Asianet Suvarna News

ಏಕರೂಪ ನಾಗರಿಕ ಸಂಹಿತೆ ತನ್ನಿ: ಕೇಂದ್ರಕ್ಕೆ ದೆಹಲಿ ಹೈಕೋರ್ಟ್‌ ಆದೇಶ!

* ಬದಲಾಗುತ್ತಿರುವ ಸಮಾಜಕ್ಕೆ ತಕ್ಕಂಥ ಕಾನೂನು ಬೇಕಿದೆ

* ಏಕರೂಪ ನಾಗರಿಕ ಸಂಹಿತೆ ತನ್ನಿ: ದೆಹಲಿ ಹೈಕೋರ್ಟ್‌

* ಕಾಯ್ದೆ ಜಾರಿಗೆ ಸೂಕ್ತ ಕ್ರಮ ಕೈಗೊಳ್ಳಿ: ಕೇಂದ್ರಕ್ಕೆ ಸೂಚನೆ

High Court Backs Uniform Civil Code Urges Centre To Take Necessary Steps pod
Author
Bangalore, First Published Jul 10, 2021, 7:34 AM IST
  • Facebook
  • Twitter
  • Whatsapp

ನವದೆಹಲಿ(ಜು.10): ಬದಲಾಗುತ್ತಿರುವ ಸಮಾಜಕ್ಕೆ ಅನುಗುಣವಾಗುವಂತೆ, ದೇಶದಲ್ಲಿ ಏಕರೂಪದ ನಾಗರಿಕ ಸಂಹಿತೆಯನ್ನು ಜಾರಿ ಮಾಡುವ ಅಗತ್ಯವಿದೆ ಎಂದು ದೆಹಲಿ ಹೈಕೋರ್ಟ್‌ ಪ್ರತಿಪಾದಿಸಿದೆ. ಅಲ್ಲದೆ ಈ ವಿಷಯವಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅದು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ಮೀನಾ ಸಮುದಾಯಕ್ಕೆ ಹಿಂದು ವಿವಾಹ ಕಾಯ್ದೆ- 1955ಯ ಅನ್ವಯಿಸುವಿಕೆಗೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ| ಪ್ರತಿಭಾ ಎಂ ಸಿಂಗ್‌ ಅವರಿದ್ದ ಪೀಠ ಜು.7ರಂದು ಇಂಥದ್ದೊಂದು ಆದೇಶ ನೀಡಿದೆ.

ತ್ರಿವಳಿ ತಲಾಖ್, ಆರ್ಟಿಕಲ್ 370, ಪೌರತ್ವ ಮಸೂದೆ: ಮುಂದಿನ ಹೆಜ್ಜೆಗೆ ಕೇಂದ್ರದ ಭರದ ಸಿದ್ಧತೆ!

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಭಾರತೀಯ ಜನತಾ ಪಕ್ಷ 2019ರ ಲೋಕಸಭಾ ಚುನಾವಣೆ ವೇಳೆ ತನ್ನ ಪ್ರಣಾಳಿಕೆಯಲ್ಲಿ, ಅಧಿಕಾರಕ್ಕೆ ಬಂದರೆ ಏಕರೂಪ ನಾಗರಿಕ ಸಂಹಿತೆ ಜಾರಿಯ ಭರವಸೆ ನೀಡಿತ್ತು. ಹೀಗಾಗಿ ಇದೀಗ ದೆಹಲಿ ಹೈಕೋರ್ಟ್‌ ನೀಡಿರುವ ಸೂಚನೆ, ಕಾಯ್ದೆ ಜಾರಿ ಕುರಿತ ಸರ್ಕಾರದ ಚಿಂತನೆಗಳಿಗೆ ಮರು ಜೀವ ನೀಡುವ ಸಾಧ್ಯತೆ ಇದೆ.

ಕೋರ್ಟ್‌ ಹೇಳಿದ್ದೇನು?:

‘ಆಧುನಿಕ ಭಾರತದ ಸಮಾಜ ಹಂತಹಂತವಾಗಿ ಏಕರೂಪವಾಗುತ್ತಿದೆ. ಧಾರ್ಮಿಕ, ಸಮುದಾಯ ಮತ್ತು ಜಾತಿಯ ಸಾಂಪ್ರದಾಯಿಕ ಅಡೆತಡೆಗಳು ನಶಿಸುತ್ತಿದೆ. ಬದಲಾಗುತ್ತಿರುವ ಈ ಮಾದರಿಯನ್ನು ಗಮನಿಸಿದಾಗ ಏಕರೂಪ ನಾಗರಿಕ ಸಂಹಿತೆ ಅಗತ್ಯ ಎಂದು ಕಾಣುತ್ತಿದೆ’ ಎಂದು ಕೋರ್ಟ್‌ ಹೇಳಿದೆ.

