ಸತತ 3ನೇ ದಿನ ಸೋಂಕಿತರ ಸಂಖ್ಯೆ ಇಳಿಕೆ| ನಿನ್ನೆ 3.57 ಲಕ್ಷ ಕೇಸ್‌, 3449 ಸಾವು| 2 ಕೋಟಿ ಗಡಿ ದಾಟಿದ ಸೋಂಕಿತರ ಸಂಖ್ಯೆ| 323 ದಿನ: ಮೊದಲ 1 ಕೋಟಿಗೆ ತೆಗೆದುಕೊಂಡ ಅವಧಿ| 137 ದಿನ: 1ರಿಂದ 2 ಕೋಟಿಗೇರಲು ತೆಗೆದುಕೊಂಡ ಸಮಯ

ನವದೆಹಲಿ(ಮೇ.05): ದೇಶದಲ್ಲಿ ಸತತ 3ನೇ ದಿನವೂ ಹೊಸ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ. ಮಂಗಳವಾರ ಬೆಳಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ 3,57,229 ಕೇಸ್‌ ಪತ್ತೆಯಾಗಿವೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 2.02 ಕೋಟಿಗೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಸೋಂಕಿನಿಂದ 3,449 ಮಂದಿ ಸಾವನ್ನಪ್ಪಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ2,22,408ಕ್ಕೆ ತಲುಪಿದೆ.

ಭಾರತದಲ್ಲಿ ಕಳೆದ ಡಿಸೆಂಬರ್‌ 19ರಂದು ಕೋವಿಡ್‌ ಸೋಂಕಿತರ ಸಂಖ್ಯೆ 1 ಕೋಟಿ ಗಡಿ ದಾಟಿತ್ತು. ಅನಂತರ ಏ.5ರ ವರೆಗೂ ಸೋಂಕಿತರ ಸಂಖ್ಯೆ 1.25 ಕೋಟಿ ಇತ್ತು. ಆದರೆ ಕೋವಿಡ್‌ 2ನೇ ಅಲೆಯಲ್ಲಿ ಕೇವಲ 15 ದಿನಗಳಲ್ಲಿ 50 ಲಕ್ಷ ಜನರಿಗೆ ಸೋಂಕು ತಗುಲಿದ ಪರಿಣಾಮ ಮಂಗಳವಾರ ಒಟ್ಟು ಪ್ರಕರಣ 2 ಕೋಟಿ ಗಡಿ ದಾಟಿದೆ.

ಕಳೆದ 2 ತಿಂಗಳಿಂದ ಸೋಂಕು ಆತಂಕಕಾರಿಯಾಗಿ ಹರಡುತ್ತಿರುವ ಪರಿಣಾಮ ದೇಶದ ಸಕ್ರಿಯ ಪ್ರಕರಣಗಳ ಸಂಖ್ಯೆ 34.47 ಲಕ್ಷಕ್ಕೆ ತಲುಪಿದೆ. ಚೇತರಿಕೆ ಪ್ರಮಾಣ ಶೇ.81.91ಕ್ಕೆ ಇಳಿಕೆಯಾಗಿದೆ. ಒಟ್ಟು ಸೋಂಕಿತರ ಪೈಕಿ 1.66ಕೋಟಿ ಮಂದಿ ಗುಣಮುಖರಾಗಿದ್ದಾರೆ.

2020 ಆ. 7ಕ್ಕೆ 20 ಲಕ್ಷ

2020 ಸೆ.16ಕ್ಕೆ 50 ಲಕ್ಷ

2020 ಡಿ.19ಕ್ಕೆ 1 ಕೋಟಿ

2021 ಏ.19ಕ್ಕೆ 1.50 ಕೋಟಿ

2021 ಮೇ 5ಕ್ಕೆ 2 ಕೋಟಿ

"

71% ಸೋಂಕು 10 ರಾಜ್ಯಗಳಲ್ಲಿ

ಹೊಸದಾಗಿ ಪತ್ತೆಯಾಗಿರುವ ಸೋಂಕಿನ ಪೈಕಿ ಶೇ.71.71ರಷ್ಟುಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಕೇವಲ 10 ರಾಜ್ಯಗಳಲ್ಲಿ ಪತ್ತೆಯಾಗಿದೆ. ದೆಹಲಿ, ಉತ್ತರಪ್ರದೇಶ,ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢ ಉಳಿದ ರಾಜ್ಯಗಳು. ಹಾಗೆಯೇ ಸಕ್ರಿಯ ಪ್ರಕರಣಗಳ ಪೈಕಿ ಶೇ.81.41ರಷ್ಟು ಕೇಸುಗಳು ಕೇವಲ 12 ರಾಜ್ಯಗಳಲ್ಲಿ ಇವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಹಾಗೆಯೇ ಮಂಗಳವಾರ ಸಾವನ್ನಪ್ಪಿದವರ ಪೈಕಿ ಶೇ.73.15ರಷ್ಟುಸಾವು ಕೇವಲ 10 ರಾಜ್ಯಗಳಲ್ಲಿ ಸಂಭವಿಸಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona