Asianet Suvarna News Asianet Suvarna News

ಬಿಜೆಪಿಯಲ್ಲಿ ಬಿಎಸ್‌ವೈ ಪ್ರವಾಸ ಬಿಸಿ ಚರ್ಚೆ!

* ಸೆ.2ಕ್ಕೆ ಸಚಿವ ಪ್ರಹ್ಲಾದ್‌ ಜೋಶಿ ಮಗಳ ಮದುವೆಗೆ ಹುಬ್ಬಳ್ಳಿಗೆ ಬರಲಿದ್ದಾರೆ ಅಮಿತ್‌ ಶಾ

* ಬಿಜೆಪಿಯಲ್ಲಿ ಬಿಎಸ್‌ವೈ ಪ್ರವಾಸ ಬಿಸಿ ಚರ್ಚೆ!

India Gate bs yediyurappa to have state tour after krishna janmashtami pod
Author
Bangalore, First Published Aug 28, 2021, 5:53 PM IST

-ಪ್ರಶಾಂತ್‌ ನಾತು, ಇಂಡಿಯಾ ಗೇಟ್‌

ಸದ್ಯಕ್ಕಂತೂ ಯಡಿಯೂರಪ್ಪ ಮತ್ತು ಬೊಮ್ಮಾಯಿ ಸಂಬಂಧಗಳು ಚೆನ್ನಾಗಿಯೇ ಇವೆ. ಆದರೆ ಯಡಿಯೂರಪ್ಪನವರ ರಾಜ್ಯ ಪ್ರವಾಸದ ಬಗ್ಗೆ ಮಾತ್ರ ಬಿಜೆಪಿ ಒಳಗೆ ತಳಮಳ ಇದೆ. ಸದ್ಯಕ್ಕೆ ಯಡಿಯೂರಪ್ಪ ಪ್ರವಾಸ ಹೋಗುವುದು ಬೇಡ, ಅನಗತ್ಯ ಗೊಂದಲಗಳು ಸೃಷ್ಟಿಯಾಗಬಹುದು ಎಂದು ಹೈಕಮಾಂಡ್‌ ನಾಯಕರಿಗೆ ಅನ್ನಿಸಿದೆಯಂತೆ. ಆದರೆ ಯಡಿಯೂರಪ್ಪನವರನ್ನು ಮನವೊಲಿಸಿ ಒಪ್ಪಿಸುವ ಕೆಲಸವನ್ನು ದಿಲ್ಲಿ ನಾಯಕರು ಸ್ವತಃ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಕೊಟ್ಟಿದ್ದಾರೆ. ಹೇಗಾದರೂ ಮಾಡಿ ಯಡಿಯೂರಪ್ಪನವರನ್ನು ಯಾವುದಾದರೂ ರಾಜ್ಯಕ್ಕೆ ರಾಜ್ಯಪಾಲರನ್ನಾಗಿ ಕಳುಹಿಸುವ ಪ್ರಯತ್ನ ದಿಲ್ಲಿ ಕಡೆಯಿಂದ ನಡೆದಿದೆ. ಆದರೂ ಇಲ್ಲಿಯವರೆಗೆ ಯಡಿಯೂರಪ್ಪ ಇದಕ್ಕೆ ಒಪ್ಪಿಲ್ಲ. ಒಂದು ವೇಳೆ ಬಿಎಸ್‌ವೈ ಒಪ್ಪಿದರೆ ಶಿಕಾರಿಪುರದಿಂದ ವಿಜಯೇಂದ್ರ ಸ್ಪ​ರ್ಧಿಸಲು ಒಪ್ಪಿಗೆ ಕೊಡುವ ಬಗ್ಗೆ ಸ್ಥಳೀಯ ಸಂಘಕ್ಕೆ ಒಪ್ಪಿಗೆ ಇದ್ದ ಹಾಗಿದೆ. ಆದರೆ, ವಿಜಯೇಂದ್ರ ಒಲವು ವರುಣಾ ಕ್ಷೇತ್ರದ ಮೇಲಿದೆ. ದಿಲ್ಲಿ ಮೂಲಗಳು ಹೇಳುವ ಪ್ರಕಾರ ಸಂಪುಟ ರಚನೆಯ ಎರಡು ದಿನ ಮುಂಚೆ ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಅಮಿತ್‌ ಶಾ ನಡುವೆ ವಿಜಯೇಂದ್ರರನ್ನು ಮಂತ್ರಿ ಮಾಡುವ ಬಗ್ಗೆ ಮಾತುಕತೆ ನಡೆದಿತ್ತು. ಆಗ ಶಾ ‘ಪ್ರಧಾನಿ ಮೋದಿ ನಿರ್ಧರಿಸುತ್ತಾರೆ’ ಎಂದು ಹೇಳಿದರಂತೆ. ವಿಜಯೇಂದ್ರಗೆ ಮುಂದಿನ ಒಂದು ವರ್ಷದಲ್ಲಿ ಏನು ಸಿಗುತ್ತದೆ, ಏನು ಸಿಗೋದಿಲ್ಲ ಎನ್ನುವುದರ ಮೇಲೆ ಯಡಿಯೂರಪ್ಪನವರ ಮುಂದಿನ ನಿಲುವು ನಿರ್ಧರಿತ ಆಗಲಿದೆ.

