ನೋವಿನ ಪ್ರತಿಫಲ ಕಾಣಲಿರುವ ದೀದಿ: ಶಾ ವ್ಯಂಗ್ಯ| ನಿಮ್ಮ ಕಾಲಿಗಾದ ಗಾಯ ಬೇಗ ಗುಣಮುಖವಾಗಲಿ| ಬಿಜೆಪಿ ಕಾರ‍್ಯಕರ್ತರ ಸಾವಿನ ನೋವು ನಿಮಗೆ ಗೊತ್ತಾ?| ಈ ಚುನಾವಣೆ ಫಲಿತಾಂಶದಲ್ಲಿ ನೋವಿನ ಪ್ರತಿಫಲ ಕಾಣಲಿದ್ದೀರಿ
ರಾಣಿಬಂಧ್ (ಮಾ.16): ‘ಇತ್ತೀಚೆಗಷ್ಟೇ ಕಾಲಿಗೆ ಗಾಯ ಮಾಡಿಕೊಂಡಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶೀಘ್ರ ಗುಣಮುಖರಾಗಲಿ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಆಶಿಸಿದ್ದಾರೆ. ಆದರೆ ತಮ್ಮದೇ ನೇತೃತ್ವದ ಟಿಎಂಸಿ ಸರ್ಕಾರದ ದುರಾಡಳಿತದಲ್ಲಿ ಸಾವು-ನೋವು ಕಂಡ ಬಿಜೆಪಿ ಕಾರ‍್ಯಕರ್ತರ ಕುಟುಂಬದ ನೋವಿನ ಬಗ್ಗೆ ತಮಗೆ ಅರಿವಿದೆಯೇ’ ಎಂದು ಮಮತಾಗೆ ಶಾ ಪ್ರಶ್ನಿಸಿದ್ದಾರೆ.
ಸೋಮವಾರ ಬಂಕುರಾ ಜಿಲ್ಲೆಯ ರಾಣಿಬಂಧ್ನಲ್ಲಿ ನಡೆದ ಬಿಜೆಪಿ ರಾರಯಲಿಯನ್ನುದ್ದೇಶಿಸಿ ಮಾತನಾಡಿದ ಶಾ, ‘ದೀದಿ(ಬ್ಯಾನರ್ಜಿ) ನಿಮ್ಮ ಕಾಲಿಗೆ ಗಾಯವಾದಾಗ ಅದರ ನೋವು ನಿಮಗೆ ಗೊತ್ತಾಯಿತು. ನೀವು ಬೇಗ ಗುಣಮುಖರಾಗಲಿ ಎಂದು ಆಸೆಪಡುತ್ತೇನೆ. ಆದರೆ ಟಿಎಂಸಿ ಗೂಂಡಾಗಳಿಂದ ಹತ್ಯೆಗೀಡಾದ 130 ಬಿಜೆಪಿ ಕಾರ‍್ಯಕರ್ತರ ಅಮ್ಮಂದಿರ ನೋವಿನ ಬಗ್ಗೆ ನೀವು ಎಂದಾದರೂ ಯೋಚಿಸಿದ್ದೀರಾ? ಖಂಡಿತಾ ಇಲ್ಲ. ಈ ಚುನಾವಣೆಯಲ್ಲಿ ಆ ನೋವಿನ ಪ್ರತಿಫಲವನ್ನು ನೀವು ಕಾಣಲಿದ್ದೀರಿ’ ಎಂದು ಗುಡುಗಿದರು.
‘ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚನೆಯಾದರೆ ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ಜಾರಿ ಮಾಡಲಾಗುತ್ತದೆ’ ಎಂದು ಭರವಸೆ ನೀಡಿದರು.
