ಈಗ ಸಿಕ್ಕಿಂಗೂ ಜಲಗಂಡಾಂತರ: ಹಿಮಾಲಯ ತಪ್ಪಲಿಗೆ ತಲ್ಲಣ!
* ಮೇಘಸ್ಫೋಟ, ಭೂಕುಸಿತ: ರಾಜಧಾನಿ ಗ್ಯಾಂಗ್ಟಕ್‌ಗೆ ಹೆದ್ದಾರಿ ಸಂಪರ್ಕ ಕಡಿತ
* ಈಗ ಸಿಕ್ಕಿಂಗೂ ಜಲಗಂಡಾಂತರ
* ಉತ್ತರ ಬಂಗಾಳದಲ್ಲೂ ಮಳೆ, ರೆಡ್ ಅಲರ್ಟ್
* ಹಿಮಾಲಯ ತಪ್ಪಲಿಗೆ ತಲ್ಲಣ
* ಉತ್ತರಾಖಂಡ: ಮತ್ತೆರಡು ಊರಿನ ಸಂಪರ್ಕ ಕಟ್
ಗ್ಯಾಂಗ್ಟಕ್/ಕೋಲ್ಕತಾ/ಡೆಹ್ರಾಡೂನ್(ಅ.21): ಉತ್ತರಾಖಂಡ(Uttarakhand) ಹಾಗೂ ಕೇರಳದ(Kerala) ಬಳಿಕ ಈಗ ಮಳೆ ಆರ್ಭಟದ ಸರದಿ ಸಿಕ್ಕಿಂ(Sikkim) ಹಾಗೂ ಪಶ್ಚಿಮ ಬಂಗಾಳದ್ದು(West Bengal). ಹಿಮಾಲಯದ ತಪ್ಪಲಿನ ರಾಜ್ಯವಾದ ಸಿಕ್ಕಿಂನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಅಲ್ಲಲ್ಲಿ ಭಾರೀ ಭೂಕುಸಿತ(Landslide) ಸಂಭವಿಸಿವೆ. ಇನ್ನು ಚಹಾ ಬೆಳೆಯುವ ಪಶ್ಚಿಮ ಬಂಗಾಳದ ಉತ್ತರ ಭಾಗದಲ್ಲೂ ಮೇಘಸ್ಫೋಟ(Cloudburst) ಸಂಭವಿಸಿದ ಪರಿಣಾಮ ಭೂಮಿ ಕುಸಿದು, ಸಿಕ್ಕಿಂಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ(National Highway) 10ರಲ್ಲಿ ಭೂಕುಸಿತ ಉಂಟಾಗಿ ರಸ್ತೆ ಸಂಪರ್ಕ ಕಡಿತವಾಗಿದೆ. ವಿಮಾನ, ರೈಲು ಸಂಚಾರ ಕೂಡ ವ್ಯತ್ಯಯವಾಗಿದೆ.
ಇದೇ ವೇಳೆ, ಬಂಗಾಳದ ಡಾರ್ಜೀಲಿಂಗ್(Darjeeling), ಕಲಿಂಪಾಂಗ್ ಮತ್ತು ಅಲಿಪುರದೌರ್ ಜಿಲ್ಲೆಗಳಲ್ಲಿ ಗುರುವಾರದವರೆಗೆ ಭಾರಿ ಮಳೆ ಸುರಿಯಬಹುದು ಎಂದು ಹವಾಮಾನ ಇಲಾಖೆ ರೆಡ್ ಅಲರ್ಟ್(Red Alert) ಘೋಷಿಸಿದೆ. ಈವರೆಗೆ ಬಂಗಾಳದಲ್ಲಿ ಸಾವಿನ 1 ಪ್ರಕರಣ ಮಾತ್ರ ವರದಿಯಾಗಿದೆ.
ಇನ್ನೊಂದೆಡೆ ಉತ್ತರಾಖಂಡದಲ್ಲಿ ಮಳೆ ಕಡಿಮೆಯಾಗಿದ್ದರೂ, ಮತ್ತೆ 5 ಶವಗಳು ಅವಶೇಷಗಳ ಅಡಿ ಸಿಕ್ಕಿವೆ ಹಾಗೂ ಸಾವಿನ ಸಂಖ್ಯೆ 47ಕ್ಕೆ ಏರಿದೆ. 11 ಜನ ನಾಪತ್ತೆಯಾಗಿದ್ದಾರೆ. ಭೂಕುಸಿತದಿಂದಾಗಿ ನೈನಿತಾಲ್ ಬಳಿಕ ಅಮ್ರೋಹಾ ಹಾಗೂ ರಾಣಿಖೇತ್‌ಗಳಿಗೆ ಸಂಪರ್ಕ ಕಡಿತವಾಗಿದೆ. ಹೀಗಾಗಿ ಸರಕು ಸಾಗಣೆ ಸ್ಥಗಿತವಾಗಿದ್ದು, ಅಗತ್ಯ ಇದ್ದವರಿಗೆ ಮಾತ್ರ ಪೆಟ್ರೋಲ್ ವಿತರಣೆ ನಡೆದಿದೆ.
ಬಂಗಾಳ, ಸಿಕ್ಕಿಂನಲ್ಲಿ ಪ್ರವಾಹ-ಭೂಕುಸಿತ:
ಉತ್ತರ ಬಂಗಾಳದ ಚಹಾ ತೋಟ ಪ್ರದೇಶಗಳಲ್ಲಿ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಕಲಿಂಪಾಂಗ್‌ನಲ್ಲಿ ಮೇಘಸ್ಫೋಟ ಸಂಭವಿಸಿದ ಕಾರಣ ಡಾರ್ಜೀಲಿಂಗ್, ಕಲಿಂಪಾಂಗ್, ಮತ್ತು ಜಲ್‌ಪೈಗುರಿ ಜಿಲ್ಲೆಗಳಲ್ಲಿ ಭೂಕುಸಿತ ಉಂಟಾಗಿದೆ. ತೀಸ್ತಾ ನದಿ ಹಾಗೂ ಇತರ ಉಪನದಿಗಳು ಉಕ್ಕೇರಿ ಹಲವೆಡೆ ರಸ್ತೆ, ಸೇತುವೆಗಳಿಗೆ ಹಾನಿಯಾಗಿದೆ.
ದುರ್ಗಾಪೂಜೆಗಾಗಿ ಅನೇಕರು ಬೆಟ್ಟಪ್ರದೇಶಗಳ ತಮ್ಮ ಊರಿಗೆ ಆಗಮಿಸಿದ್ದರು. ಆದರೆ ಅವರು ಕೆಲಸದ ಸ್ಥಳಕ್ಕೆ ವಾಪಸು ಹೋಗಲು ಆಗುತ್ತಿಲ್ಲ. ಇಂಥ ನೂರಾರು ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈಲ್ವೇ ನಿಲ್ದಾಣ, ಬಾಗ್ದೋಗ್ರಾ ವಿಮಾನ ನಿಲ್ದಾಣ ತಲುಪಲು ಆಗದೇ ಊರಿಗೆ ವಾಪಸು ಮರಳುತ್ತಿದ್ದಾರೆ. ಇದೇ ವೇಳೆ ಬಾಗ್ಡೋಗ್ರಾ ವಿಮಾನ ನಿಲ್ದಾಣದ ಕಾರ್ಯಾಚರಣೆ ಕೂಡ ಸ್ಥಗಿತವಾಗಿದೆ. ಕಲಿಂಪಾಂಗ್‌ನಲ್ಲಿ ಸುಮಾರು 60-70 ಪ್ರವಾಸಿಗರು ಸಿಲುಕಿಕೊಂಡಿದ್ದಾರೆ.
