ಕಳೆದ ಕೆಲ ದಿನಗಳಿಂದ ದೇಶದ ಉತ್ತರ, ಪೂರ್ವದ ರಾಜ್ಯಗಳಲ್ಲಿ ಭಾರಿ ಪ್ರಮಾಣದಲ್ಲಿ ಸುರಿಯುತ್ತಿರುವ ಮಳೆ ಭಾನುವಾರವೂ ಮುಂದುವರೆದಿದ್ದು ಜನ ಜೀವನ ಅಸ್ತವ್ಯಸ್ತಗೊಂಡಿದೆ.

ನವದೆಹಲಿ: ಕಳೆದ ಕೆಲ ದಿನಗಳಿಂದ ದೇಶದ ಉತ್ತರ, ಪೂರ್ವದ ರಾಜ್ಯಗಳಲ್ಲಿ ಭಾರಿ ಪ್ರಮಾಣದಲ್ಲಿ ಸುರಿಯುತ್ತಿರುವ ಮಳೆ ಭಾನುವಾರವೂ ಮುಂದುವರೆದಿದ್ದು ಜನ ಜೀವನ ಅಸ್ತವ್ಯಸ್ತಗೊಂಡಿದೆ. ಗುಜರಾತ್‌, ಮಹಾರಾಷ್ಟ್ರ, ದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಮಳೆಯಾಗಿದ್ದು, ಮಹಾರಾಷ್ಟ್ರದಲ್ಲಿ ಮಳೆಗೆ ಮೂವರು ಹಾಗೂ ರಾಜಸ್ಥಾನದಲ್ಲಿ ಸಿಡಿಲಿನ ಬಡಿತಕ್ಕೆ ಇಬ್ಬರು ಸಾವಿಗೀಡಾಗಿದ್ದಾರೆ.

ಮಹಾರಾಷ್ಟ್ರದ ಯವತ್ಮಾಲ್‌ನಲ್ಲಿ ಭಾನುವಾರ ಮಳೆ ಸಂಬಂಧಿ ಅನಾಹುತಕ್ಕೆ ಮೂವರು ಅಸುನೀಗಿದ್ದಾರೆ. ದುರ್ಘಟನೆ ನಡೆದ ಪ್ರದೇಶದಲ್ಲಿ ಪುನರ್ವಸತಿ ಸಚಿವ ಭೇಟಿ ನೀಡಿದ್ದು ಮೃತಪಟ್ಟವರ ಕುಟುಂಬಕ್ಕೆ ತಲಾ 4 ಲಕ್ಷ ರು. ಪರಿಹಾರ ಘೋಷಿಸಿದ್ದಾರೆ. ನಾಗಪುರ (Nagpura) ಮತ್ತು ವಿದರ್ಭ (Vidarbha) ವಿಭಾಗಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಕಳೆದ 10 ದಿನಗಳಲ್ಲಿ 16 ಮಂದಿ ಸಾವಿಗೀಡಾಗಿದ್ದಾರೆ. ಸುಮಾರು 1600 ಮನೆಗಳಿಗೆ ಹಾನಿಯಾಗಿದ್ದು, 875.84 ಹೆಕ್ಟೇರ್‌ ಕೃಷಿ ಭೂಮಿ ನಾಶವಾಗಿದೆ. ಭಾನುವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಸಮಯದಲ್ಲಿ ಈ ಪ್ರದೇಶದಲ್ಲಿ 10 ಸೆಂ.ಮೀ. ಮಳೆಯಾಗಿದೆ. ಪ್ರವಾಹದಿಂದ (Flood) 280 ಮಂದಿಯನ್ನು ರಕ್ಷಿಸಲಾಗಿದ್ದು, 6275 ಮಂದಿಯನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ.

ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ, ಯಮುನೆಯ ಬಳಿಕ ಈಗ ಗಂಗೆಯ ಮಹಾರೂಪ!

ಮುಳುಗಿದ ಏರ್‌ಪೋರ್ಟ್‌:

ಭಾರಿ ಮಳೆಯಿಂದಾಗಿ ಅಹಮದಾಬಾದ್‌ನಲ್ಲಿರುವ ವಿಮಾನ ನಿಲ್ದಾಣಕ್ಕೆ (Airport) ನೀರು ನುಗ್ಗಿದ್ದು, ಸುಮಾರು ಮಂಡಿ ಎತ್ತರಕ್ಕೆ ಹರಿಯುತ್ತಿದ್ದ ನೀರಿನಲ್ಲಿ ಪ್ರಯಾಣಿಕರು ಸಂಚರಿಸಿದ್ದಾರೆ. ಜುನಾಗಢದಲ್ಲಿ (Junagadh) ಉಂಟಾಗಿದ್ದ ಪ್ರವಾಹ ಭಾನುವಾರ ಕೊಂಚ ಮಟ್ಟಿಗೆ ಇಳಿಕೆಯಾಗಿದ್ದು, ಸುಮಾರು 3 ಸಾವಿರ ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಸೋಮವಾರದವರೆಗೂ ಗುಜರಾತ್‌ನ (Gujarat) ಹಲವು ಭಾಗಗಳಲ್ಲಿ ಮಳೆಯಾಗಲಿದೆ ಎಂಬ ಕಾರಣಕ್ಕೆ ಹವಾಮಾನ ಇಲಾಖೆ ಆರೆಂಜ್‌ ಅಲರ್ಚ್‌ ಘೋಷಣೆ ಮಾಡಿದೆ. ಜುನಾಗಢದಲ್ಲಿ ಭಾನುವಾರ 24 ಸೆಂ.ಮೀ. ಮಳೆಯಾಗಿದ್ದು, ಹಲವು ಪ್ರದೇಶಗಳು ಮುಳುಗಡೆಯಾಗಿವೆ. ಪ್ರವಾಹದ ಹಿನ್ನೆಲೆಯಲ್ಲಿ ಗುಜರಾತ್‌ ಮುಖ್ಯಮಂತ್ರಿ ಭೂಪೇಂದ್ರ ಭಾಘೇಲ್‌ (Bhupendra Bhaghel)ಅವರಿಗೆ ಕರೆ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮಾಹಿತಿ ಪಡೆದಿದ್ದಾರೆ. ಅಲ್ಲದೇ ದೆಹಲಿ ಪ್ರವಾಹದ ಬಗ್ಗೆಯೂ ಉಪರಾಜ್ಯಪಾಲ ಸಕ್ಸೇನಾ ಅವರ ಜೊತೆಗೂ ಮಾತುಕತೆ ನಡೆಸಿದ್ದಾರೆ.

ಮತ್ತೆ ಅಪಾಯಕಾರಿ ಮಟ್ಟಕ್ಕೇರಿದ ಯಮುನಾ:

ಹಥನೀಕುಂಡ ಬ್ಯಾರೇಜ್‌ನಿಂದ ನೀರು ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಯಮುನಾ ನದಿ (River Yamuna)ಮಟ್ಟಮತ್ತೊಮ್ಮೆ ಏರಿಕೆ ಕಂಡಿದ್ದು, 206.7 ಮೀ. ಎತ್ತರಕ್ಕೆ ಏರಿಕೆ ಕಂಡಿದೆ. ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಲ್ಲಿ (Himachal Pradesh)ಭಾರಿ ಮಳೆಯಾಗಿರುವ ಹಿನ್ನೆಲೆಯಲ್ಲಿ ಯಮುನಾ ನದಿ ನೀರಿನ ಮಟ್ಟಹೆಚ್ಚಾಗಿದೆ.

ಉತ್ತರ ಭಾರತದ ಜಲಪ್ರಳಯ, ನದಿ ಎಂದಿಗೂ ತನ್ನ ದಾರಿ ಮರೆಯುವುದಿಲ್ಲ; ಯಮುನೆಯ ಹಳೇ ಫೋಟೋ ವೈರಲ್

ರಾಜಸ್ಥಾನದಲ್ಲಿ ಸಿಡಿಲಿಗೆ 2 ಸಾವು:

ಕೋಟಾದಲ್ಲಿ ನಡೆದ 2 ಪ್ರತ್ಯೇಕ ಸಿಡಿಲು ಬಡಿತ ಪ್ರಕರಣದಲ್ಲಿ ಓರ್ವ ರೈತ ಹಾಗೂ ಕುರಿಗಾಹಿ ಸಾವನ್ನಪ್ಪಿದ್ದಾರೆ. ಅಲ್ಲದೇ ಸಿಡಿಲಿನ ಬಡಿತಕ್ಕೆ 35 ಕುರಿಗಳು ಸಹ ಸಾವನ್ನಪ್ಪಿವೆ. ಪಂಜಾಬ್‌ನಲ್ಲಿ ಇತ್ತೀಚಿಗೆ ಉಂಟಾದ ಪ್ರವಾಹದಿಂದಾಗಿ ರಾಜ್ಯಕ್ಕೆ ಸುಮಾರು 1 ಸಾವಿರ ಕೋಟಿ ರು. ನಷ್ಟಉಂಟಾಗಿದೆ ಎಂದು ಸರ್ಕಾರ ಹೇಳಿದೆ.