ನವದೆಹಲಿ(ಜ.31): ತಾನು ಅಭಿವೃದ್ಧಿಪಡಿಸಿರುವ ಕೊರೋನಾ ಲಸಿಕೆ ‘ಕೋವಿಶೀಲ್ಡ್‌’ ವಿತರಣೆ ಆರಂಭವಾದ ಬೆನ್ನಲ್ಲೇ, ಇನ್ನೊಂದು ಕೊರೋನಾ ಲಸಿಕೆ ಬಿಡುಗಡೆಗೆ ಪುಣೆಯ ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ ಸಜ್ಜಾಗಿದೆ.

ಅಮೆರಿಕ ಔಷಧ ತಯಾರಿಕಾ ಕಂಪನಿ ನೋವಾವ್ಯಾಕ್ಸ್‌ ಅಭಿವೃದ್ಧಿಪಡಿಸಿರುವ, ಈಗಾಗಲೇ ಬ್ರಿಟನ್‌ನಲ್ಲಿ 3ನೇ ಹಂತದ ಪ್ರಯೋಗಕ್ಕೆ ಒಳಪಟ್ಟು ಶೇ.89.3ರಷ್ಟುಪರಿಣಾಮಕಾರಿ ಎನಿಸಿರುವ ಕೋವಿಡ್‌ ಲಸಿಕೆಯನ್ನು ಭಾರತದಲ್ಲಿ ಪ್ರಯೋಗಕ್ಕೆ ಒಳಪಡಿಸಲು ಭಾರತ ಔಷಧ ನಿಯಂತ್ರಣ ಪ್ರಾಧಿಕಾರ (ಡಿಸಿಜಿಐ )ದ ಬಳಿ ಸೀರಂ ಅನುಮತಿ ಕೇಳಿದೆ. ಒಂದು ವೇಳೆ ಅನುಮತಿ ದೊರೆತರೆ ‘ಕೋವೋವ್ಯಾಕ್ಸ್‌’ ಹೆಸರಿನಲ್ಲಿ ನೋವಾವ್ಯಾಕ್ಸ್‌ ಲಸಿಕೆಯನ್ನು ಜೂನ್‌ ವೇಳೆಗೆ ಭಾರತದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಸೀರಂ ಸಿಇಒ ಅದರ್‌ ಪೂನಾವಾಲಾ ಶನಿವಾರ ಘೋಷಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಪೂನಾವಾಲಾ, ‘ಬ್ರಿಟನ್‌ನಲ್ಲಿ ಪ್ರಯೋಗಕ್ಕೆ ಒಳಪಟ್ಟಿರುವ ನೋವಾವ್ಯಾಕ್ಸ್‌ ಕೋವಿಡ್‌ ಲಸಿಕೆ 89.3ರಷ್ಟುಪರಿಣಾಮಕಾರಿಯಾಗಿದೆ ಎಂಬ ಫಲಿತಾಂಶ ಲಭ್ಯವಾಗಿದೆ. ಭಾರತದಲ್ಲಿ ಲಸಿಕೆಯ ಪ್ರಯೋಗಕ್ಕೆ ಮನವಿ ಮಾಡಿದ್ದೇವೆ. ಜೂನ್‌ ವೇಳೆಗೆ ಲಸಿಕೆ ಬಿಡುಗಡೆಯಾಗುವ ಸಾಧ್ಯತೆ ಇದೆ. ಒಂದು ವೇಳೆ ಲಸಿಕೆ ವಿತರಣೆಗೆ ಅನುಮೋದನೆ ದೊರೆತರೆ ಇದು ಭಾರತದ ಮೂರನೇ ಕೊರೋನಾ ಲಸಿಕೆ ಎಂಬ ಹಿರಿಮೆಗೆ ಪಾತ್ರವಾಗಲಿದೆ’ ಎಂದಿದ್ದಾರೆ.

ಭಾರತದಲ್ಲಿ ಈಗಾಗಲೇ ಸೀರಂ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್‌ ಮತ್ತು ಭಾರತ್‌ ಬಯೋಟೆಕ್‌ ಅಭಿವೃದ್ಧಿ ಪಡಿಸಿರುವ ಕೋವ್ಯಾಕ್ಸಿನ್‌ ಲಸಿಕೆಯನ್ನು ಜ.16ರಿಂದ ದೇಶಾದ್ಯಂತ ವಿತರಿಸಲಾಗುತ್ತಿದೆ.