ನವದೆಹಲಿ(ನ.30): ವಿದೇಶದಲ್ಲಿ ಸಿಲುಕಿದ್ದ 50 ಮಂದಿ ಕೊರೋನಾಪೀಡಿತ ಭಾರತೀಯ ವಿಜ್ಞಾನಿಗಳನ್ನು ಯಶಸ್ವಿ ಕಾರ್ಯಾಚರಣೆ ನಡೆಸುವ ಮೂಲಕ ವಾಯುಪಡೆ ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತಂದಿದೆ. ಇವರೆಲ್ಲ ಮಧ್ಯ ಏಷ್ಯಾದ ದೇಶವೊಂದರಲ್ಲಿ ಅತಂತ್ರರಾಗಿದ್ದರು ಎಂದು ಮೂಲಗಳು ತಿಳಿಸಿದ್ದು, ಆ ದೇಶದ ಹೆಸರನ್ನು ಬಹಿರಂಗಪಡಿಸಿಲ್ಲ.

ಮಧ್ಯ ಏಷ್ಯಾದ ದೇಶವೊಂದರಲ್ಲಿ ಸಂಶೋಧನೆ ನಡೆಸುತ್ತಿದ್ದ ಒಂದೇ ತಂಡದ ಈ ವಿಜ್ಞಾನಿಗಳೆಲ್ಲರಿಗೂ ಕೆಲ ದಿನಗಳ ಹಿಂದೆ ಕೊರೋನಾ ತಗಲಿತ್ತು. ಆದರೆ ಆ ದೇಶದಲ್ಲಿ ಕೊರೋನಾ ಸೋಂಕು ತೀವ್ರವಾಗಿ ಹರಡುತ್ತಿರುವುದರಿಂದ ಮತ್ತು ಅಲ್ಲಿನ ಆರೋಗ್ಯ ವ್ಯವಸ್ಥೆ ದಕ್ಷವಾಗಿ ಇಲ್ಲದಿರುವುದರಿಂದ ಈ ವಿಜ್ಞಾನಿಗಳಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿರಲಿಲ್ಲ. ಹೀಗಾಗಿ ತಮ್ಮನ್ನು ಭಾರತಕ್ಕೆ ಕರೆದೊಯ್ಯುವಂತೆ ಇವರು ಆ ದೇಶದಲ್ಲಿದ್ದ ಭಾರತೀಯ ದೂತಾವಾಸವನ್ನು ಕೇಳಿಕೊಂಡಿದ್ದರು. ಅದರಂತೆ ಭಾರತೀಯ ವಾಯುಪಡೆಯು ಸಿ-17 ಗ್ಲೋಬ್‌ಮಾಸ್ಟರ್‌ ಭಾರಿ ಸರಕು ಸಾಗಣೆ ವಿಮಾನವನ್ನು 19 ಗಂಟೆಗಳ ಕಾಲ ಹಾರಿಸಿ ಆ ದೇಶದಿಂದ ವಿಜ್ಞಾನಿಗಳನ್ನು ದಕ್ಷಿಣ ಭಾರತದ ನಗರವೊಂದಕ್ಕೆ ಕರೆತಂದಿದೆ ಎಂದು ಮೂಲಗಳು ಹೇಳಿರುವುದಾಗಿ ಕೆಲ ಮಾಧ್ಯಮಗಳು ವರದಿ ಮಾಡಿವೆ.

ಯಾವ ದೇಶದಲ್ಲಿ ಸಿಲುಕಿದ್ದರು?:

ಮಧ್ಯ ಏಷ್ಯಾದಲ್ಲಿ ಖಜಕ್‌ಸ್ತಾನ, ಕಿರ್ಗಿಸ್ತಾನ, ತುರ್ಕ್ಮೆನಿಸ್ತಾನ, ಉಜ್ಬೆಕಿಸ್ತಾನ ಮತ್ತು ತಜಿಕಿಸ್ತಾನ ದೇಶಗಳು ಬರುತ್ತವೆ. ಈ ವಿಜ್ಞಾನಿಗಳು ಯಾವ ದೇಶದಲ್ಲಿ ಸಿಲುಕಿದ್ದರು ಎಂಬುದು ತಿಳಿದುಬಂದಿಲ್ಲ.

ಕೊರೋನಾ ಅವಧಿಯಲ್ಲಿ ತುರ್ತು ಕಾರ್ಯಾಚರಣೆಗೆ ಬೇಕಾಗುತ್ತದೆ ಎಂಬ ಉದ್ದೇಶದಿಂದಲೇ ಗ್ಲೋಬ್‌ಮಾಸ್ಟರ್‌ ವಿಮಾನವನ್ನು ಈ ಹಿಂದೆ ವೈದ್ಯಕೀಯ ಅಗತ್ಯಗಳಿಗೆ ಪೂರಕವಾಗಿ ಸಜ್ಜುಗೊಳಿಸಲಾಗಿತ್ತು. ಆ ದೇಶದ ದೂತಾವಾಸದಿಂದ ಸಂದೇಶ ಬಂದ ತಕ್ಷಣ ವಾಯುಪಡೆಯ ಪೈಲಟ್‌ಗಳು ದೆಹಲಿಯ ಸಮೀಪದ ವಾಯುನೆಲೆಯಿಂದ ಇದನ್ನು ಸತತ 9 ತಾಸು ಹಾರಿಸಿ ಅಲ್ಲಿಗೆ ತೆರಳಿದರು. ಅಲ್ಲಿನ ವಿಮಾನನಿಲ್ದಾಣದಲ್ಲಿ 2 ತಾಸು ವಿರಾಮ ನೀಡಿ, ವಿಜ್ಞಾನಿಗಳನ್ನು ಕರೆದುಕೊಂಡು ದಕ್ಷಿಣ ಭಾರತಕ್ಕೆ ಆಗಮಿಸಿದರು. ಸಂತ್ರಸ್ತ ವಿಜ್ಞಾನಿಗಳಲ್ಲಿ ಕೆಲವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಮಧ್ಯ ಏಷ್ಯಾದ ಆ ಗಣರಾಜ್ಯದ ಜೊತೆಗೆ ಭಾರತಕ್ಕೆ ಹತ್ತಿರದ ಸಂಬಂಧಗಳಿವೆ. ಎತ್ತರ ಪ್ರದೇಶದಲ್ಲಿನ ಕೃಷಿ ಸೇರಿದಂತೆ ಹಲವು ವಿಷಯಗಳಲ್ಲಿ ಉಭಯ ದೇಶಗಳ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ.