ಬೆಂಗಳೂರು :  ಇದು ಪಾಕಿ​ಸ್ತಾ​ನದ ಮೇಲೆ ಭಾರ​ತೀಯ ವಾಯುಸೇನೆ ತನ್ನ ಇತಿ​ಹಾ​ಸ​ದಲ್ಲಿ ಮೊಟ್ಟಮೊದಲ ಬಾರಿ ನಡೆಸಿದ ಏರ್‌ ಸರ್ಜಿ​ಕಲ್‌ ದಾಳಿ.  ಭಾರತವು ಅತ್ಯುತ್ತಮ ಯೋಜನೆ ರೂಪಿಸಿ ಉಗ್ರರ ಕ್ಯಾಂಪ್‌ ಮೇಲೆ ಮಾತ್ರವೇ ದಾಳಿ ನಡೆಸಿ ಅಮೋಘ ಗೆಲುವು ಪಡೆದಿದೆ. ಈಗ ಗಾಯಗೊಂಡ ಪಾಕಿ​ಗಳು ಪ್ರತಿ ದಾಳಿ ನಡೆ​ಸು​ವುದು ಖಚಿತ. ಆದರೆ ಅವರು ಪ್ರತೀಕಾರಕ್ಕಾಗಿ ಸೇನೆ ಬಳ​ಸು​ವು​ದಿಲ್ಲ. ಬದ​ಲಾಗಿ ಉಗ್ರ​ರನ್ನು ಬಳಸಿ ಗಡಿ ಹಾಗೂ ದೇಶದ ಸಾರ್ವ​ಜ​ನಿಕ ಸ್ಥಳ​ಗಳ ಮೇಲೆ ದಾಳಿ ನಡೆ​ಸುವ ಸಾಧ್ಯ​ತೆಯೇ ಹೆಚ್ಚು. ಹೀಗಾಗಿ ದೇಶಾದ್ಯಂತ ಕಟ್ಟೆಚ್ಚರ ವಹಿಸುವುದು ಅಗತ್ಯ.

- ಇದು 1965ರಲ್ಲಿ ನಡೆದ ಇಂಡೋ-ಪಾಕ್‌ ಯುದ್ಧದಲ್ಲಿ ಪಾಕಿಸ್ತಾನದ ಸೇನಾ ನೆಲೆಯ ಮೇಲೆ ಯಶಸ್ವಿಯಾಗಿ ಬಾಂಬ್‌ ಎಸೆದು ಬಂದಿದ್ದ ಫೈಟರ್‌ ಜೆಟ್‌ ಪೈಲಟ್‌ ಫಿಲಿಪ್‌ ರಾಜ್‌ಕುಮಾರ್‌ ಅಭಿಪ್ರಾಯ. ಫಿಲಿಪ್‌ ಅವರು 1965ರ ಯುದ್ಧದಲ್ಲಿ ಮಿಸ್ಟಿಯರ್‌ - 4ಎ ಫೈಟರ್‌ ಜೆಟ್‌ನ ಪೈಲಟ್‌ ಆಗಿ ಪಾಕಿಸ್ತಾನಕ್ಕೆ ನಿದ್ದೆಗೆಡಿಸಿದವರು, ನಿವೃತ್ತ ಏರ್‌ ಮಾರ್ಷಲ್‌. ಖ್ಯಾತ ರಕ್ಷಣಾ ತಜ್ಞರು ಹಾಗೂ ‘ದ ಸ್ಟೋರಿ ಆಫ್‌ ತೇಜಸ್‌’ ಕೃತಿಯ ಕರ್ತೃವೂ ಆಗಿರುವ ಫಿಲಿಪ್‌ ರಾಜ್‌ಕುಮಾರ್‌ ಭಯೋತ್ಪಾದಕರ ನೆಲೆಗಳ ಮೇಲೆ ಭಾರತ ನಡೆಸಿದ ದಾಳಿ ಹಾಗೂ ಅದರ ಪ್ರತಿಫಲಗಳ ಬಗ್ಗೆ ‘ಕನ್ನಡಪ್ರಭ’ ಜತೆ ಮಾತನಾಡಿದ್ದಾರೆ.

ವಾಯುಸೇನೆ ಏರ್‌ ಸರ್ಜಿ​ಕಲ್‌ ದಾಳಿಯನ್ನು ಈ ಹಿಂದೆ ನಡೆ​ಸಿದ್ದು ಇದೆ​ಯೇ?