ಕಾಯ್ದೆ ಏಕೆ ಬೇಕು?:

ವೈಯಕ್ತಿಕ ಕಾನೂನುಗಳಿಂದ ಎದುರಾಗುವ ಸಮಸ್ಯೆಗಳ ಕುರಿತ ಪ್ರಕರಣಗಳು ಭಾರೀ ಪ್ರಮಾಣದಲ್ಲಿ ನ್ಯಾಯಾಲಯದಲ್ಲಿ ದಾಖಲಾಗುತ್ತಿದೆ. ನಾನಾ ರೀತಿಯ ವೈಯಕ್ತಿಕ ಕಾನೂನುಗಳಿಂದಾಗಿ ವಿವಿಧ ಜಾತಿ, ಸಮುದಾಯಕ್ಕೆ ಸೇರಿದ ಜನರು ತಮ್ಮ ವೈವಾಹಿಕ ಸಂಬಂಧ ಹಾಗೂ ವಿಚ್ಛೇದನದ ಕುರಿತಾಗಿ ಸಂಘರ್ಷ ಎದುರಿಸುತ್ತಿದ್ದಾರೆ. ಏಕರೂಪ ನಾಗರಿಕ ಸಂಹಿತೆ ಜಾರಿಯಿಂದ ಈ ರೀತಿಯ ಸಂಘರ್ಷವನ್ನು ಕಡಿಮೆ ಮಾಡಲು ನೆರವಾಗಲಿದೆ’ ಎಂದು ನ್ಯಾ| ಪ್ರತಿಭಾ ಸಿಂಗ್‌ ತಿಳಿಸಿದ್ದಾರೆ.

ಏಕರೂಪ ನಾಗರಿಕ ಸಂಹಿತೆ ಪರ ಸುಪ್ರೀಂ ಬ್ಯಾಟಿಂಗ್‌!

ಜೊತೆಗೆ ‘ಸಂವಿಧಾನದ 44ನೇ ವಿಧಿಯಲ್ಲಿ ಇಂಥದ್ದೊಂದು ಕಾನೂನು ಜಾರಿಯ ಅವಕಾಶವನ್ನು ಕಲ್ಪಿಸಲಾಗಿದೆ. ಇದನ್ನು ಸುಪ್ರೀಂಕೋರ್ಟ್‌ ಕೂಡ ಹಲವು ಬಾರಿ ಪ್ರಸ್ತಾಪಿಸಿದೆ. ಇಂಥ ಕಾನೂನು ಜಾರಿಯಾದರೆ ವಿವಾಹ, ವಿಚ್ಛೇದನ, ಆಸ್ತಿ ವಿಷಯದಲ್ಲಿ ದೇಶಕ್ಕೆಲ್ಲಾ ಒಂದು ಕಾನೂನು ಜಾರಿಯಾಗಿ ಹಲವಾರು ಸಮಸ್ಯೆಗಳ ಸುಲಭ ಇತ್ಯರ್ಥಕ್ಕೆ ಕಾರಣವಾಗಲಿದೆ’ ಎಂದು ನ್ಯಾ. ಪ್ರತಿಭಾ ಸಿಂಗ್‌ ಅಭಿಪ್ರಾಯಪಟ್ಟಿದ್ದಾರೆ.

ಏನಿದು ಸಂಹಿತೆ?

ಹಿಂದೂ, ಕ್ರೈಸ್ತ, ಮುಸ್ಲಿಂ, ಪಾರ್ಸಿ ಎಲ್ಲಾ ಧರ್ಮಗಳ ಜನರ ವಿವಾಹ, ವಿಚ್ಛೇದನ, ದತ್ತು, ವಂಶಪಾರಂಪರ್ಯ, ಉತ್ತರಾಧಿಕಾರ ಮೊದಲಾದ ವಿಷಯದಲ್ಲಿ ಇದೀಗ ನಾನಾ ರೀತಿಯ ಕಾನೂನು ಜಾರಿಯಲ್ಲಿದೆ. ಅದನ್ನು ಕೈಬಿಟ್ಟು ಎಲ್ಲಾ ಜಾತಿ, ಧರ್ಮಗಳಿಗೆ ಒಂದೇ ಕಾನೂನು ಅನ್ವಯವಾಗುವಂತೆ ಮಾಡುವುದೇ ಏಕರೂಪ ನಾಗರಿಕ ಸಂಹಿತೆ.

ಕೋರ್ಟ್‌ ಹೇಳಿದ್ದೇನು?

- ಆಧುನಿಕ ಭಾರತದ ಸಮಾಜ ಹಂತಹಂತವಾಗಿ ಏಕರೂಪವಾಗುತ್ತಿದೆ

- ಧಾರ್ಮಿಕ, ಸಮುದಾಯಿಕ, ಜಾತಿ ಸಾಂಪ್ರದಾಯಿಕ ತಡೆ ನಶಿಸುತ್ತಿದೆ

- ಬದಲಾದ ಸನ್ನಿವೇಶಕ್ಕೆ ಏಕರೂಪ ನಾಗರಿಕ ಸಂಹಿತೆ ಅಗತ್ಯವಾಗಿದೆ

- ಏಕರೂಪ ಸಂಹಿತೆ ಜಾರಿಗೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ

Follow Us:
Download App:
  • android
  • ios