ಬಿಎಸ್‌ವೈಗೆ ಬಲ ಸಿಕ್ಕಿದ್ದು ಹೇಗೆ?

2004ರ ಚುನಾವಣೆಯಲ್ಲಿ ಅನಂತ ಕುಮಾರ್‌ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಯಾವಾಗ ತಮ್ಮ ಇಚ್ಛೆಗೆ ವಿರುದ್ಧವಾಗಿ ಬಂಗಾರಪ್ಪ ಬಿಜೆಪಿಗೆ ಸೇರ್ಪಡೆ ಆದರೋ ಆಗ ಬಿಎಸ್‌ವೈಗೆ ಶೇ.4ರಷ್ಟಿರುವ ಈಡಿಗ ಸಮುದಾಯದ ಬಂಗಾರಪ್ಪಗೇ ಇಷ್ಟುಕೆಂಪುಹಾಸು ಸಿಗುವುದಾದರೆ, ಶೇ.16 ಇರುವ ಲಿಂಗಾಯತ ಸಮುದಾಯಕ್ಕೆ ಸೇರಿದ ತಮಗೆ ಯಾಕೆ ಇಷ್ಟುಮಹತ್ವ ಇಲ್ಲ ಎಂದು ಅನ್ನಿಸಿತಂತೆ. ಬಂಗಾರಪ್ಪ ಸೇರ್ಪಡೆ ಕಾರ್ಯಕ್ರಮದಲ್ಲಿ ನೂಕಾಟ ಉಂಟಾಗಿ ಯಡಿಯೂರಪ್ಪ ಹಿಂದೆ ಉಳಿದು ಕಾರು ಹತ್ತಲು 45 ನಿಮಿಷ ಬೇಕಾಯಿತಂತೆ. ಆಗ ಬಿಎಸ್‌ವೈ ಬಹಳ ನೊಂದುಕೊಂಡಿದ್ದರು. 2006ರಲ್ಲಿ ಕುಮಾರಸ್ವಾಮಿ ಜೊತೆ ಮೈತ್ರಿಯ ಮೊದಲ ಮಾತುಕತೆ ನಡೆದ ನಂತರ ಸೀದಾ ದೊಡ್ಡಬಳ್ಳಾಪುರದ ಸಂಘದ ಬೈಠಕ್‌ ನಡೆಯುತ್ತಿದ್ದ ಸ್ಥಳಕ್ಕೆ ಹೋದಾಗ ಮೈಚ ಜಯದೇವ ಅವರು ‘20 ತಿಂಗಳ ನಂತರ ಕುಮಾರಸ್ವಾಮಿ ಅಧಿ​ಕಾರ ಕೊಡದೇ ಇದ್ದರೆ’ ಎಂದು ಕೇಳಿದಾಗ ಯಡಿಯೂರಪ್ಪನವರು, ‘ಆಗ ದೊಡ್ಡ ಲಿಂಗಾಯತ ಸಮುದಾಯ ನನ್ನ ಬೆನ್ನ ಹಿಂದೆ ನಿಲ್ಲುತ್ತದೆ’ ಎಂದು ಹೇಳಿ ತೆರಳಿದರಂತೆ. ಆಗಿನಿಂದ ಯಡಿಯೂರಪ್ಪನವರು ಲಿಂಗಾಯತರ ನಾಯಕರಾದರು. ಆದರೆ ಈಗ ಅಂಥ ಬಿಎಸ್‌ವೈ ನೇತೃತ್ವ ಇಲ್ಲದ ಬಿಜೆಪಿಗೆ ಸಮುದಾಯ ಎಷ್ಟುಗಟ್ಟಿಯಾಗಿ ನಿಂತುಕೊಳ್ಳುತ್ತದೆ, ಇಲ್ಲಾ ಒಡೆದರೆ ಎಷ್ಟುಒಡೆಯುತ್ತದೆ ಅನ್ನುವುದು 2023ರ ದೃಷ್ಟಿಯಿಂದ ಮಹತ್ವ ಪೂರ್ಣ.

