4 ಲಕ್ಷ ಕೊರೋನಾ ಕೇಸ್‌: ಸಾರ್ವಕಾಲಿಕ ದಾಖಲೆ| ಮತ್ತೆ ಸೋಂಕಿನ ಸಾರ್ವಕಾಲಿಕ ದಾಖಲೆ| ಚೇತರಿಕೆ ಪ್ರಮಾಣ ಶೇ.81.99ಕ್ಕೆ ಕುಸಿತ| 73% ಸೋಂಕು 10 ರಾಜ್ಯಗಳಲ್ಲಿ

ನವದೆಹಲಿ(ಮೇ.01): ಭಾರತದಲ್ಲಿ ಕೊರೋನಾ ಆರ್ಭಟ ಭಾರೀ ಆತಂಕಕಾರಿ ಏರಿಕೆಯಾಗುತ್ತಿದ್ದು, ಶುಕ್ರವಾರ ಸೋಂಕು ಮತ್ತೊಂದು ದಾಖಲೆ ಸೃಷ್ಟಿಸಿದೆ. ಶುಕ್ರವಾರ ತಡರಾತ್ರಿಯವರೆಗೆ ಒಂದೇ ದಿನ 4 ಲಕ್ಷ ಸೋಂಕು ಪ್ರಕರಣಗಳು ದಾಖಲಾಗಿವೆ.

ಶುಕ್ರವಾರ ಬೆಳಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ ದಾಖಲೆಯ 3,86,452 ಹೊಸ ಪ್ರಕರಣಗಳು ಪತ್ತೆಯಾಗಿದ್ದವು. ಇದೇ ವೇಳೆ 3,498 ಸಾವು ಸಂಭವಿಸಿದ್ದವು. ಬಳಿಕ ತಡರಾತ್ರಿವರೆಗೆ 4 ಲಕ್ಷ ಪ್ರಕರಣಗಳು ವರದಿಯಾಗಿದೆ ಎಂದು ‘ಎಡೆಲ್ವೀಸ್‌’ ಸಂಸ್ಥೆ ವರದಿ ಮಾಡಿದೆ.

"

ಶುಕ್ರವಾರ ಬೆಳಗ್ಗಿನವರೆಗಿನ ಅಂಕಿ ಅಂಶದ ಪ್ರಕಾರ, ದೇಶದ ಸಕ್ರಿಯ ಪ್ರಕರಣಗಳ ಸಂಖ್ಯೆ 31.70 ಲಕ್ಷಕ್ಕೆ ತಲುಪಿದೆ. ಚೇತರಿಕೆ ಪ್ರಮಾಣ ಶೇ.81.99ಕ್ಕೆ ಕುಸಿತ ಕಂಡಿದೆ. ಒಟ್ಟು ಸೋಂಕಿತರ ಸಂಖ್ಯೆ 1.87 ಕೋಟಿಗೆ ತಲುಪಿದ್ದು, ಒಟ್ಟು ಸಾವಿಗೀಡಾದವರ ಸಂಖ್ಯೆ 2,08,330ಕ್ಕೆ ಏರಿಕೆಯಾಗಿದೆ. ಒಟ್ಟು ಸೋಂಕಿತರ ಪೈಕಿ 1.53 ಕೋಟಿ ಮಂದಿ ಗುಣಮುಖರಾಗಿದ್ದಾರೆ.

"

73% ಸೋಂಕು 10 ರಾಜ್ಯಗಳಲ್ಲಿ:

ಶುಕ್ರವಾರ ಬೆಳಗ್ಗಿನವರೆಗೆ ಪತ್ತೆಯಾಗಿರುವ ಹೊಸ ಸೋಂಕಿನ ಪೈಕಿ ಶೇ.73.05ರಷ್ಟುಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ಕೇವಲ 10 ರಾಜ್ಯಗಳಲ್ಲಿ ದೃಢಪಟ್ಟಿದೆ. ಉತ್ತರ ಪ್ರದೇಶ, ದೆಹಲಿ, ಕೇರಳ, ಛತ್ತೀಸ್‌ಗಢ, ಪಶ್ಚಿಮ ಬಂಗಾಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ರಾಜಸ್ಥಾನ ಉಳಿದ ರಾಜ್ಯಗಳು. ಇನ್ನು ದೇಶದ ಸಕ್ರಿಯ ಕೇಸುಗಳ ಪೈಕಿ ಶೇ.78.18ರಷ್ಟುಕೇವಲ 11 ರಾಜ್ಯಗಳಲ್ಲಿ ಇವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಹಾಗೆಯೇ ಶುಕ್ರವಾರ ಸೋಂಕಿಗೆ ಬಲಿಯಾದವರ ಪೈಕಿ ಶೇ.77.44ರಷ್ಟುಸಾವು 10 ರಾಜ್ಯಗಳಲ್ಲಿ ಸಂಭವಿಸಿದೆ. ಮಹಾರಾಷ್ಟ್ರವೊಂದರಲ್ಲಿಯೇ 771 ಮೃತಪಟ್ಟಿದ್ದಾರೆ. ಉಳಿದಂತೆ ದೆಹಲಿಯಲ್ಲಿ 395, ಉತ್ತರ ಪ್ರದೇಶದಲ್ಲಿ 270, ಕರ್ನಾಟಕದಲ್ಲಿ 270, ಛತ್ತೀಸ್‌ಗಢದಲ್ಲಿ 251, ಗುಜರಾತ್‌ನಲ್ಲಿ 180, ರಾಜಸ್ಥಾನದಲ್ಲಿ 158ಮಂದಿ ಅಸುನೀಗಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona