ನವದೆಹಲಿ(ಮಾ.31): ದಿನದಿಂದ ದಿನಕ್ಕೆ ಏರುತ್ತಾ ಸಾಗುತ್ತಿರುವ ಕೊರೋನಾ ವೈರಸ್‌ ಪ್ರಕರಣಗಳ ಸಂಖ್ಯೆಯಲ್ಲಿ ಕೊಂಚ ಇಳಿಕೆ ಆಗಿದೆ. ಮಂಗಳವಾರ ಮುಂಜಾನೆ 8 ಗಂಟೆಗೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ 56,211 ಕೊರೋನಾ ವೈರಸ್‌ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 1.20 ಕೋಟಿಗೆ ಏರಿಕೆ ಆಗಿದೆ. ಇನ್ನು ಇದೇ ಅವಧಿಯಲ್ಲಿ 271 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 1.62 ಲಕ್ಷಕ್ಕೆ ಹೆಚ್ಚಳಗೊಂಡಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಮಂಗಳವಾರದ ಪ್ರಕರಣಗಳ ಕುಸಿತಕ್ಕೆ ಟೆಸ್ಟಿಂಗ್‌ ಇಳಿಕೆಯೂ ಕಾರಣ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ದೈನಂದಿನ 10 ಲಕ್ಷ ಸರಾಸರಿ ಟೆಸ್ಟ್‌ ಆಗುತ್ತಿದ್ದವು. ಆದರೆ ಸೋಮವಾರ 7.85 ಲಕ್ಷ ಟೆಸ್ಟ್‌ ಮಾತ್ರ ನಡೆಸಲಾಗಿದೆ. ಸೋಮವಾರ ಹೋಳಿ ಹಬ್ಬದ ರಜೆ ಕಾರಣ ಟೆಸ್ಟಿಂಗ್‌ ಇಳಿಕೆಯಾಗಿದೆ ಎಂದು ಹೇಳಲಾಗಿದೆ.

ಇದೇ ವೇಳೆ ಕಳೆದ 20 ದಿನಗಳ ಅಂತರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 5,40,720ಕ್ಕೆ ಏರಿಕೆ ಆಗಿದೆ. ಒಟ್ಟು ಪ್ರಕರಣಗಳ ಪೈಕಿ ಸಕ್ರಿಯ ಪ್ರಕರಣಗಳ ಪ್ರಮಾಣಗಳ ಪಾಲು ಶೇ.4.47ರಷ್ಟಿದೆ. ಇನ್ನು ಚೇತರಿಕೆ ಪ್ರಮಾಣ ಶೇ.94.19ಕ್ಕೆ ಕುಸಿದಿದೆ.

6 ರಾಜ್ಯಗಳಲ್ಲಿ ಶೇ.78ರಷ್ಟು ಕೇಸ್‌:

ದೇಶದಲ್ಲಿ ದಾಖಲಾಗಿರುವ ಒಟ್ಟು ಕೊರೋನಾ ಪ್ರಕರಣಗಳ ಪೈಕಿ ಮಹಾರಾಷ್ಟ್ರ, ಪಂಜಾಬ್‌, ಕರ್ನಾಟಕ, ಮಧ್ಯ ಪ್ರದೇಶ, ತಮಿಳುನಾಡು ಮತ್ತು ಗುಜರಾತ್‌- ಈ 6 ರಾಜ್ಯಗಳ ಪಾಲು ಶೇ.78ರಷ್ಟಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

6 ಕೋಟಿ ಮಂದಿಗೆ ಲಸಿಕೆ;

ಇದೇ ವೇಳೆ ದೇಶದೆಲ್ಲೆಡೆ 6.11 ಕೋಟಿ ಮಂದಿಗೆ ಕೊರೋನಾ ಕೋವಿಡ್‌ ಲಸಿಕೆಯನ್ನು ನೀಡಲಾಗಿದೆ. ಈ ಪೈಕಿ 81.74 ಲಕ್ಷ ಆರೋಗ್ಯ ಕಾರ್ಯಕರ್ತರು, 89.44 ಲಕ್ಷ ಮುಂಚೂಣಿ ಕಾರ್ಯಕರ್ತರು ಲಸಿಕೆ ಪಡೆದುಕೊಂಡಿದ್ದಾರೆ.