ಲಿಂಗಾಯತರು ಯಾರ ಬೆನ್ನಿಗೆ?

ಅಪರಿಮಿತ ಅದೃಷ್ಟಮತ್ತು ಯಡಿಯೂರಪ್ಪ ಹಾಗೂ ಹೈಕಮಾಂಡ್‌ನ ರಾಜಿ ಅಭ್ಯರ್ಥಿ ಆಗಿ ಮುಖ್ಯಮಂತ್ರಿಯಾದ ಬೊಮ್ಮಾಯಿ ತಮ್ಮ ಪ್ರಬುದ್ಧ ಮಾತು ಮತ್ತು ನಡುವಳಿಕೆಯಿಂದ ಜನರಿಗೂ ಹತ್ತಿರ ಆಗುತ್ತಿದ್ದಾರೆ. ಬೊಮ್ಮಾಯಿ ಜನಪ್ರಿಯತೆ ಹೆಚ್ಚಾಗಿದೆಯೇ? ಈಗಲೇ ಹೇಳುವುದು ಕಷ್ಟ. ಆದರೆ ಪರವಾಗಿಲ್ಲ ಎಂದು ಜನರಿಗೆ ಅನ್ನಿಸುತ್ತಿರುವುದು ಆರ್‌ಎಸ್‌ಎಸ್‌ ಮತ್ತು ಮೋದಿ ಇಬ್ಬರಿಗೂ ಸಮಾಧಾನ ತಂದಿರುವ ವಿಷಯ. ಆದರೆ ಇನ್ನೊಂದು ಕಡೆ ಪಂಚಮಸಾಲಿ ಶ್ರೀಗಳು ಆಂದೋಲನದ ದಾರಿ ಹಿಡಿಯುತ್ತಿರುವುದು ಬೊಮ್ಮಾಯಿಗಿರುವ ದೊಡ್ಡ ಸವಾಲು. ಪಂಚಮಸಾಲಿ ಸಮುದಾಯದ ಪ್ರತಿಭಟನೆಯ ಮೊದಲನೇ ಪರಿಣಾಮ ಎಂದರೆ ಬಿಜೆಪಿ ಲಿಂಗಾಯತ ವೋಟ್‌ ಬ್ಯಾಂಕ್‌ನಲ್ಲಿ ಒಡಕು. 2008ರ ನಂತರ ಲಿಂಗಾಯತರಲ್ಲಿನ ಗಾಣಿಗ, ಬಣಜಿಗ, ಪಂಚಮಸಾಲಿ, ಸಾದರು, ಜಂಗಮರು ಎಲ್ಲರೂ ಒಳಪಂಗಡ ಮರೆತು ಯಡಿಯೂರಪ್ಪನವರ ಕಾರಣದಿಂದ ಬಿಜೆಪಿಯ ಬೆನ್ನಿಗೆ ನಿಂತಿದ್ದರು. ಹಿಂದೆ 1985ರಲ್ಲಿ ಬ್ರಾಹ್ಮಣ ರಾಮಕೃಷ್ಣ ಹೆಗಡೆ, 89ರಲ್ಲಿ ಲಿಂಗಾಯತ ವೀರೇಂದ್ರ ಪಾಟೀಲ್‌ರ ಹಿಂದೆ ನಿಂತಿದ್ದ ಲಿಂಗಾಯತ ಸಮುದಾಯ 1989ರಲ್ಲಿ ಆಗಿನ ಎಸ್‌.ಆರ್‌.ಬೊಮ್ಮಾಯಿ ಅವರಿಗೆ, 1999ರಲ್ಲಿ ಜೆ.ಎಚ್‌.ಪಟೇಲ್‌ರಿಗೆ ದೇವೇಗೌಡರಿಂದ ‘ಅನ್ಯಾಯ ಆದರೂ’ ಜೊತೆಗೆ ನಿಲ್ಲಲಿಲ್ಲ. ಅಷ್ಟೇ ಏಕೆ 2013ರಲ್ಲಿ ಜಗದೀಶ್‌ ಶೆಟ್ಟರ್‌ ಬಗ್ಗೆ ಕೂಡ ಲಿಂಗಾಯತ ಸಮುದಾಯ ತುಂಬಾ ಒಲವೇನೂ ತೋರಲಿಲ್ಲ. ಬೊಮ್ಮಾಯಿ ಪುಸ್ತಕ ಪ್ರೀತಿ, ಜಾಣ್ಮೆಯ ಮಾತು ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವುದು ಮಧುಚಂದ್ರದ ಅವಧಿ​ಯವರೆಗೆ ಸರಿ. ಆದರೆ ದಿಲ್ಲಿ ನಾಯಕರು ಬೊಮ್ಮಾಯಿಗೆ ಅವಕಾಶ ಕೊಟ್ಟಿದ್ದು 2023ರಲ್ಲಿ ಎಲ್ಲಾ ಲಿಂಗಾಯತರನ್ನು ಏಕ ಛತ್ರ ಛಾಯೆಯಲ್ಲಿ ಉಳಿಸಿಕೊಳ್ಳಲು. ಅದು ಸಾಧ್ಯ ಆದರೆ ಮಾತ್ರ 2023ರಲ್ಲಿ ಬಿಜೆಪಿ ಮತ್ತು ಬೊಮ್ಮಾಯಿಗೆ ಅವಕಾಶ ಉಂಟು.

