ದಾಳಿಗೆ ಬಂದ ಪಾಕ್‌ ವಿಮಾನಗಳನ್ನು ಅಟ್ಟಾಡಿಸಿದ ವಾಯುಪಡೆ!| ಸೇಡು ತೀರಿಸಿಕೊಳ್ಳಲು 24 ಯುದ್ಧ ವಿಮಾನ ಕಳುಹಿಸಿದ್ದ ಪಾಕಿಸ್ತಾನ| ವಾಯುಪಡೆಯ ಕೇವಲ 8 ವಿಮಾನಗಳಿಂದ ಪ್ರತಿದಾಳಿ| ಭಾರತದ ದಾಳಿಗೆ ಬೆದರಿ ಕಾಲ್ಕಿತ್ತ ಪಾಕ್‌ ವಿಮಾನಗಳು| ಆದರೂ ಬಿಡದೇ ಬೆನ್ನತ್ತಿ ಹೋದ ಅಭಿನಂದನ್‌| ರೋಚಕ ಕಾರ್ಯಾಚರಣೆಯ ಸಂಪೂರ್ಣ ವಿವರ

ನವದೆಹಲಿ[ಮಾ.01]: ಬಾಲಾಕೋಟ್‌ ಮೇಲೆ ದಾಳಿ ನಡೆಸಿದ ಭಾರತೀಯ ಸೇನಾಪಡೆಗಳ ಮೇಲೆ ಸೇಡು ತೀರಿಸಿಕೊಳ್ಳಲು ದಂಡೆತ್ತಿ ಬಂದಿದ್ದ ಪಾಕಿಸ್ತಾನಿ ಯುದ್ಧ ವಿಮಾನಗಳ ಸಂಖ್ಯೆ ಕೇವಲ 3 ಅಲ್ಲ. ಬರೋಬ್ಬರಿ 24! ಆದರೆ ಇಷ್ಟೂವಿಮಾನಗಳನ್ನು ಭಾರತೀಯ ವಾಯುಪಡೆಯ ಕೇವಲ 8 ವಿಮಾನಗಳು ಹಿಮ್ಮೆಟ್ಟಿಸಿದ್ದವು ಎಂಬ ರೋಚಕ ಮಾಹಿತಿ ಬೆಳಕಿಗೆ ಬಂದಿದೆ.

ಒಂದು ವಿಮಾನವನ್ನು ಸದ್ಯ ಪಾಕ್‌ ವಶದಲ್ಲಿರುವ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ತಮಾನ್‌ ಅವರು ಅಕ್ಷರಶಃ ಅಟ್ಟಾಡಿಸಿಕೊಂಡು ಹೋಗಿದ್ದರು. ಆದರೆ ಈ ಕಾರ್ಯಾಚರಣೆ ವೇಳೆ ಪಾಕಿಸ್ತಾನಿ ವಿಮಾನದಿಂದ ನುಗ್ಗಿಬಂದ ಕ್ಷಿಪಣಿಯಿಂದ ಅವರ ವಿಮಾನ ಪತನಗೊಂಡಿತು ಎಂದು ಮೂಲಗಳು ತಿಳಿಸಿವೆ.

ಹೀಗಿತ್ತು ಕಾರ್ಯಾಚರಣೆ:

ಬಾಲಾಕೋಟ್‌ ದಾಳಿ ಬಳಿಕ ಆಕ್ರೋಶದಿಂದ ಕುದಿಯುತ್ತಿದ್ದ ಪಾಕಿಸ್ತಾನವು ಭಾರತದ ಮಿಲಿಟರಿ ನೆಲೆಗಳ ಮೇಲೆ ದಾಳಿಗೆ ಸಂಚು ರೂಪಿಸಿತ್ತು. ಇದನ್ನು ಸಾಕಾರಗೊಳಿಸಲು ಪಾಕಿಸ್ತಾನದಿಂದ 8 ಎಫ್‌-16, 4 ಮಿರಾಜ್‌-3, 4 ಚೀನಾ ನಿರ್ಮಿತ ಜೆಎಫ್‌-17 ಥಂಡರ್‌ ವಿಮಾನಗಳು ಭಾರತದತ್ತ ಹೊರಟವು. ಕೆಲವೇ ಕೆಲವು ವಿಮಾನಗಳು ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ದಾಟಿ, ಭಾರತೀಯ ಸೇನಾ ನೆಲೆಗಳ ಮೇಲೆ ದಾಳಿ ನಡೆಸುವುದು. ಉಳಿದ ವಿಮಾನಗಳು ಎಲ್‌ಒಸಿ ಆಚೆ ನಿಂತು, ವಾಯುಪಡೆಯಿಂದ ಪ್ರತಿ ದಾಳಿ ಎದುರಾದರೆ ಹಿಮ್ಮೆಟ್ಟಿಸುವುದು ಯೋಜನೆಯಾಗಿತ್ತು.