ಇಲ್ಲ. ಇದೇ ಮೊದಲ ಬಾರಿಗೆ ಸರ್ಜಿಕಲ್‌ ಸ್ಟೆ್ರೖಕ್‌ಗೆ ಭಾರತೀಯ ವಾಯುಸೇನೆ ಬಳಸಿಕೊಳ್ಳಲಾಗಿದೆ. ಯುದ್ಧ ವಿರಾಮದ ಸ್ಥಿತಿಯಲ್ಲಿ ನಡೆದ ದಾಳಿಯಲ್ಲಿ ಇದೇ ಮೊದಲ ಬಾರಿಗೆ ಐಎಎಫ್‌ ಬಳಸಿಕೊಂಡಿದ್ದಾರೆ.

ಈ ಸರ್ಜಿಕಲ್‌ ದಾಳಿಯ ತೀವ್ರತೆ ಹೇಗಿತ್ತು?

ದಾಳಿ ಮಾಡಿರುವುದು ಹಾಗೂ ಸಾಕಷ್ಟುಜನ ಉಗ್ರರು ಹತರಾಗಿರುವುದು ಕೇಂದ್ರದ ಹೇಳಿಕೆಯಿಂದ ತಿಳಿದುಬಂದಿದೆ. ಆದರೆ, ಇದನ್ನು ಸಮರ್ಥಿಸಿಕೊಳ್ಳಲು ಅಗತ್ಯ ದಾಖಲೆಗಳಿಗಾಗಿ ಕಾಯಬೇಕು. ಉಗ್ರರು ಹತರಾಗಿರುವ ಬಗ್ಗೆ ಕೆಲವು ಛಾಯಾಚಿತ್ರದ ಸಾಕ್ಷ್ಯಗಳು ದೊರೆಯುವವರೆಗೂ ಏನೂ ಹೇಳಲಾಗದು. ಸ್ಯಾಟಲೈಟ್‌ ಅಥವಾ ಬೇರೆ ಮೂಲಗಳಿಂದ ಸಾಕ್ಷ್ಯ ಸಂಗ್ರಹಿಸುವ ಕೆಲಸ ನಡೆದಿರುತ್ತದೆ. ಮುಂದಿನ 24 ಗಂಟೆಗಳಲ್ಲಿ ಮತ್ತಷ್ಟುಹೆಚ್ಚು ಮಾಹಿತಿ ದೊರೆಯಬಹುದು.

ಭಾರ​ತೀಯ ವಾಯುಸೇನೆಯ ಈ ದಾಳಿಯ ಸಿದ್ಧತೆ ಸಮ​ರ್ಪ​ಕ​ವಾ​ಗಿ​ತ್ತೆ?

ಪುಲ್ವಾಮಾದ ಟೆರರಿಸ್ಟ್‌ ದಾಳಿ ಬಳಿಕ ತೀರಾ ಅನಿವಾರ್ಯವಾಗಿದ್ದ ಪ್ರತೀಕಾರದ ದಾಳಿ ಸಂಘಟಿಸಲು ಭಾರತೀಯ ವಾಯುಸೇನೆ ಯಶಸ್ವಿಯಾಗಿದೆ. ಭಾರತ ಸರ್ಕಾರದ ಚಾಣಾಕ್ಷ ನಡೆ ಎಂದರೆ ಕೇವಲ ಉಗ್ರರ ಕ್ಯಾಂಪ್‌ ಮೇಲೆ ಮಾತ್ರ ದಾಳಿ ಮಾಡಿರುವುದು. ದಾಳಿಯಲ್ಲಿ ನಾಗರಿಕರು ಹಾಗೂ ಪಾಕಿಸ್ತಾನಿ ಸೇನೆಗೆ ಹಾನಿ ಮಾಡಿಲ್ಲ. ಇದು ಭಾರತ ಎಷ್ಟರ ಮಟ್ಟಿಗೆ ಪೂರ್ವ ಸಿದ್ಧತೆ ಮಾಡಿಕೊಂಡಿತ್ತು ಎಂಬುದಕ್ಕೆ ನಿದರ್ಶನ.

ಪಾಕಿಸ್ತಾನದ ಮುಂದಿನ ನಡೆ ಏನಿರಬಹುದು?

ಭಾರತವು ಪಾಕಿಸ್ತಾನದ ಸೇನೆ ಅಥವಾ ನಾಗರಿಕರ ಮೇಲೆ ದಾಳಿ ನಡೆಸಿಲ್ಲ. ಬದಲಿಗೆ ಉ್ರಗರ ಕ್ಯಾಂಪ್‌ಗಳ ಮೇಲೆ ದಾಳಿ ನಡೆಸಿದೆ. ತಾನು ಉಗ್ರರನ್ನು ಪೋಷಿಸುತ್ತಿಲ್ಲ ಎನ್ನುತ್ತಿದ್ದ ಪಾಕಿಸ್ತಾನಕ್ಕೆ ಇದು ಹಿನ್ನಡೆ ಉಂಟುಮಾಡಿದೆ. ಹೀಗಾಗಿ ಪಾಕಿಸ್ತಾನವು ಭಾರತದ ಮೇಲೆ ಸೇನಾ ದಾಳಿಯ ಮೂಲಕ ಪ್ರತೀಕಾರ ತೀರಿಸಿಕೊಳ್ಳುವುದು ಕಷ್ಟ. ಏಕೆಂದರೆ ನಮ್ಮಲ್ಲಿ ಟೆರರಿಸ್ಟ್‌ ಕ್ಯಾಂಪ್‌ಗಳು ಇಲ್ಲ. ಹೀಗಾಗಿ ಪ್ರತೀಕಾರ ತೀರಿಸಿಕೊಳ್ಳಲು ಭಾರತೀಯ ಸೇನೆ ಅಥವಾ ನಾಗರಿಕರ ಮೇಲೆ ದಾಳಿ ಮಾಡಬಹುದು. ಇದಕ್ಕೂ ಎಂದಿನಂತೆ ಟೆರರಿಸ್ಟ್‌ಗಳನ್ನೇ ಪಾಕಿಸ್ತಾನ ಬಳಸಿಕೊಳ್ಳಬಹುದು. ಇದು ಆತಂಕ ಹೆಚ್ಚಾಗಲು ಕಾರಣವಾಗಿದ್ದು, ಜನನಿಬಿಡ ಸ್ಥಳಗಳಾದ ವಿಮಾನನಿಲ್ದಾಣ, ರೈಲ್ವೆ ಹಾಗೂ ಬಸ್‌ ನಿಲ್ದಾಣದಂತಹ ಸ್ಥಳಗಳಲ್ಲಿ ಸೂಕ್ತ ಭದ್ರತೆ ಒದಗಿಸಬೇಕು. ಗಡಿ ಭಾಗದಲ್ಲೂ ಸೂಕ್ತ ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ.

ಪಾಕಿಸ್ತಾನ ಸೇನಾ​ದಾಳಿ ನಡೆ​ಸು​ವು​ದಿ​ಲ್ಲ​ವೇ?

ಪಾಕಿ​ಸ್ತಾನ ದಾಳಿ ನಡೆ​ಸು​ತ್ತದೆ. ಆದರೆ, ಅದು ಸೇನಾ​ದಾ​ಳಿಯೇ ಆಗಿ​ರು​ತ್ತದೆ ಎನ್ನಲು ಸಾಧ್ಯ​ವಿಲ್ಲ. ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಶಾಂತಿ ಬಯಸುವುದಾಗಿ ಹೇಳುತ್ತಾರೆ. ಅದು ನಿಜವೂ ಇರಬಹುದು. ಏಕೆಂದರೆ, ಅವರಿಗೆ ಭಾರತದಲ್ಲಿ ಸಾಕಷ್ಟುಸಂಪರ್ಕಗಳಿವೆ. ಆದರೆ, ರಾಜಕೀಯ ಒತ್ತಡ ಹಾಗೂ ಸೇನೆಯಿಂದ ಅವರಿಗೆ ಪ್ರತೀಕಾರಕ್ಕೆ ಒತ್ತಡ ಇದೆ. ಆದರೂ, ಸೇನಾ​ದಾ​ಳಿಗೆ ಪಾಕಿ​ಸ್ತಾನ ಮುಂದಾ​ಗುವ ಸಾಧ್ಯತೆ ಕಡಿ​ಮೆ. ಬದ​ಲಾಗಿ ಉಗ್ರ​ರನ್ನ ಬಳ​ಸಿ​ಕೊಂಡು ದಾಳಿ​ಗ​ಳನ್ನು ಮಾಡ​ಬ​ಹು​ದು.

ಜಾಗ​ತಿ​ಕ​ವಾಗಿ ಈ ದಾಳಿಯ ಪರಿ​ಣಾಮ​ವೇ​ನಾ​ಗ​ಬ​ಹು​ದು?