ಬೊಮ್ಮಾಯಿಗೆ ಪಂಚಮಸಾಲಿ ಬಿಸಿತುಪ್ಪ

ಕಳೆದ ಮಾಚ್‌ರ್‍ನಲ್ಲಿ ಪಂಚಮಸಾಲಿ ಸಮುದಾಯದ ಇಬ್ಬರು ಶ್ರೀಗಳು ಬೀದಿಗೆ ಇಳಿದು ಪ್ರತಿಭಟಿಸತೊಡಗಿದಾಗ ಈಗ ಮುಖ್ಯಮಂತ್ರಿ ಆಗಿರುವ ಬೊಮ್ಮಾಯಿ ಶ್ರೀಗಳ ಮತ್ತು ಯಡಿಯೂರಪ್ಪ ನಡುವೆ ಮಧ್ಯಸ್ಥಿಕೆ ವಹಿಸಿದ್ದರು. ಅಷ್ಟೇ ಅಲ್ಲ, ಕ್ಯಾಬಿನೆಟ್‌ ಸಭೆಯಲ್ಲೂ ಪಂಚಮಸಾಲಿಗಳಿಗೆ 2ಎ ಮೀಸಲಾತಿ ಕೊಡುವುದರ ಪರವಾಗಿ ಬಲವಾಗಿ ಮಾತನಾಡಿದ್ದರು. ಆದರೆ ಆಗ ಮರಾಠ ಮೀಸಲಾತಿ ಬಗ್ಗೆ ಸುಪ್ರೀಂಕæೂೕರ್ಟ್‌ ನೀಡಿದ ತೀರ್ಪಿನಿಂದ ಮೀಸಲಾತಿ ಅಂತಿಮ ಪಟ್ಟಿಅಂಗೀಕಾರ ಮಾಡುವ ಅಧಿಕಾರ ಕೇಂದ್ರ ಸರ್ಕಾರದ ಬಳಿ ಇತ್ತು. ಈಗ ಸಂಸತ್ತಿನ 127ನೇ ಸಂವಿಧಾನ ತಿದ್ದುಪಡಿ ಬಳಿಕ ಆ ಅಧಿಕಾರ ರಾಜ್ಯ ಸರ್ಕಾರದ ಬಳಿ ಬಂದಿದೆ. ಅಷ್ಟೇ ಅಲ್ಲ ಆಗ ಮಧ್ಯಸ್ಥಿಕೆ ಭೂಮಿಕೆಯಲ್ಲಿದ್ದ ಬೊಮ್ಮಾಯಿ ಈಗ ಸ್ವತಃ ಮುಖ್ಯಮಂತ್ರಿ ಆಗಿದ್ದಾರೆ. ಒಂದು ವೇಳೆ ಪಂಚಮಸಾಲಿ ಸಮುದಾಯವನ್ನು ವೋಟ್‌ ಬ್ಯಾಂಕ್‌ ದೃಷ್ಟಿಯಿಂದ ಬೊಮ್ಮಾಯಿ 2ಎಗೆ ಸೇರಿಸಿದರೆ ಕುರುಬರು ಎಸ್‌ಟಿಗೋಸ್ಕರ ಮತ್ತು 2ಎ ನಲ್ಲಿರುವ ಈಡಿಗ ಸೇರಿದಂತೆ ಉಳಿದ ಸಮುದಾಯಗಳು ಮುನಿಸಿಕೊಳ್ಳುವುದು ನಿಶ್ಚಿತ. ಈ ಅತಿಯಾದ ಜಾತಿ ರಾಜಕಾರಣ ಎರಡು ಅಲಗಿನ ಕತ್ತಿ ಇದ್ದ ಹಾಗೆ. ಒಮ್ಮೊಮ್ಮೆ ಇದು ಅಧಿ​ಕಾರದ ಜೊತೆಗೆ ದೊಡ್ಡ ತಲೆನೋವಿನ ಗುಡ್ಡೆಯನ್ನು ಹೊತ್ತು ತರುತ್ತದೆ. ಪಂಚಮಸಾಲಿ ಪ್ರತಿಭಟನೆಗೆ ಸಮುದಾಯದ ದೊಡ್ಡ ಬೆಂಬಲ ಸಿಕ್ಕು ವಿಕೋಪಕ್ಕೆ ಹೋದರೆ ಅದು ಬೊಮ್ಮಾಯಿ ಸಾಹೇಬರ ಮೊದಲ ಅಗ್ನಿ ಪರೀಕ್ಷೆ ಆಗಲಿದೆ.

