ನವದೆಹಲಿ(ಏ.23): ಕೊರೋನಾ ಸೋಂಕು ಹಬ್ಬುವ ಅಪಾಯ ಅರಿಯುತ್ತಲೇ 130 ಕೋಟಿಗೂ ಹೆಚ್ಚು ಜನರನ್ನು ಲಾಕ್‌ಡೌನ್‌ಗೆ ಒಳಪಡಿಸುವ ಮೂಲಕ, ಸೋಂಕು ವ್ಯಾಪಕವಾಗದಂತೆ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೀಗ ಮತ್ತೊಂದು ಹೆಗ್ಗಳಿಕೆ. ಇಡೀ ವಿಶ್ವದಲ್ಲೇ ಕೊರೋನಾ ನಿರ್ವಹಣೆಯನ್ನು ಅತ್ಯಂತ ಯಶಸ್ವಿಯಾಗಿ ಮಾಡಿರುವ ನಾಯಕ ಮೋದಿ ಎಂದು ಸಮೀಕ್ಷೆಯೊಂದು ಹೇಳಿದೆ.

ಕೊರೋನಾ ತಡೆಗಾಗಿ ವಿಶ್ವದ ನಾನಾ ರಾಷ್ಟ್ರಗಳ ನಾಯಕರು ಕೈಗೊಂಡ ಕ್ರಮಗಳ ಕುರಿತಾಗಿ ಅಮೆರಿಕ ಮೂಲದ ‘ಮಾರ್ನಿಂಗ್‌ ಕನ್ಸಲ್ಟ್‌’ ಎಂಬ ಸಂಸ್ಥೆ ಕಳೆದ ಜನವರಿಯಿಂದ ಏ.14ರವರೆಗೆ ನಿಯಮಿತವಾಗಿ ಸಮೀಕ್ಷೆ ನಡೆಸುತ್ತಲೇ ಬಂದಿದ್ದು, ಇತ್ತೀಚಿನ ವರದಿ ಅನ್ವಯ ಮೋದಿ ಅವರು 68 ರೇಟಿಂಗ್‌ ಮೂಲಕ ಇತರ ರಾಷ್ಟ್ರಗಳ ನಾಯಕರನ್ನು ಹಿಂದಿಕ್ಕಿ ನಂ.1 ಸ್ಥಾನ ಅಲಂಕಿಸಿದ್ದಾರೆ.

ಯಾವೆಲ್ಲ ಆಧಾರದಲ್ಲಿ ಲಾಕ್ ಡೌನ್ ಮಾಡಲಾಗುತ್ತದೆ? 3 ಟಿ ತತ್ವ ಎಂದರೇನು?

ಉಳಿದಂತೆ ಎರಡನೇ ಸ್ಥಾನದಲ್ಲಿ 36 ಅಂಕಗಳೊಂದಿಗೆ ಮೆಕ್ಸಿಕೋ ಅಧ್ಯಕ್ಷ ಆ್ಯಂಡ್ರೇಶ್‌ ಮ್ಯಾನ್ಯುಯೆಲ್‌, 26 ಅಂಕಗಳೊಂದಿಗೆ ಆಸ್ಪ್ರೇಲಿಯಾ ಪ್ರಧಾನಿ ಸ್ಕಾಟ್‌ ಮಾರಿಸ್‌ ಇದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೋವಿಡ್‌-19 ತಡೆಗೆ ಹಲವು ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಶ್ವದ ಮುಂಚೂಣಿಯಲ್ಲಿರುವ ಮೋದಿ ಅವರು, ಭಾರತೀಯರ ಸುರಕ್ಷತೆ ಮತ್ತು ಭದ್ರತೆಯನ್ನು ನೋಡಿಕೊಂಡಿದ್ದಾರೆ. ಅಲ್ಲದೆ, ಇತರ ರಾಷ್ಟ್ರಗಳಿಗೆ ಅಗತ್ಯವಿರುವ ನೆರವಿನ ಹಸ್ತವನ್ನೂ ಚಾಚಿದ್ದಾರೆ ಎಂದು ಪ್ರತಿಪಾದಿಸಿದ್ದಾರೆ. ಮತ್ತೊಂದೆಡೆ, ಕೊರೋನಾದಿಂದ ಅಮೆರಿಕದಲ್ಲಿ 40 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರ ಹೊರತಾಗಿಯೂ, ಲಾಕ್ಡೌನ್‌ ಸಡಿಲಿಕೆಗೆ ಮುಂದಾಗಿರುವ ಅಧ್ಯಕ್ಷ ಟ್ರಂಪ್‌ ಅವರು ಕೊರೋನಾವನ್ನು ಕಳಪೆಯಾಗಿ ನಿಭಾಯಿಸಿದ ನಾಯಕ ಎಂಬ ಕುಖ್ಯಾತಿಗೆ ಒಳಗಾಗಿದ್ದಾರೆ. ಈ ಪಟ್ಟಿಯಲ್ಲಿ ಟ್ರಂಪ್‌ ಅವರ ರೇಟಿಂಗ್‌ ಮೈನಸ್‌ 3ಕ್ಕೆ ಕುಸಿದಿದೆ.

ಕೊರೋನಾ ತಾಂಡವ: ಅಮೆರಿಕದಲ್ಲಿ ದುಡ್ಡಿಗೆ ಬಲೆ, ಭಾರತದಲ್ಲಿ ಜೀವಕ್ಕೆ ಬೆಲೆ!

ಹೆಸರು- ರಾಷ್ಟ್ರ- ರೇಟಿಂಗ್ಸ್‌

ನರೇಂದ್ರ ಮೋದಿ- ಭಾರತ- 68

ಆ್ಯಂಡ್ರೇಸ್‌ ಮ್ಯಾನ್ಯುವೆಲ್-‌ ಮೆಕ್ಸಿಕೋ- 36

ಬೋರಿಸ್‌ ಜಾನ್ಸನ್-‌ ಬ್ರಿಟನ್-‌ 35

ಸ್ಕಾಟ್‌ ಮೊರಿಸನ್-‌ ಆಸ್ಪ್ರೇಲಿಯಾ- 26

ಜಸ್ಟಿನ್‌ ಟ್ರುಡೆ- ಕೆನಡಾ- 21

ಡೊನಾಲ್ಡ್‌ ಟ್ರಂಪ್‌- ಅಮೆರಿಕ -3

ಇಮ್ಯಾನ್ಯುವೆಲ್-‌ ಮ್ಯಾಕ್ರಾನ್‌ ಫ್ರಾನ್ಸ್‌ - 25

ಶಿಂಜೋ- ಅಬೆ ಜಪಾನ್‌ -33