ಕೇರಳದಲ್ಲಿ ಹೆಲಿಕಾಪ್ಟರ್ ಪತನ: ಲುಲು ಗ್ರೂಪ್ ಮುಖ್ಯಸ್ಥ ಯೂಸುಫ್ ಸೇರಿ 7 ಮಂದಿ ಪಾರು!
ಲುಲು ಗ್ರೂಪ್ ಮಾಲೀಕ ಯೂಸುಫ್ ಅಲಿ, ಅವರ ಪತ್ನಿ ಸೇರಿದಂತೆ ಒಟ್ಟು 7 ಪ್ರಯಾಣಿಕರಿದ್ದ ಹೆಲಿಕಾಪ್ಟರ್ ಪತನ| ಕೇರಳದ ಕೊಚ್ಚಿಯಲ್ಲಿ ಪತನ| ಅದೃಷ್ಟವಶಾತ್ ಹೆಲಿಕಾಪ್ಟರ್‌ನಲ್ಲಿದ್ದವರು ಸುರಕ್ಷಿತ
ಕೊಚ್ಚಿ(ಏ.11): ಲುಲು ಗ್ರೂಪ್ ಮಾಲೀಕ ಯೂಸುಫ್ ಅಲಿ, ಅವರ ಪತ್ನಿ ಸೇರಿದಂತೆ ಒಟ್ಟು 7 ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಹೆಲಿಕಾಪ್ಟರ್ ಭಾನುವಾರಬೆಳಗ್ಗೆ ಕೇರಳದ ಕೊಚ್ಚಿಯಲ್ಲಿ ಪತನಗೊಂಡಿದೆ. ಅದೃಷ್ಟವಶಾತ್ ಹೆಲಿಕಾಪ್ಟರ್‌ನಲ್ಲಿದ್ದವರು ಸುರಕ್ಷಿತವಾಗಿದ್ದಾರೆ.
ಎಂ.ಎ. ಯುಸುಫ್ ಅಲಿ ದಂಪತಿ, ಸಂಸ್ಥೆಯ ಮೂವರು ಸಿಬ್ಬಂದಿ ಸೇರಿ ಒಟ್ಟು ಏಳು ಮಂದಿ ಪ್ರಯಾಣಿಸುತ್ತಿದ್ದ ಈ ಹೆಲಿಕಾಪ್ಟರ್ ಪನಂಗಾಡ್‌ನ ಕೇರಳ ಮೀನುಗಾರಿಕೆ ಹಾಗೂ ಸಮುದ್ರ ಅಧ್ಯಯನ ವಿಶ್ವವಿದ್ಯಾಲಯದ ಆವರಣ, ಔಗು ಪ್ರದೇಶದಲ್ಲಿ ಏಕಾಏಕಿ ಕುಸಿದು ಬಿದ್ದಿದೆ. ಲೇಕ್ ಶೋರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಸಂಬಂಧಿಕರನ್ನು ನೋಡಲು ಯುಸುಫ್ ಅಲಿ ದಂಪತಿ ಪ್ರಯಾಣ ಬೆಳೆಸಿದ್ದಾಗ ಈ ಅಪಘಾತ ನಡೆದಿದೆ. ಸದ್ಯ ಪ್ರಯಾಣಿಕರು ಮತ್ತು ಪೈಲಟ್‌ಗಳು ಸುರಕ್ಷಿತವಾಗಿದ್ದು, ಎರ್ನಾಕುಲಂನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಆರಂಭಿಸಲಾಗಿದೆ.
ಪ್ರತ್ಯಕ್ಷದರ್ಶಿ ಹೇಳಿದ್ದೇನು?
ಬೆಳಗ್ಗೆ 8.45ರ ಸುಮಾರಿಗೆ ಹೆಲಿಕಾಪ್ಟರ್ ನೆಲಕ್ಕೆ ಅಪ್ಪಳಿಸಿದಾಗ ಭಾರೀ ಶಬ್ದ ಕೇಳಿ ಬಂದಿತ್ತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ. ವಿವಿ ಆವರಣದಲ್ಲಿ ಮಳೆ ಸುರಿಯುತ್ತಿದ್ದು, ಕಾಪ್ಟರ್‌ನಲ್ಲಿದ್ದ ಯೂಸುಫ್ ಅಲಿ ಅವರ ಬೆನ್ನಿಗೆ ಪೆಟ್ಟಾಗಿದೆ. ಆದರೆ ಗಾಬರಿಗೊಳ್ಳುವ ಅಗತ್ಯವಿಲ್ಲ ಎಂದು ತಿಳಿದು ಬಂದಿದೆ.