* ಹೈದರಾಬಾದ್ ಕಂಪನಿಯಿಂದ ದೇಶೀ ಆ್ಯಂಟಿ ಡ್ರೋನ್ ವ್ಯವಸ್ಥೆ ಅಭಿವೃದ್ಧಿ* ಡ್ರೋನ್ ದಾಳಿ ತಡೆಯಲು ದೇಶೀಯ ‘ಇಂದ್ರಜಾಲ’ ಸಿದ್ಧ!* ಗಡಿಯಲ್ಲಿ ಚೀನಾ, ಪಾಕ್ ಸವಾಲು ಎದುರಿಸಲು ಸಂಪೂರ್ಣ ಶಕ್ತಿಶಾಲಿ
ಹೈದರಾಬಾದ್(ಜೂ.30): ಸತತ ಮೂರು ದಿನಗಳಿಂದ ಕಾಶ್ಮೀರದಲ್ಲಿ ಉಗ್ರರು ಡ್ರೋನ್ ಬಳಸಿ ದಾಳಿಗೆ ಯತ್ನಿಸುತ್ತಿರುವ ಬೆನ್ನಲ್ಲೇ, ಇಂಥ ಸವಾಲುಗಳನ್ನು ಸಮರ್ಥವಾಗಿ ಎದುರಿಸಬಲ್ಲ ದೇಶೀಯ ವ್ಯವಸ್ಥೆಯೊಂದನ್ನು ಅಭಿವೃದ್ಧಿಪಡಿಸಿರುವುದಾಗಿ ಹೈದರಾಬಾದ್ ಮೂಲದ ಗ್ರೆನೆ ರೊಬೋಟಿಕ್ಸ್ ಸಂಸ್ಥೆ ಹೇಳಿಕೊಂಡಿದೆ. ‘ಇಂದ್ರಜಾಲ’ ಎಂದು ಹೆಸರಿಸಲಾಗಿರುವ ಈ ವ್ಯವಸ್ಥೆ ದೇಶದ ಗಡಿಯತ್ತ ನುಗ್ಗಿಬರುವ ಯಾವುದೇ ಶಸ್ತಾ್ರಸ್ತ್ರ, ಯುದ್ಧ ಸಾಮಗ್ರಿ, ಡ್ರೋನ್‌ಗಳನ್ನು ಪತ್ತೆ ಮಾಡಿ, ಅವುಗಳನ್ನು ಧ್ವಂಸ ಮಾಡುವ ಮೂಲಕ ದೇಶವನ್ನು ರಕ್ಷಿಸಬಲ್ಲದು ಎಂದು ಹೇಳಿಕೊಂಡಿದೆ.
ಇತ್ತೀಚಿನ ವರ್ಷಗಳಲ್ಲಿ ಚೀನಾ ಸೇರಿದಂತೆ ಹಲವು ದೇಶಗಳು ಡ್ರೋನ್‌ಗಳನ್ನು ಯುದ್ಧದ ಅಸ್ತ್ರವಾಗಿ ಬಳಸಿಕೊಳ್ಳುತ್ತಿವೆ. ಇವುಗಳಿಂದ ಭಾರತದ ಗಡಿಯನ್ನು ರಕ್ಷಿಸಲು, ಹಾಲಿ ಬಳಕೆಯಾಗುತ್ತಿರುವ ಪಾಯಿಂಟ್ ಡಿಫೆನ್ಸ್ ಆ್ಯಂಟಿ ಡ್ರೋನ್ ವ್ಯವಸ್ಥೆ ಅಷ್ಟುಕಾರ್ಯಸಾಧುವಲ್ಲ. ಕಾರಣ, ಪಶ್ಚಿಮದ ಗಡಿ ಮತ್ತು ದೇಶದ ಅತ್ಯಂತ ಸೂಕ್ಷ್ಮ ಪ್ರದೇಶಗಳನ್ನು ಸಂಪೂರ್ಣವಾಗಿ ರಕ್ಷಿಸಬೇಕಾದರೆ ಕನಿಷ್ಠ ಇಂಥ 300 ಪಾಯಿಂಟ್ ಡಿಫೆನ್ಸ್ ಆ್ಯಂಟಿ ಡ್ರೋನ್ ವ್ಯವಸ್ಥೆ ಅಳವಡಿಸಬೇಕು. ಅದು ಆರ್ಥಿಕವಾಗಿ ಭಾರೀ ಹೊರೆದಾಯಕ. ಆದರೆ ಪಶ್ಚಿಮದ ಗಡಿಯ ಅಷ್ಟೂಪ್ರದೇಶಗಳನ್ನು ಇಂದ್ರಜಾಲ ವ್ಯವಸ್ಥೆಯ ಕೇವಲ 6-7 ಘಟಕಗಳು ರಕ್ಷಿಸಬಲ್ಲವು ಎಂದು ಕಂಪನಿ ಹೇಳಿಕೊಂಡಿದೆ.
ಇಂದ್ರಜಾಲ ಕಾರ್ಯನಿರ್ವಹಣೆ ಹೇಗೆ?:
ಇದು ಕೃತಕ ಬುದ್ಧಿಮತ್ತೆ ಒಳಗೊಂಡಿರುವ ಸಂಪೂರ್ಣ ಸ್ವಯಂಚಾಲಿತ ವ್ಯವಸ್ಥೆ. ಕೃತಕ ಬುದ್ಧಿಮತ್ತೆ, ಸೈಬರ್ ಭದ್ರತೆ ಮತ್ತು ರೊಬೋಟಿಕ್ಸ್ ಬಳಸಿಕೊಂಡು ಕನಿಷ್ಠ 8-10 ಅತ್ಯಾಧುನಿಕ ತಂತ್ರಜ್ಙಾನಗಳನ್ನು ಬಳಸಿ ಇದನ್ನು ರೂಪಿಸಲಾಗಿದೆ. ಇದು ಯಾವುದೇ ಶತ್ರು ದಾಳಿಯನ್ನು ಗ್ರಹಿಸಿ, ಅದನ್ನು ಏನು ಮಾಡಬೇಕೆಂದು ನಿರ್ಧರಿಸಿ, ಅದಕ್ಕೆ ತಕ್ಕಂತೆ ಕಾರ್ಯನಿರ್ವಹಿಸುತ್ತದೆ. ಈ ಎಲ್ಲಾ ಕೆಲಸಗಳನ್ನು ಅದು ಸ್ವಯಂ ಆಗಿ ಮಾಡುತ್ತದೆ. ದೇಶದ ಗಡಿಯತ್ತ ಸಾಗಿಬಂದ ವಸ್ತುಗಳು ಒಂದು ಅಥವಾ ಹಲವು ಆಗಿದ್ದರೂ, ಅದಕ್ಕೆ ತಕ್ಕಂತೆ ಕಾರ್ಯಾಚರಣೆ ವಿಧಾನವನ್ನು ರೂಪಿಸಿಕೊಂಡು, ಪ್ರತಿಯೊಂದು ಇಂದ್ರಜಾಲ ವ್ಯವಸ್ಥೆ ಕೂಡಾ ಕನಿಷ್ಠ 1000-2000 ಚದರ ಕಿ.ಮೀ ವ್ಯಾಪ್ತಿಯ ಪ್ರದೇಶದಕ್ಕೆ ಪೂರ್ಣ ರಕ್ಷಣೆ ನೀಡುತ್ತದೆ.