ಎರಡು ಪೀಠಗಳು ಎರಡು ಕಡೆ

ಪಂಚಮಸಾಲಿ ಸಮುದಾಯಕ್ಕೆ ಎರಡು ಗುರು ಪೀಠಗಳಿವೆ. ಒಂದು ಹರಿಹರದ ಪೀಠ. ಇದಕ್ಕೆ ಯೋಗ ಗುರು ವಚನಾನಂದ ಜಗದ್ಗುರು. ಕೂಡಲಸಂಗಮ ಪೀಠಕ್ಕೆ ಜಯ ಮೃತ್ಯುಂಜಯ ಜಗದ್ಗುರು. ಕಳೆದ ಬಾರಿ ಜೊತೆಗೇ ಹೋರಾಟಕ್ಕೆ ಇಳಿದಿದ್ದ ಇಬ್ಬರು ಶ್ರೀಗಳಲ್ಲಿ ಜಯ ಮೃತ್ಯುಂಜಯರು ಅಕ್ಟೋಬರ್‌ನಿಂದ ಮರಳಿ ಪ್ರತಿಭಟನೆ ಆರಂಭಿಸಲು ಉತ್ಸುಕರಾಗಿದ್ದರೆ, ವಂಚನಾನಂದ ಶ್ರೀಗಳು ಕಾನೂನು ಮಾರ್ಗದ ಹೋರಾಟಕ್ಕೆ ಅಣಿ ಆಗುತ್ತಿದ್ದಾರೆ. ಕೆಲ ದಿನಗಳ ಹಿಂದೆ ಮುಖ್ಯಮಂತ್ರಿ ಬೊಮ್ಮಾಯಿ ಎದುರು ವಚನಾನಂದರು ಪಂಚಮಸಾಲಿ ಮೀಸಲಾತಿ ವಿಷಯ ಪ್ರಸ್ತಾಪಿಸಿದಾಗ ಬೊಮ್ಮಾಯಿ, ‘ಇವತ್ತು ಗಡಿಬಿಡಿ ಇದೆ, ಅದನ್ನು ಚರ್ಚಿಸಲು ಒಮ್ಮೆ ಪುರುಸೊತ್ತಿನಿಂದ ಬರುತ್ತೇನೆ’ ಎಂದು ಹೇಳಿ ಬಂದಿದ್ದಾರಂತೆ. ಪಂಚಮಸಾಲಿಗಳ ಹೋರಾಟದ ಬಗ್ಗೆ ಕಾಂಗ್ರೆಸ್‌ನ ಉತ್ತರ ಕರ್ನಾಟಕದ ನಾಯಕರಲ್ಲಿ ಭಾರಿ ಉತ್ಸಾಹವಿದೆ. ಮೀಸಲಾತಿ ಸಿಕ್ಕರೆ ಉಳಿದವರು ಮುನಿಸಿಕೊಳ್ಳುತ್ತಾರೆ, ಮೀಸಲಾತಿ ಸಿಗದೇ ಇದ್ದರೆ ಪಂಚಮಸಾಲಿಗಳ ಯುವಕರು ಬಿಜೆಪಿಯಿಂದ ಮಾನಸಿಕವಾಗಿ ದೂರ ಆಗುತ್ತಾರೆ. ಏನೇ ಆದರೂ ಕಾಂಗ್ರೆಸ್‌ಗೆ ಲಾಭ ಅನ್ನೋದು ಆಸೆಗಣ್ಣಿನಿಂದ ನೋಡುತ್ತಿರುವವರ ವಿಶ್ಲೇಷಣೆ.

