ಲಖನೌ (ಆ.28): ಕರ್ನಾಟಕ ಕೇಡರ್‌ ಐಎಎಸ್‌ ಅಧಿಕಾರಿ ಅನುರಾಗ್‌ ತಿವಾರಿ ಅವರ ಅನುಮಾನಾಸ್ಪದ ಸಾವಿನ ಪ್ರಕರಣದ ತನಿಖೆಯನ್ನು ಸಮಾಪ್ತಿಗೊಳಿಸುವ ಕುರಿತಂತೆ ಸಲ್ಲಿಸಿದ್ದ ಅರ್ಜಿಯನ್ನು ಸಿಬಿಐ ವಿಶೇಷ ನ್ಯಾಯಾಲಯ ತಿರಸ್ಕರಿಸಿದ್ದು, ತನಿಖೆಯನ್ನು ಮುಂದುವರಿಸುವಂತೆ ಸೂಚಿಸಿದೆ. 

ಪ್ರಕರಣದ ತನಿಖೆಯನ್ನು ಸಿಬಿಐ ಕೊನೆಗೊಳಿಸುತ್ತಿರುವುದನ್ನು ಪ್ರತಿಭಟಿಸಿ ಸಹೋದರ ಮಾಯಾಂಕ್‌ ತಿವಾರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ತನಿಖೆಯನ್ನು ಮುಂದುವರಿಸುವಂತೆ ವಿಶೇಷ ನ್ಯಾಯಾಧೀಶ ಸುಬ್ರತ್‌ ಪಾಠಕ್‌ ಆದೇಶಿಸಿದ್ದು, ಸೆ.30ರ ಒಳಗಾಗಿ ವರದಿ ಸಲ್ಲಿಸುವಂತೆ ತನಿಖಾ ತಂಡಕ್ಕೆ ಸೂಚಿಸಿದ್ದಾರೆ. 

ಸುಶಾಂತ್ ಸಾವಿನ ತನಿಖೆಗೆ ಬಂದ IPS ಅಧಿಕಾರಿಯನ್ನು ವಾಪಸ್ ಕಳಿಸಿದ ಬಿಎಂಸಿ...

ಸಾವಿಗೀಡಾದ ಅಧಿಕಾರಿ ದೊಡ್ಡ ಹಗರಣವನ್ನು ಬಯಲಿಗೆ ಎಳೆಯಲು ಹೊರಟಿದ್ದರು ಎಂಬುದರ ಬಗ್ಗೆ ಆಗಲಿ, ಅವರಿಗೆ ಹಿರಿಯ ಅಧಿಕಾರಿಗಳು ಒತ್ತಡ ಹೇರಿದ ಅಥವಾ ಜೀವ ಬೆದರಿಕೆ ಇದ್ದ ಬಗ್ಗೆ ಸೂಕ್ತ ಸಾಕ್ಷ್ಯಾಧಾರಗಳು ಲಭ್ಯವಾಗದ ಹಿನ್ನೆಲೆಯಲ್ಲಿ ಸಿಬಿಐ ಪ್ರಕರಣದ ಸಮಾಪ್ತಿಗೆ ಕೋರಿಕೊಂಡಿತ್ತು.

ಉತ್ತರ ಪ್ರದೇಶದ ಲಖನೌನ ಅತಿಥಿ ಗೃಹವೊಂದರಲ್ಲಿ ಉಳಿದುಕೊಂಡಿದ್ದ ಅನುರಾಗ್‌ ತಿವಾರಿ 2017 ಮೇ 17ರಂದು ಸಾವಿಗೀಡಾಗಿದ್ದರು. ಅತಿಥಿ ಗೃಹದ ಸಮೀಪವೇ ಅನುಮಾನಾಸ್ಪದ ರೀತಿಯಲ್ಲಿ ಮೃತದೇಹ ಪತ್ತೆ ಆಗಿತ್ತು.