ನವದೆಹಲಿ(ನ.13): ಪೂರ್ವ ಲಡಾಖ್‌ ಬಿಕ್ಕಟ್ಟು ಇತ್ಯರ್ಥದ ನಿಟ್ಟಿನಲ್ಲಿ ಮೂರು ಹಂತದಲ್ಲಿ ಸಂಪೂರ್ಣ ಸೇನಾ ಹಿಂಪಡೆತಕ್ಕೆ ಸಮ್ಮತಿಸಿದ್ದ ಭಾರತ ಮತ್ತು ಚೀನಾ ಸೇನೆಗಳು, ಕಳೆದ ಏಪ್ರಿಲ್‌- ಮೇ ತಿಂಗಳ ನಂತರದಲ್ಲಿ ತಮ್ಮ ಪಹರೆ ವಲಯದಲ್ಲಿ ತಲೆ ಎತ್ತಿದ್ದ ಎಲ್ಲಾ ರಚನೆಗಳನ್ನು ಧ್ವಂಸಗೊಳಿಸಲು ನಿರ್ಧರಿಸಿವೆ.

ಪಹರೆಗೆ ನೆರವಾಗುವ ನಿಟ್ಟಿನಲ್ಲಿ ಮತ್ತು ಬಿಕ್ಕಟ್ಟು ಸುದೀರ್ಘವಾಗಿ ಮುಂದುವರೆದಲ್ಲಿ ಯಾವುದೇ ಪರಿಸ್ಥಿತಿ ಎದುರಿಸಲು ನೆರವಾಗುವಂತೆ ಉಭಯ ದೇಶಗಳು ಪ್ಯಾಂಗೋಂಗ್‌ ಸರೋವರದ ವ್ಯಾಪ್ತಿಯಲ್ಲಿ ಸಾಕಷ್ಟುನಿರ್ಮಾಣ ಚಟುವಟಿಕೆ ಕೈಗೊಂಡಿದ್ದವು.

ಆದರೆ ಸೇನಾ ಹಿಂಪಡೆತದ ಜೊತೆಗೆ ಪರಿಸ್ಥಿತಿಯನ್ನು ಇನ್ನಷ್ಟುನಿಯಂತ್ರಣಕ್ಕೆ ತರುವ ಸಲುವಾಗಿ ಈಗಾಗಲೇ ನಿರ್ಮಾಣಗೊಂಡಿದ್ದ ಕಟ್ಟಡ ಅಥವಾ ಯಾವುದೇ ರಚನೆಗಳನ್ನು ನಾಶಗೊಳಿಸಲು ಉಭಯ ದೇಶಗಳು ನಿರ್ಧರಿಸಿವೆ. ಜೊತೆಗೆ ಫಿಂಗರ್‌ 4ರಿಂದ ಫಿಂಗರ್‌ 8 ಪ್ರದೇಶಗಳಲ್ಲಿ ಯಾವುದೇ ಪಹರೆ ನಡೆಸದೆ ಇರಲು ಉಭಯ ದೇಶಗಳ ಸೇನೆ ನ.6ರಂದು ನಡೆದ ಮಾತುಕತೆ ವೇಳೆ ನಿರ್ಧರಿಸಿವೆ ಎಂದು ಮೂಲಗಳು ತಿಳಿಸಿವೆ.