ಜೋಶಿ ಮಗಳ ಮದುವೆಗೆ ಶಾ

ಸೆಪ್ಟೆಂಬರ್‌ 2ನೇ ತಾರೀಕು ಬಿಜೆಪಿಯ ದಿಲ್ಲಿ ನಾಯಕರ ದಂಡು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಪುತ್ರಿ ಅರ್ಪಿತಾಳ ಮದುವೆಯಲ್ಲಿ ಭಾಗವಹಿಸಲು ಹುಬ್ಬಳ್ಳಿಗೆ ತೆರಳಲಿದೆ. ಅಮಿತ್‌ ಶಾ, ನಿತಿನ್‌ ಗಡ್ಕರಿ, ರಾಜನಾಥ್‌ ಸಿಂಗ್‌, ಸ್ಪೀಕರ್‌ ಓಂ ಬಿರ್ಲಾ, ಪಿಯೂಷ್‌ ಗೋಯಲ್‌, ದೇವೇಂದ್ರ ಫಡ್ನವೀಸ್‌, ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಮದುವೆಯಲ್ಲಿ ಭಾಗವಹಿಸಲಿದ್ದಾರೆ. ಸೆಪ್ಟೆಂಬರ್‌ 7ಕ್ಕೆ ಜೋಶಿ ಪುತ್ರಿ ಆರತಕ್ಷತೆ ದಿಲ್ಲಿ ನಿವಾಸದಲ್ಲಿ ನಡೆಯಲಿದ್ದು, ಪ್ರಧಾನಿ ಮೋದಿ ಕೂಡ ಭಾಗವಹಿಸಲಿದ್ದಾರಂತೆ. ಮಕ್ಕಳ ಮದುವೆ ಅನ್ನುವುದು ರಾಜಕಾರಣಿಗಳ ಪೊಲಿಟಿಕಲ್‌ ಪವರ್‌ ಪ್ರದರ್ಶಿಸಲು ಒಳ್ಳೆಯ ಅವಕಾಶ. ಬಹುತೇಕ ಅಮಿತ್‌ ಶಾ ಕರ್ನಾಟಕಕ್ಕೆ ಯಾರದ್ದಾದರೂ ಮದುವೆಯಲ್ಲಿ ಪಾಲ್ಗೊಳ್ಳಲು ಬರುತ್ತಿರುವುದು ಇದೇ ಮೊದಲ ಬಾರಿ ಇರಬಹುದು.

Follow Us:
Download App:
  • android
  • ios