ದಾಳಿಯ ಹೊರತಾಗಿಯೂ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಬೆಂಬಲ ಸಿಗಲಿದೆ. ಚೀನಾ ಕೂಡ ಶಾಂತಿ ಬಗ್ಗೆ ಮಾತನಾಡುತ್ತಿದೆ. ಹೀಗಾಗಿ ಈ ದಾಳಿ ವಿಷಯದಲ್ಲಿ ಪಾಕಿಸ್ತಾನಕ್ಕೆ ಯಾವುದೇ ಬೆಂಬಲ ದೊರೆಯದೆ ಏಕಾಂಗಿಯಾಗಲಿದೆ. ಜತೆಗೆ ಪಾಕಿಸ್ತಾನ ಈವರೆಗೂ ಉಗ್ರರರನ್ನು ಪೋಷಿಸುತ್ತಿಲ್ಲ ಎಂದು ಹೇಳುತ್ತಿದ್ದದ್ದು ಸುಳ್ಳೆಂದು ಸಾಬೀತಾಗಲಿದೆ. ಈ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಟೀಕೆಗೆ ಒಳಗಾಗಲಿದೆ. ಆದರೆ, ಇದನ್ನು ಸಾಬೀತುಪಡಿಸಲು ಭಾರತಕ್ಕೆ ಸಾಕ್ಷ್ಯಾಧಾರ ಕಲೆ ಹಾಕುವುದು ಸೇರಿದಂತೆ ಕೆಲವು ಸವಾಲುಗಳಿವೆ.

ನಿಮ್ಮ ಅವಧಿಯ ಯುದ್ದಕ್ಕೂ ಈ ಸರ್ಜಿಕಲ್‌ ದಾಳಿಗೂ ವ್ಯತ್ಯಾಸವೇನು?

ನಾನು 1965ರ ಸೆ.1ರಿಂದ ಶುರುವಾದ ಪಾಕಿಸ್ತಾನ-ಭಾರತ ಯುದ್ಧದಲ್ಲಿ ಭಾಗವಹಿಸಿದ್ದವನು. 1965 ಸೆ.7ರಂದು ಪಾಕಿಸ್ತಾನದ ಸೇನಾ ನೆಲೆ ಮೇಲೆ ದಾಳಿ ನಡೆಸಲು 12 ಯುದ್ಧ ವಿಮಾನಗಳ ತಂಡವನ್ನು ಕಳುಹಿಸಿಕೊಟ್ಟಿದ್ದರು. ಆದರೆ, ನಮ್ಮಲ್ಲಿ ಏಳು ಯುದ್ಧ ವಿಮಾನ ಮಾತ್ರ ಪಾಕಿಸ್ತಾನ ಬೇಸ್‌ಗೆ ಹೋಗಲು ಸಾಧ್ಯವಾಗಿತ್ತು. ಉಳಿದ ಎಲ್ಲಾ ವಿಮಾನಗಳು ನೇವಿಗೇಷನ್‌ ಸಮಸ್ಯೆ ಮತ್ತಿರ ಸಮಸ್ಯೆಗಳಿಂದ ವಾಪಸಾಗಿದ್ದವು. 24 ವರ್ಷದ ಯುವಕನಾಗಿದ್ದ ನಾನು ತೀವ್ರ ಭದ್ರತೆ ಹೊಂದಿದ್ದ ಪಾಕಿಸ್ತಾನದ ಬೇಸ್‌ಗೆ ಹೋಗಿ ಬಾಂಬ್‌ ಎಸೆದಿದ್ದೆ. ಈ ವೇಳೆ 3 ಸಾಬರ್‌ ಹಾಗೂ 1 ಸ್ಟಾರ್‌ ಯುದ್ಧ ವಿಮಾನ ನಾಶವಾಗಿತ್ತಾದರೂ ಪಾಕಿಸ್ತಾನ ಒಂದೇ ಸಾಬರ್‌ ವಿಮಾನ ನಾಶವಾಗಿರುವುದಾಗಿ ಹೇಳಿಕೊಂಡಿತ್ತು. ಆದರೆ, ಈಗ ಜಿಪಿಸ್‌ ಹಾಗೂ ರೆಡಾರ್‌ ವ್ಯವಸ್ಥೆ ತುಂಬಾ ಸುಧಾರಿಸಿದೆ. ಹೀಗಾಗಿ ನಿಖರವಾಗಿ ದಾಳಿ ಮಾಡುವುದು ಸಲೀಸಾಗಿದೆ. ಭಾರತವು ಸಹ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡೇ ಉಗ್ರರ ಕ್ಯಾಂಪ್‌ ಮೇಲೆ ದಾಳಿ ನಡೆಸಿದೆ.

ವರದಿ :  ಶ್ರೀಕಾಂತ್‌ ಎನ್‌.​ಗೌ​ಡ​ಸಂದ್ರ