ನವದೆಹಲಿ[ಪೆ.27]: ಭಾರತದ ಯುದ್ಧವಿಮಾನಗಳು ತನ್ನ ದೇಶದ ಭಯೋತ್ಪಾದಕ ಶಿಬಿರಗಳ ಮೇಲೆ ಬಾಂಬ್‌ ದಾಳಿ ನಡೆಸುತ್ತಿದ್ದುದನ್ನು ತಡೆಯಲು ಆರಂಭದಲ್ಲಿ ಪಾಕಿಸ್ತಾನ ಮುಂದಾಗಿತ್ತು. ಅದಕ್ಕಾಗಿ ಎಫ್‌-16 ಯುದ್ಧವಿಮಾನಗಳನ್ನು ಸಿದ್ಧಪಡಿಸಿತ್ತು ಕೂಡ. ಆದರೆ, ಭಾರತದ 12 ಮಿರಾಜ್‌ ಯುದ್ಧವಿಮಾನಗಳು ಒಟ್ಟಾಗಿ ನಡೆಸುತ್ತಿದ್ದ ದಾಳಿಯ ತೀವ್ರತೆಯನ್ನು ನೋಡಿ ಹಿಂದೆ ಸರಿಯಿತು ಎಂದು ಮೂಲಗಳು ತಿಳಿಸಿವೆ.

ಬೆಳಗಿನ ಜಾವ 3.30ಕ್ಕೆ ಭಾರತದ ಯುದ್ಧವಿಮಾನಗಳು ದಾಳಿ ನಡೆಸಲು ಆಗಮಿಸಿದಾಗ ಪಾಕಿಸ್ತಾನ ತನ್ನ ಎಫ್‌-16 ಮೂಲಕ ಅದನ್ನು ತಡೆಯಲು ಯತ್ನಿಸಿತ್ತು. ಆದರೆ, ಭಾರತದ ದಾಳಿ ದೊಡ್ಡ ಪ್ರಮಾಣದಲ್ಲಿ ಇದ್ದುದರಿಂದ ಪಾಕ್‌ ತೆಪ್ಪಗಾಯಿತು ಎನ್ನಲಾಗಿದೆ.

ದಾಳಿಯ ನಂತರ ತರಾತುರಿಯಲ್ಲಿ ಸಭೆ ಕರೆದ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್‌ ಖುರೇಷಿ, ಪಾಕಿಸ್ತಾನದ ಮೇಲೆ ಅಪಾಯದ ಕಾರ್ಮೋಡ ಕವಿದಿದೆ. ಆದರೆ, ಭಾರತದ ದಾಳಿಗೆ ಪಾಕಿಸ್ತಾನ ಹೆದರಿಕೊಳ್ಳಬಾರದು. ನಾನು ಜನರನ್ನು ದಾರಿತಪ್ಪಿಸಲು ಬಯಸುವುದಿಲ್ಲ. ಅಪಾಯದ ಕಾರ್ಮೋಡಗಳು ಕವಿವಿದಿರುವುದರಿಂದ ನಾವು ಎಚ್ಚರಿಕೆಯಿಂದಿರಬೇಕಿದೆ ಎಂದು ಹೇಳಿದರು ಎಂದು ಸಮಾ ಟೀವಿ ವರದಿ ಮಾಡಿದೆ.