* ಹಂತಹಂತವಾಗಿ ಶಾಲೆ ಆರಂಭಿಸಿ* ಮೊದಲು ಪ್ರಾಥಮಿಕ ಶಾಲೆ ತೆರೆಯಿರಿ: ಐಸಿಎಂಆರ್ ಸಲಹೆ
ನವದೆಹಲಿ(ಸೆ.29): ಭಾರತದಲ್ಲಿ(India) ಶಾಲೆಗಳನ್ನು ಪ್ರಾಥಮಿಕ ಹಂತದಿಂದ ಆರಂಭಿಸಿ ಹಂತಹಂತವಾಗಿ ಆರಂಭಿಸಬೇಕು. ಪ್ರಾಥಮಿಕ ಶಾಲೆಗಳ(Primary School) ಮೂಲಕ ಈ ತೆರೆಯುವ ಪ್ರಕ್ರಿಯೆ ಆರಂಭವಾಗಬೇಕು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ICMR) ಹೇಳಿದೆ.
‘ದ ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್’ನಲ್ಲಿ ಈ ಕುರಿತು ಲೇಖನವೊಂದನ್ನು ಪ್ರಕಟಿಸಿರುವ ಐಸಿಎಂಆರ್(ICMR), ‘ಹಂತಹಂತವಾಗಿ ಶಾಲೆ(School) ತೆರೆಯಬೇಕು. ಆದರೆ ಇದಕ್ಕೂ ಮುನ್ನ ಕೋವಿಡ್(Covid 19) ತಡೆಗೆ ಹಲವು ಸ್ತರಗಳ ರಕ್ಷಣಾ ಕ್ರಮಗಳನ್ನು ಜಾರಿಗೊಳಿಸಬೇಕು. ಶಿಕ್ಷಕರು, ಸಿಬ್ಬಂದಿ ಲಸಿಕೆ ಪಡೆದಿರುವುದನ್ನು ಖಾತರಿಪಡಿಸಿಕೊಳ್ಳಬೇಕು. ಎಷ್ಟು ಸಾಧ್ಯವೋ ಅಷ್ಟು ಬೇಗ ಕೋವಿಡ್ ಪೂರ್ವ ಸ್ಥಿತಿಗೆ ಶಾಲೆಗಳ ಪುನಾರಂಭ ದೇಶದ ಆಧ್ಯತೆಯಾಗಬೇಕು.
ಆದರೆ ಇಂಥ ನಿರ್ಧಾರವನ್ನು ಪ್ರತ್ಯೇಕ ರಾಜ್ಯ, ಜಿಲ್ಲಾವಾರು ಕೋವಿಡ್ ಪರಿಸ್ಥಿತಿ ಆಧರಿತವಾಗಿರಬೇಕು. ಅಲ್ಲಿನ ದತ್ತಾಂಶಗಳನ್ನು ಆಧರಿಸಿ ತೆಗೆದುಕೊಳ್ಳಬೇಕು. ಮೊದಲೆರಡು ಅಲೆಗಳಿಂದ ಉಂಟಾಗಿದ್ದ ತೊಂದರೆಗಳನ್ನು ಪರಿಶೀಲಿಸಬೇಕು. ಜೊತೆಗೆ 3ನೇ ಅಲೆ ಸಂಭವನೀಯತೆಯನ್ನೂ ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ ಎಂದು ಹೇಳಿದೆ.
ಕೋವಿಡ್‌ನಿಂದ ವಯಸ್ಕರು ಅನುಭವಿಸಿದ ತೊಂದರೆಗಳು 1-17 ವರ್ಷದ ಮಕ್ಕಳಲ್ಲೂ ಕಾಣಿಸಿಕೊಂಡಿದೆ. ಆದರೆ ವಯಸ್ಕರಿಗೆ ಹೋಲಿಸಿದರೆ ಇದರ ಪ್ರಮಾಣ ಕಡಿಮೆ ಇದೆ. ಶಾಲೆಗಳನ್ನು ಆರಂಭಿಸಲು ಶಾಲಾ ಸಿಬ್ಬಂದಿಗಳು ಶಿಕ್ಷಕರು ಹಾಗೂ ಶಾಲಾ ವಾಹನಗಳ ಸಿಬ್ಬಂದಿಗಳು ಆದಷ್ಟು ಬೇಗ ಲಸಿಕೆ ಪಡೆಯಬೇಕಾದ ಅನಿವಾರ್ಯತೆ ಇದೆ.
ವಿಶ್ವಸಂಸ್ಥೆಯಲ್ಲಿ ಮಾತನಾಡಿದ ಮೋದಿ 12 ವರ್ಷ ಮೇಲ್ಪಟ್ಟಎಲ್ಲರಿಗೂ ನೀಡಬಹುದಾದ ಲಸಿಕೆಯನ್ನು ಭಾರತ ತಯಾರಿಸಿದೆ. ಹಾಗಾಗಿ ಶೀಘ್ರವೇ ಶಾಲೆಗಳನ್ನು ಆರಂಭಿಸಲಾಗುತ್ತದೆ. 5 ವರ್ಷಕ್ಕಿಂತ ಚಿಕ್ಕ ಮಕ್ಕಳು ಮಾಸ್ಕ್ ಧರಿಸುವುದು ಕಡ್ಡಾಯವಲ್ಲ ಆದರೆ 6 ವರ್ಷಕ್ಕಿಂತ ಮೇಲ್ಪಟ್ಟಮಕ್ಕಳು ಮಾಸ್ಕ್ ಧರಿಸಿ ಶಾಲೆಗೆ ಬರುವುದು ಕಡ್ಡಾಯ ಎಂದು ಐಸಿಎಂಆರ್ ಹೇಳಿದೆ.
