ಗಲ್ವಾನ್ ಸಂಘರ್ಷಕ್ಕೆ ಭಾರತವೇ ಹೊಣೆ ಎಂದು ಪದೇಪದೇ ಹೇಳುತ್ತಿರುವ ಚೀನಾಕ್ಕೆ ತಿರುಗೇಟು ಕೊಟ್ಟಿರುವ ಭಾರತ, ಜೂ.15ರಂದು ಅಲ್ಲಿ ನಡೆದ ಎಲ್ಲ ಬೆಳವಣಿಗೆಗಳಿಗೆ ಚೀನಾ ದೇಶವೇ ಜವಾಬ್ದಾರ ಎಂದು ಬಿಸಿಮುಟ್ಟಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಜೂ.26): ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಭಾರತ, ಚೀನಾ ಸೈನಿಕರ ನಡುವಣ ಸಂಘರ್ಷ ಹಠಾತ್ ನಡೆದದ್ದಲ್ಲ, ಅದೊಂದು ಪೂರ್ವನಿಯೋಜಿತ ಕೃತ್ಯ ಎಂದು ಕೇಂದ್ರ ಸರ್ಕಾರ ಪರೋಕ್ಷವಾಗಿ ಹೇಳಿದೆ.
ಉಭಯ ದೇಶಗಳ ನಡುವಿರುವ ಎಲ್ಲ ಒಡಂಬಡಿಕೆ ಗಾಳಿಗೆ ತೂರಿ ನೈಜ ಗಡಿ ರೇಖೆ (ಎಲ್‌ಎಸಿ)ಗೆ ಮೇ ಆರಂಭದಿಂದಲೇ ಸೇನೆ ಹಾಗೂ ಶಸ್ತ್ರಾಸ್ತ್ರಗಳನ್ನು ಭಾರಿ ಪ್ರಮಾಣದಲ್ಲಿ ಚೀನಾ ಜಮಾವಣೆ ಮಾಡಿತ್ತು ಎಂದು ಹೇಳಿದೆ. ಇದೇ ವೇಳೆ, ಗಲ್ವಾನ್ ಘರ್ಷಣೆಗೆ ಸಂಬಂಧಿಸಿದ ಘಟನಾವಳಿಗಳನ್ನು ಇದೇ ಮೊದಲ ಬಾರಿಗೆ ಹಂಚಿಕೊಂಡಿದೆ.
ಗಲ್ವಾನ್ ಸಂಘರ್ಷಕ್ಕೆ ಭಾರತವೇ ಹೊಣೆ ಎಂದು ಪದೇಪದೇ ಹೇಳುತ್ತಿರುವ ಚೀನಾಕ್ಕೆ ತಿರುಗೇಟು ಕೊಟ್ಟಿರುವ ಭಾರತ, ಜೂ.15ರಂದು ಅಲ್ಲಿ ನಡೆದ ಎಲ್ಲ ಬೆಳವಣಿಗೆಗಳಿಗೆ ಚೀನಾ ದೇಶವೇ ಜವಾಬ್ದಾರ ಎಂದು ಬಿಸಿಮುಟ್ಟಿಸಿದೆ.
ಕುತಂತ್ರಿ ಚೀನಾಗೆ ಮೋದಿ ಟೈಂ ಬಾಂಬ್ ಫಿಕ್ಸ್..!
ಗಲ್ವಾನ್ ಕಣಿವೆಯಲ್ಲಿ ಭಾರತೀಯರ ಸಾಮಾನ್ಯ ಹಾಗೂ ಸಾಂಪ್ರದಾಯಿಕ ಗಸ್ತಿಗೆ ಚೀನಾ ಮೇ ಆರಂಭದಿಂದಲೇ ಅಡ್ಡಿಪಡಿಸಿತ್ತು. ಮೇ ಮಧ್ಯಭಾಗದ ವೇಳೆಗೆ ಗಡಿಯಲ್ಲಿನ ಯಥಾಸ್ಥಿತಿಯನ್ನೇ ಬದಲಿಸಲು ಹೊರಟಿತು. ಚೀನಾದ ಈ ವರ್ತನೆ ವಿರುದ್ಧ ರಾಜತಾಂತ್ರಿಕ ಹಾಗೂ ಮಿಲಿಟರಿ ಮಾರ್ಗಗಳ ಮೂಲಕ ನಾವು ಪ್ರತಿಭಟನೆ ದಾಖಲಿಸಿದೆವು. ಇಂತಹ ಬದಲಾವಣೆಯನ್ನು ನಾವು ಒಪ್ಪುವುದಿಲ್ಲ ಎಂದೂ ತಿಳಿಸಿದ್ದೆವು ಎಂದು ವಿದೇಶಾಂಗ ಇಲಾಖೆ ವಕ್ತಾರ ಅನುರಾಗ ಶ್ರೀವಾಸ್ತವ ಅವರು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.
ಗಡಿಯಿಂದೆ ಸೇನೆ ಹಿಂಪಡೆಯುವ ಸಂಬಂಧ ಜೂ.6ರಂದು ಉಭಯ ದೇಶಗಳ ಹಿರಿಯ ಮಿಲಿಟರಿ ಕಮಾಂಡರ್‌ಗಳ ನಡುವೆ ಮಾತುಕತೆ ನಡೆಯಿತು. ಗಡಿಯಲ್ಲಿನ ಯಥಾಸ್ಥಿತಿ ಬದಲಾವಣೆಗೆ ಕಾರಣವಾಗುವಂತಹ ಯಾವುದೇ ಕ್ರಮಗಳನ್ನು ಕೈಗೊಳ್ಳುವುದಿಲ್ಲ ಎಂಬ ತೀರ್ಮಾನಕ್ಕೆ ಎರಡೂ ದೇಶಗಳು ಬಂದವು. ಆದರೆ ಈ ನಿರ್ಧಾರವನ್ನು ಉಲ್ಲಂಘಿಸಿ ಚೀನಾ ಯೋಧರು ಗಲ್ವಾನ್‌ನಲ್ಲಿ ಟೆಂಟ್‌ಗಳನ್ನು ನಿರ್ಮಿಸಿದರು. ಇದನ್ನು ತಡೆದಾಗ ಜೂ.15ರಂದು ಚೀನಾ ಪಡೆಗಳು ಹಿಂಸಾಚಾರ ನಡೆಸಿ, ನಮ್ಮ ಯೋಧರ ಸಾವಿಗೆ ಕಾರಣವಾದವು. ಆ ಬಳಿಕ ಎರಡೂ ದೇಶಗಳು ಭಾರಿ ಪ್ರಮಾಣದಲ್ಲಿ ಸೇನಾ ಜಮಾವಣೆ ಮಾಡಿದವು ಎಂದು ವಿವರ ನೀಡಿದರು.