ಆದರೆ ಗಡಿ ನಿಯಂತ್ರಣ ರೇಖೆಯಿಂದ ಆಚೆ 10 ಕಿ.ಮೀ. ದೂರದಲ್ಲಿರುವಾಗಲೇ ಪಾಕ್‌ ವಿಮಾನಗಳ ಪಡೆ ಬರುತ್ತಿರುವುದು (ಆಗ ಸಮಯ ಬೆಳಗ್ಗೆ 9.45) ಭಾರತೀಯ ವಾಯುಪಡೆಗೆ ಗೊತ್ತಾಗಿಹೋಯಿತು. ಕೂಡಲೇ 4 ಸುಖೋಯ್‌, 2 ಮಿರಾಜ್‌, 2 ಮಿಗ್‌ 21 ಬೈಸನ್‌ ಸೇರಿ ಒಟ್ಟು 8 ಭಾರತೀಯ ಸಮರ ವಿಮಾನಗಳು ಪ್ರತಿದಾಳಿಗೆ ಸಜ್ಜಾದವು. ಅಷ್ಟರಲ್ಲಿ ಪಾಕಿಸ್ತಾನದ ಕೆಲವು ವಿಮಾನಗಳು ಗಡಿ ನಿಯಂತ್ರಣ ರೇಖೆ ಪ್ರವೇಶಿಸಿದ್ದವು. ಆಗ ಆರಂಭವಾಯಿತು ಘೋರ ಕದನ.

ಭಾರತದ ದಾಳಿಗೆ ಬೆಚ್ಚಿದ ಪಾಕಿಸ್ತಾನಿ ವಿಮಾನಗಳು ವಾಪಸ್‌ ಪರಾರಿಯಾಗಲು ಆರಂಭಿಸಿದವು. ಆ ವಿಮಾನಗಳನ್ನು ಭಾರತೀಯ ಪೈಲಟ್‌ಗಳು ಬೆನ್ನಟ್ಟಿದರು. ಹೀಗೆ ವಾಪಸ್‌ ಹೋಗುವಾಗ ಮಿಲಿಟರಿ ನೆಲೆ ಮೇಲೆ ದಾಳಿಗೆಂದು ತಂದಿದ್ದ ಲೇಸರ್‌ ಗೈಡೆಡ್‌ ಬಾಂಬ್‌ ಅನ್ನು ಪಾಕಿಸ್ತಾನ ವಿಮಾನಗಳು ಎಸೆದು ಹೋದವು.

ಆ ವೇಳೆ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ತಮಾನ್‌ ಅವರು ಪಾಕಿಸ್ತಾನದ ಎಫ್‌-16 ವಿಮಾನವೊಂದನ್ನು ಬೆನ್ನತ್ತಿದರು. ಗಡಿ ನಿಯಂತ್ರಣ ರೇಖೆಯಿಂದಾಚೆ ಪಾಕಿಸ್ತಾನ ವಿಮಾನಗಳ ದಂಡೇ ಇದೆ ಎಂದು ಇತರ ವಿಮಾನಗಳ ಪೈಲಟ್‌ಗಳು ಹೇಳಿದರೂ, ಕೇಳುವ ಸ್ಥಿತಿಯಲ್ಲಿ ಅಭಿನಂದನ್‌ ಇರಲಿಲ್ಲ. ಪಾಕಿಸ್ತಾನ ವಿಮಾನ ಹೊಡೆದುರುಳಿಸುವ ಛಲದೊಂದಿಗೆ ನುಗ್ಗಿದರು.

ಆರ್‌-73 ಎಂಬ ಕ್ಷಿಪಣಿಯನ್ನು ಪಾಕ್‌ ವಿಮಾನದತ್ತ ಪ್ರಯೋಗಿಸಿದರು. ಆದರೆ ಪಾಕಿಸ್ತಾನದ ಎಫ್‌-16 ವಿಮಾನವೊಂದು ‘ಅಮ್ರಾಮ್‌’ ಎಂಬ ಕ್ಷಿಪಣಿಯಿಂದ ದಾಳಿ ನಡೆಸಿತು. ಅದು ಅಭಿನಂದನ್‌ ಅವರಿದ್ದ ಮಿಗ್‌-21 ಬೈಸನ್‌ ವಿಮಾನದ ರೆಕ್ಕೆಗೆ ಬಡಿಯಿತು. ವಿಮಾನ ಪತನಗೊಳ್ಳಲು ಆರಂಭಿಸಿದ್ದರಿಂದ ಅಭಿನಂದನ್‌ ಎಜೆಕ್ಟ್ ಆದರು ಎಂದು ಮೂಲಗಳು ತಿಳಿಸಿವೆ.