* ಫೋಟೋ ಪೋಸ್ಟ್‌ ಮಾಡಿ ಒಂದೇ ತಾಸಲ್ಲಿ ವೈದ್ಯೆ ಬಲಿ* ಹೊಸ ಕ್ಯಾಮೆರಾ, ಫೋನ್‌ ಖರೀದಿಸಿ ಹಿಮಾಚಲ ಪ್ರವಾಸ* ಪ್ರವಾಸದ ಸಂಭ್ರಮದಲ್ಲಿದ್ದಾಗಲೇ ಭೂಕುಸಿತಕ್ಕೆ ಬಲಿ* ಆಕೆಯ ಟ್ವೀಟ್‌ಗೆ ಸಾವಿನ ಬಳಿಕ ಭಾರೀ ಮೆಚ್ಚುಗೆ

ಜೈಪುರ(ಜು.28): ಒಬ್ಬಂಟಿ ಪ್ರವಾಸಕ್ಕಾಗಿಯೇ ಹೊಸ ಡಿಎಸ್‌ಎಲ್‌ಆರ್‌ ಕ್ಯಾಮೆರಾ ಮತ್ತು ಹೊಸ ಮೊಬೈಲ್‌ ಫೋನ್‌ಗಳನ್ನು ಖರೀದಿಸಿ ಅದರಂತೆ ಹಿಮಾಚಲ ಪ್ರದೇಶಕ್ಕೆ ಪ್ರವಾಸ ಕೈಗೊಂಡಿದ್ದ ರಾಜಸ್ಥಾನದ ಆಯುರ್ವೇದದ ವೈದ್ಯೆ ಬದುಕು ದುರಂತ ಅಂತ್ಯ ಕಂಡಿದೆ.

ಹಿಮಾಚಲ ಪ್ರದೇಶದ ಕಿನ್ನೌರ್‌ನಲ್ಲಿ ಭಾನುವಾರ ಸಂಭವಿಸಿದ ಭೂಕುಸಿತದ ಪರಿಣಾಮ ಜೈಪುರದ ಆಯುರ್ವೇದದ ವೈದ್ಯೆಯಾದ ದೀಪಾ ಶರ್ಮಾ(34) ಸೇರಿದಂತೆ ಇತರ 8 ಪ್ರವಾಸಿಗರು ಸಾವಿಗೀಡಾಗಿದ್ದರು. ಆದರೆ ಸಾವಿಗೂ ಮುನ್ನ ಅವರು ಇಂಡೋ-ಟಿಬೆಟನ್‌ ಬಾರ್ಡರ್‌ ಪೊಲೀಸ್‌ ಪಡೆಯ ಫಲಕದ ಮುಂದೆ ನಿಂತು ಹಿಡಿದ ಫೋಟೋ ಜೊತೆಗೆ ಮಾಡಿದ ಪೋಸ್ಟ್‌ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿತ್ತು. ಆದರೆ ಈ ಫೋಟೋ ಪೋಸ್ಟ್‌ ಮಾಡಿದ ಒಂದೇ ತಾಸಿನಲ್ಲಿ ಆಕೆ ಭೂಕುಸಿದಲ್ಲಿ ಸಾವನ್ನಪ್ಪಿದ್ದಾರೆ.

ಈ ಪೋಸ್ಟ್‌ನಲ್ಲಿ ದೀಪಾ ಶರ್ಮಾ ಅವರು, ‘ನಾನು ಐಎಎಸ್‌ ಅಥವಾ ಐಪಿಎಸ್‌, ಐಐಎಂ ಅಲ್ಲ, ಐವಿ ಲೀಗ್‌ ಶಾಲೆಯಿಂದ ತೇರ್ಗಡೆಯಾದವಳು ಅಲ್ಲ. ಜೊತೆಗೆ ಖ್ಯಾತನಾಮಳು ಅಥವಾ ರಾಜಕೀಯ ನಾಯಕಿಯೂ ಅಲ್ಲ. ಆದರೆ ಮುಂದಿನ ಕೆಲ ವರ್ಷಗಳಲ್ಲಿ ನಾನು ನನ್ನ ಕೆಲಸದ ಮುಖಾಂತರ ಈ ದೇಶಕ್ಕೆ ಸಲ್ಲಿಸುವ ಕೊಡುಗೆಯಿಂದಾಗಿ ಇಡೀ ಜನ ನನ್ನನ್ನು ಗುರುತಿಸುತ್ತಾರೆ ಎಂಬ ಭರವಸೆಯಿದೆ’ ಎಂದು ಹಾಕಿದ್ದರು. ಈ ಪೋಸ್ಟ್‌ಗೆ 22 ಸಾವಿರಕ್ಕೂ ಹೆಚ್ಚು ಮಂದಿ ಉತ್ತರಿಸಿದ್ದಾರೆ.

Scroll to load tweet…

ಜೊತೆಗೆ ಈ ಬಗ್ಗೆ ಟ್ವೀಟ್‌ ಮಾಡಿದ ಬಾಲಿವುಡ್‌ ನಟಿ ಕಂಗನಾ ರಣಾವತ್‌, ನಾನು ದೀಪಾ ಶರ್ಮಾರನ್ನು ಒಂದಕ್ಕಿಂತ ಹೆಚ್ಚು ಸಲ ಭೇಟಿಯಾಗಿದ್ದೇನೆ. ಆಕೆ ನನ್ನ ಅಪ್ಪಟ ಅಭಿಮಾನಿ. ಆಕೆ ನನಗೆ ಮರೆಯಲಾಗದ ಪತ್ರಗಳು ಮತ್ತು ಉಡುಗೊರೆಗಳನ್ನು ಕಳಿಸುತ್ತಿದ್ದರು. ಆಕೆ ಮನಾಲಿಯಲ್ಲಿರುವ ನನ್ನ ಮನೆಗೂ ಭೇಟಿ ನೀಡಿದ್ದರು. ಓಹ್‌ ದೇವರೇ ಇದೊಂದು ಬಹುದೊಡ್ಡ ದುರಂತ ಎಂದು ದೀಪಾರ ಸಾವಿಗೆ ಕಂಬನಿ ಮಿಡಿದಿದ್ದಾರೆ.