ಪಾನಿ ಹೌಸ್ ಎಂಬಲ್ಲಿ ಮತ್ತೊಂದು ಭೂಕುಸಿತ ಸಂಭವಿಸಿ ಸಂಚಾರ ಅಸ್ತವ್ಯಸ್ತವಾಗಿತ್ತು. ರಾರಯಂಗ್ಪೋದಲ್ಲಿ ತೀಸ್ತಾ ನದಿಯ ಅಬ್ಬರಕ್ಕೆ ರಾರಯಂಗ್ಪೋ ಸೇತುವೆ ಹಾನಿಗೀಡಾಗಿ, ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಅಲ್ಲದೇ ಜನರನ್ನು ಸಾಮಾನು ಸರಂಜಾಮು ಸಮೇತ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ.
ಡಾರ್ಜೀಲಿಂಗ್ ಜಿಲ್ಲೆಯಲ್ಲೂ ನದಿ ಪಾತ್ರದಲ್ಲಿ ಭೂಕುಸಿತ ಉಂಟಾಗಿದೆ. ಇದರಿಂದ ಕರ್ಸಿಯಾಂಗ್ ಮತ್ತು ಸುಕ್ನಾ ಮಧ್ಯದ ಸಂಪರ್ಕ ಕಡಿತಗೊಂಡಿದೆ. ನಿರಂತರ ಮಳೆ ಹಿನ್ನೆಲೆ ತೀಸ್ತಾ ಬ್ಯಾರೇಜ್‌ನಿಂದ 3600 ಕ್ಯೂಸೆಕ್ ನೀರು ಹೊರಬಿಡಲಾಗಿದೆ. ಪರಿಣಾಮ ಗ್ಯಾಂಗ್ಟಕ್‌ನ ತೀಸ್ತಾ ಬಜಾರ್ ಪ್ರದೇಶದಲ್ಲೂ ರಾಷ್ಟ್ರೀಯ ಹೆದ್ದಾರಿ ಮುಳುಗಿ ಬಂಗಾಳದ ಸಿಲಿಗುರಿ ಮತ್ತು ಸಿಕ್ಕಿಂ ರಾಜಧಾನಿ ಗ್ಯಾಂಗ್ಟಕ್ ನಡುವಿನ ಸಂಪರ್ಕ ಕಡಿತಗೊಂಡಿದೆ.
ಡಾರ್ಜೀಲಿಂಗ್‌ನಲ್ಲಿ ಈವರೆಗೆ 23 ಸೆಂ.ಮೀ. ಸಿಕ್ಕಿಂನ ಹಲವು ಭಾಗಗಳಲ್ಲಿ 20 ಸೆಂ.ಮೀ., ಕಲಿಂಪಾಂಗ್‌ನಲ್ಲಿ 19 ಸೆಂ.ಮೀ.. ಜಲ್‌ಪೈಗುರಿಯಲ್ಲಿ 15 ಸೆಂ.ಮೀ. ಮತ್ತು ಕೂಚ್ ಬೆಹಾರ್‌ನಲ್ಲಿ 6 ಸೆಂ.ಮೀ. ಮಳೆಯಾಗಿದೆ.
ಕೇರಳಕ್ಕೆ ನೆರವು: ಸಿಎಂ ಭರವಸೆ
ಕೇರಳದ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಭಾರಿ ಮಳೆ ಹಾಗೂ ಭೂಕುಸಿತದಿಂದ ಉಂಟಾದ ಹಾನಿಗೆ ವಿಷಾದ ವ್ಯಕ್ತಪಡಿಸಿದ್ದೇನೆ. ನಮ್ಮ ರಾಜ್ಯದ ಮುಖ್ಯ ಕಾರ‍್ಯದರ್ಶಿಗಳಿಗೆ ಕೇರಳದ ಮುಖ್ಯ ಕಾರ‍್ಯದರ್ಶಿಗಳ ಜೊತೆ ಸಂಪರ್ಕದಲ್ಲಿದ್ದುಕೊಂಡು ಅಲ್ಲಿನ ಪರಿಹಾರ ಕಾರ್ಯಾಚರಣೆಗೆ ಎಲ್ಲಾ ರೀತಿಯ ನೆರವು ನೀಡಲು ಸೂಚಿಸಿದ್ದೇನೆ.
- ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