ನವದೆಹಲಿ(ನ.03): ದೈನಂದಿನ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ವಿಶ್ವ ದಾಖಲೆ ಬರೆದಿದ್ದ ಭಾರತ ಇದೀಗ ಆ ವ್ಯಾಧಿಯಿಂದ ಚೇತರಿಸಿಕೊಳ್ಳುವ ಹಾದಿಯಲ್ಲಿ ದಾಪುಗಾಲು ಇಡುತ್ತಿದೆ. ಕಳೆದ ಎರಡು ತಿಂಗಳ ಅವಧಿಯಲ್ಲಿ ಸಕ್ರಿಯ ಸೋಂಕಿತರ ಪ್ರಮಾಣ ಬರೋಬ್ಬರಿ ಶೇ.300ರಷ್ಟುಇಳಿಕೆಯಾಗಿದೆ ಎಂದು ಕೇಂದ್ರ ಸರ್ಕಾರದ ಅಂಕಿ-ಅಂಶಗಳು ಹೇಳುತ್ತವೆ.

ಕೆಲವೇ ದಿನಗಳ ಹಿಂದಿನವರೆಗೂ ದೇಶದ ಸೋಂಕಿತರ ಸಂಖ್ಯೆಗೆ ಭಾರಿ ಕೊಡುಗೆ ನೀಡುತ್ತಿದ್ದ ಕರ್ನಾಟಕ ಅಗಾಧ ಪ್ರಮಾಣದಲ್ಲಿ ಕೊರೋನಾಪೀಡಿತರು ಚೇತರಿಸಿಕೊಳ್ಳುತ್ತಿರುವ ಬೆಳವಣಿಗೆಗೂ ಸಾಕ್ಷಿಯಾಗಿದೆ ಎಂದು ಸರ್ಕಾರ ತಿಳಿಸಿದೆ.

ದೇಶದಲ್ಲಿ ಸೋಮವಾರ ಬೆಳಗ್ಗೆ 8ರವರೆಗಿನ 24 ತಾಸುಗಳ ಅವಧಿಯಲ್ಲಿ 53,285 ಮಂದಿ ಕೊರೋನಾದಿಂದ ಚೇತರಿಸಿಕೊಂಡಿದ್ದಾರೆ. ಇದರೊಂದಿಗೆ ವೈರಸ್‌ ಸೋಂಕು ಗೆದ್ದವರ ಒಟ್ಟಾರೆ ಸಂಖ್ಯೆ 75,44,798ಕ್ಕೇರಿದೆ. ಹೀಗಾಗಿ ಚೇತರಿಕೆ ಪ್ರಮಾಣ ಶೇ.91.68ಕ್ಕೆ ಹೆಚ್ಚಳವಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ ಕೇವಲ 5,61,908ರಷ್ಟಿದೆ. ಸತತ 4ನೇ ದಿನವೂ 6 ಲಕ್ಷಕ್ಕಿಂತ ಕಡಿಮೆ ಸಕ್ರಿಯ ಸೋಂಕಿತರು ಇದ್ದಾರೆ. ಈ ಪ್ರಮಾಣ ಒಟ್ಟಾರೆ ಸೋಂಕಿತರ ಸಂಖ್ಯೆಗೆ ಹೋಲಿಸಿದರೆ ಶೇ.6.83 ಮಾತ್ರ. ಸೆಪ್ಟೆಂಬರ್‌ನಲ್ಲಿ ಇದು ಶೇ.21.16ರಷ್ಟಿತ್ತು. ಅದಕ್ಕೆ ಹೋಲಿಸಿದರೆ ಎರಡೇ ತಿಂಗಳಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ ಶೇ.300ರಷ್ಟುಕಡಿಮೆಯಾಗಿದೆ ಎಂದು ಸರ್ಕಾರ ತಿಳಿಸಿದೆ.

ಕೊರೋನಾದಿಂದ ಚೇತರಿಸಿಕೊಳ್ಳುತ್ತಿರುವವರಲ್ಲಿ ಶೇ.78ರಷ್ಟುಮಂದಿ 10 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಕ್ಕೆ ಸೇರಿದವರಾಗಿದ್ದಾರೆ. ಕರ್ನಾಟಕ ಹಾಗೂ ಕೇರಳದಲ್ಲಿ ಸೋಮವಾರ 8 ಸಾವಿರಕ್ಕೂ ಅಧಿಕ ಮಂದಿ ಚೇತರಿಸಿಕೊಂಡಿದ್ದು, ಗುಣಮುಖರಾದವರ ಸಂಖ್ಯೆಗೆ ಭಾರಿ ಕೊಡುಗೆ ನೀಡಿವೆ ಎಂದು ಹೇಳಿದೆ.

ದೇಶದಲ್ಲಿ 45,231 ಮಂದಿಗೆ ಹೊಸದಾಗಿ ಸೋಂಕು ಕಾಣಿಸಿಕೊಂಡಿದೆ. ಈ ಪೈಕಿ ಶೇ.80ರಷ್ಟುಸೋಂಕು 10 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ ಬಂದಿದೆ. ಅದರಲ್ಲೂ ಕೇರಳ 7025 ಸೋಂಕಿನೊಂದಿಗೆ ಪ್ರಥಮ ಸ್ಥಾನದಲ್ಲಿದ್ದರೆ, ದೆಹಲಿ ಹಾಗೂ ಮಹಾರಾಷ್ಟ್ರದಲ್ಲಿ 5000ಕ್ಕೂ ಹೆಚ್ಚು ಪ್ರಕರಣಗಳು ಒಂದೇ ದಿನ ದಾಖಲಾಗಿವೆ. ದೇಶದಲ್ಲಿ ಒಟ್ಟಾರೆ 496 ಮಂದಿ ಸೋಮವಾರ ಸಾವಿಗೀಡಾಗಿದ್ದಾರೆ ಎಂದು ವಿವರಿಸಿದೆ.