏರಿಕೆಯಾಗುತ್ತಿದೆ. ಈ ಪೈಕಿ ಕೇರಳದಲ್ಲಿ ಅತೀ ಹೆಚ್ಚು ಕೋವಿಡ್ ಪ್ರಕರಣಗಳು ವರಿದಿಯಾಗಿದೆ. ಕೇರಳದಲ್ಲಿ 1,435 ಕೋವಿಡ್ ಕೇಸ್ ದಾಖಲಾಗಿದೆ. ಮಹಾರಾಷ್ಟ್ರ, ದೆಹಲಿ ನಂತರದ ಸ್ಥಾನದಲ್ಲಿದೆ.

ಟಾಪ್ 5 ಗರಿಷ್ಠ ಕೋವಿಡ್ ಕೇಸ್ ರಾಜ್ಯ

ಕೇರಳ: 1435

ಮಹಾರಾಷ್ಟ್ರ: 506

ದೆಹಲಿ: 483

ಪಶ್ಚಿಮ ಬಂಗಾಳ: 331

ಕರ್ನಾಟಕ : 300

ಒಂದೇ ದಿನ ನಾಲ್ವರು ಕೋವಿಡ್‌ಗೆ ಬಲಿ

ಜೂನ್ 2 ರಂದು ಭಾರತದಲ್ಲಿ ಕೋವಿಡ್ ಪ್ರಕರಣ 4000 ಗಡಿ ತಲುಪಿದೆ. ಇಂದು ಒಂದೇ ದಿನ ನಾಲ್ವರು ಕೋವಿಡ್‌ಗೆ ಬಲಿಯಾಗಿದ್ದಾರೆ. ದೆಹಲಿ, ತಮಿಳುನಾಡು,ಕೇರಳ, ಮಹಾರಾಷ್ಟ್ರದಲ್ಲಿ ಕೋವಿಡ್‌ಗೆ ಒಬ್ಬೊಬ್ಬರು ಬಲಿಯಾಗಿದ್ದಾರೆ. ಈ ಪೈಕಿ ದೆಹಲಿಯ 22 ವರ್ಷದ ಯುವತಿ ಕೂಡ ಸೇರಿದ್ದಾಳೆ. ಈಕೆಗೆ ಶ್ವಾಸಕೋಶ ಸಂಬಂಧ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಕೋವಿಡ್ ಕಾಣಿಸಿಕೊಂಡು ಉಸಿರಾಟ ಸಮಸ್ಯೆ ತೀವ್ರಗೊಂಡಿತ್ತು. ಇತ್ತ ತಮಿಳುನಾಡಿನ 25 ವರ್ಷದ ಯುವಕ ಅಸ್ತಮಾದಿಂದ ಬಳಸುತ್ತಿದ್ದ. ಈತನಿಗೆ ಕೋವಿಡ್ ಸೋಂಕು ಕಾಣಿಸಿಕೊಂಡು ಉಸಿರಾಟ ಸಮಸ್ಯೆ ತೀವ್ರಗೊಂಡು ನಿಧನರಾಗಿದ್ದಾರೆ. ಈ ಮೂಲಕ ಭಾರತದಲ್ಲಿ ಇಂದು ಒಂದೇ ದಿನ ನಾಲ್ಕು ಕೋವಿಡ್ ಸಾವಾಗಿದೆ.

ಕರ್ನಾಟಕದಲ್ಲಿ 300 ಗಡಿ ದಾಟಿದ ಕೋವಿಡ್ ಕೇಸ್

ಕರ್ನಾಟಕದಲ್ಲಿ ಕೋವಿಡ್ 300ರ ಗಡಿ ದಾಟಿದೆ. ಇಂದು ಕೋವಿಡ್ ಪ್ರಕರಣ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 87 ಕೋವಿಡ್ ಪ್ರಕರಣ ದಾಖಲಾಗಿದೆ. ಇನ್ನು 29 ಮಂದಿ ಕೋರನಾದಿಂದ ಗುಣಮುಖರಾಗಿದ್ದಾರೆ. ಇತ್ತ 504 ಮಂದಿಗೆ ಕೋವಿಡ್ ಪರೀಕ್ಷೆ ಮಾಡಿಸಲಾಗಿದೆ. ಕರ್ನಾಟದ ಇಂದಿನ ಕೋವಿಡ್ ಪಾಸಿಟಿವಿಟಿ ರೇಟ್ ಶೇಕಡಾ 17.2ರಷ್ಟಾಗಿದೆ. ಭಾನುವಾರ ರಾಜ್ಯದಲ್ಲಿ ಕೋರೋನಾ ಪಾಸಿಟಿವಿಟಿ ರೇಟ್ ಶೇಕಡಾ 10ರಷ್ಟಿತ್ತು. ಸದ್ಯ ರಾಜ್ಯದಲ್ಲಿ ದಾಖಲಾಗಿರುವ 311 ಮಂದಿ ಕೋವಿಡ್ ಸೋಂಕಿತರ ಪೈಕಿ 296 ಮಂದಿ ಹೋಮ್ ಐಸೋಲೇಶನ್‌ಗೆ ಒಳಗಾಗಿದ್ದಾರೆ. ಮೂವರು ಸೋಂಕಿತರಿಗೆ ಐಸಿಯುವಿನಲ್ಲಿ ಚಿಕಿತ್ಸೆ ಮುಂದುವರಿದೆ.

ರಾಜ್ಯದಲ್ಲಿ ಇದುವರೆಗೆ ನಾಲ್ವರು ಸಾವು

ಕರ್ನಾಟಕದಲ್ಲಿ ಸದ್ಯ ಎದ್ದಿರುವ ಕೋವಿಡ್ ಅಲೆಯಲ್ಲಿ ನಾಲ್ವರು ಬಲಿಯಾಗಿದ್ದಾರೆ. ಈ ಪೈಕಿ ಮೂವರು ವ್ಯಾಕ್ಸಿನ್ ಪಡೆದುಕೊಂಡಿದ್ದರು. ಕರ್ನಾಟಕದಲ್ಲಿ ಮೃತಪಟ್ಟ ನಾಲ್ವರೂ ಕೂಡ 60 ವರ್ಷ ಮೇಲ್ಪಟ್ಟವರು. ಮೇ 24 ರಂದು ಬೆಂಗಳೂರಿನಲ್ಲಿ 84 ವರ್ಷದ ವ್ಯಕ್ತಿ ಕೋವಿಡ್‌ಗೆ ಬಲಿಯಾಗಿದ್ದರು. ಮೇ.29 ರಂದು ಬೆಳಗಾವಿಯಲ್ಲಿ 70 ವರ್ಷದ ವ್ಯಕ್ತಿ ಬಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್‌ಗೆ ಬಲಿಯಾಗಿದ್ದರು. ಮೇ 30 ರಂದು ಮೈಸೂರಿನಲ್ಲಿ 63 ವರ್ಷದ ವ್ಯಕ್ತಿ ಕೋವಿಡ್‌ಗೆ ಬಲಿಯಾಗಿದ್ದರು. ಇದೇ ದಿನ ಬೆಂಗಳೂರಿನಲ್ಲೂ 63 ವರ್ಷದ ವ್ಯಕ್ತಿ ಕೋವಿಡ್‌ಗೆ ಬಲಿಯಾಗಿದ್ದರು.