ನವದೆಹಲಿ(ಫೆ.08): ಕೊರೋನಾ ಮಹಾಮಾರಿಯಿಂದ ದೇಶದ ಜನರ ರಕ್ಷಣೆಗಾಗಿ ಅತಿಹೆಚ್ಚು ಮಂದಿಗೆ ಲಸಿಕೆ ನೀಡಿದ ವಿಶ್ವದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 3ನೇ ಸ್ಥಾನದಲ್ಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್‌ ತಿಳಿಸಿದ್ದಾರೆ. ಮೊದಲೆರಡು ಸ್ಥಾನಗಳಲ್ಲಿ ಕ್ರಮವಾಗಿ ಅಮೆರಿಕ ಮತ್ತು ಬ್ರಿಟನ್‌ ರಾಷ್ಟ್ರಗಳಿವೆ.

ಈ ಬಗ್ಗೆ ಭಾನುವಾರ ಮಾತನಾಡಿದ ಅವರು, ‘ದೇಶದ 12 ರಾಜ್ಯಗಳು 2 ಲಕ್ಷಕ್ಕಿಂತ ಹೆಚ್ಚು ಮಂದಿಗೆ ಕೊರೋನಾ ಲಸಿಕೆಯನ್ನು ನೀಡಿವೆ. ತನ್ಮೂಲಕ ಭಾನುವಾರ ಬೆಳಗ್ಗೆ 8 ಗಂಟೆವರೆಗೆ ಒಟ್ಟಾರೆ 57.75 ಲಕ್ಷಕ್ಕಿಂತ ಹೆಚ್ಚು ಮಂದಿಗೆ ಲಸಿಕೆ ವಿತರಣೆ ಮಾಡಲಾಗಿದೆ. ಈ ಪೈಕಿ ಉತ್ತರ ಪ್ರದೇಶವೊಂದೇ 6.73 ಲಕ್ಷ ಮಂದಿಗೆ ಲಸಿಕೆ ಪೂರೈಸುವ ಮೂಲಕ, ಲಸಿಕೆಗೆ ಅರ್ಹವಿರುವ ಎಲ್ಲರಿಗೂ ಲಸಿಕೆಯನ್ನು ಪೂರೈಸಿದ ಏಕೈಕ ರಾಜ್ಯವಾಗಿದೆ’ ಎಂದಿದ್ದಾರೆ.

ಅಲ್ಲದೆ ಕೊರೋನಾ ಲಸಿಕೆ ಅಭಿಯಾನ ಆರಂಭವಾದ ಜನವರಿ 16ರಿಂದ ಪ್ರತೀನಿತ್ಯ ಲಸಿಕೆ ಪಡೆಯುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಜೊತೆಗೆ ದೇಶಾದ್ಯಂತ ಈ ವ್ಯಾಧಿಗೆ ಕಳೆದ 24 ಗಂಟೆಯಲ್ಲಿ ಬಲಿಯಾದವರ ಸಂಖ್ಯೆ 80ಕ್ಕೆ ಸೀಮಿತವಾಗಿದೆ ಎಂದು ತಿಳಿಸಿದರು.