Hathras Stampede : 121 ಮಂದಿ ಸತ್ತು, ಐಸಿಯುವಿನಲ್ಲಿ ಪತ್ನಿ ಇದ್ದರೂ ಸತ್ಸಂಗ ತಪ್ಪಿಸೋಲ್ವಂತೆ ಈ ಪತಿರಾಯ!
ಹತ್ರಾಸ್ ನಲ್ಲಿ ನಡೆದ ಕಾಲ್ತುಳಿತಕ್ಕೆ ಅಮಾಯಕ ಭಕ್ತರು ಸಾವನ್ನಪ್ಪಿದ್ದಾರೆ. ಘಟನೆ ನಡೆದ್ಮೇಲೆ ಬಾಬಾ ನಾಪತ್ತೆಯಾಗಿದ್ದಾರೆ. ಇಷ್ಟೆಲ್ಲ ಆದ್ರೂ ಭಕ್ತರಿಗೆ ಬಾಬಾ ಮೇಲಿನ ಮೋಹ ಹೋಗಿಲ್ಲ. ಪತ್ನಿಗೆ ಏನಾದ್ರೂ ಪರವಾಗಿಲ್ಲ, ಪ್ರವಚನ ಕೇಳೋದು ಬಿಡೋದಿಲ್ಲ ಎನ್ನುವ ಭಕ್ತನೊಬ್ಬ ಇಲ್ಲಿದ್ದಾನೆ.
ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತದಿಂದ 121 ಮಂದಿ ಸಾವನ್ನಪ್ಪುತ್ತಿದ್ದಾರೆ. ಅನೇಕ ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ವಿವಿಧ ಜಿಲ್ಲೆಗಳ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಇದ್ರಲ್ಲಿ ಒಬ್ಬ ಭಕ್ತನ ಪತ್ನಿ ಕೂಡ ಸೇರಿದ್ದಾಳೆ. ಆಕೆ ಐಸಿಯುವಿನಲ್ಲಿ ಚಿಕಿತ್ಸೆ ಪಡೀತಾ ಇದ್ರೂ ಪತಿಗೆ ನಾರಾಯಣ್ ಸಕರ್ ಹರಿ ಅಲಿಯಾಸ್ ಭೋಲೆ ಬಾಬಾ ಮೇಲಿನ ಭಕ್ತಿ ಎಳ್ಳಷ್ಟು ಕಡಿಮೆ ಆಗಿಲ್ಲ. ಅವರ ಸತ್ಸಂಗಕ್ಕೆ ಈಗ್ಲೂ ಹೋಗ್ತೇನೆ ಎನ್ನುತ್ತಿದ್ದಾನೆ ಆ ವ್ಯಕ್ತಿ. ಬಾಬಾನದ್ದು ಏನೂ ತಪ್ಪಿಲ್ಲ, ತಪ್ಪೆಲ್ಲ ಭಕ್ತರದ್ದೇ ಎನ್ನುವ ಅವನ ಭಕ್ತಿ ನೋಡಿ ಜನರು ದಂಗಾಗಿದ್ದಾರೆ.
ಹತ್ರಾಸ್ನಲ್ಲಿ ಭೋಲೆ ಬಾಬಾ (Bhole Baba) ನ ಪ್ರವಚನ ನಡೆದಿತ್ತು. ಪ್ರವಚನ ಮುಗಿಯುತ್ತಿದ್ದಂತೆ ಜನರು ಬಾಬಾ ಹಿಂದೆ ಓಡಿದ್ದರು. ಈ ಸಮಯದಲ್ಲಿ ಕಾಲ್ತುಳಿತವಾಗಿ 121 ಮಂದಿ ಸಾವನ್ನಪ್ಪಿದ್ದರು. ಮತ್ತೆ ಕೆಲವರು ಗಾಯಗೊಂಡಿದ್ದು, ಗಾಯಾಳುಗಳನ್ನು ಜಿಲ್ಲೆಯ ಬೇರೆ ಬೇರೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ದೆಹಲಿ (Delhi) ಯ ಶಿವಮಂಗಲ್ ಸಿಂಗ್ ಎನ್ನುವ ವ್ಯಕ್ತಿ ಆ ದಿನ ತನ್ನ ಪತ್ನಿ ಜೊತೆ ಬಾಬಾ ಪ್ರವಚನ ಕೇಳಲು ಬಂದಿದ್ದ. ಪ್ರವಚನದ ನಂತ್ರ ನಡೆದ ದುರ್ಘಟನೆಯಲ್ಲಿ ಶಿವಮಂಗಲ್ ಸಿಂಗ್ ಪತ್ನಿ ಕೂಡ ಗಾಯಗೊಂಡಿದ್ದಾಳೆ. ಆಕೆಗೆ ಎಎಮ್ಯು ಮೆಡಿಕಲ್ ಕಾಲೇಜಿ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಈ ಸಮಯದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಶಿವಮಂಗಲ್ ಸಿಂಗ್, ಇದ್ರಲ್ಲಿ ಬಾಬಾರ ತಪ್ಪಿಲ್ಲ ಎಂದಿದ್ದಾನೆ. ಭೋಲೆ ಬಾಬಾ, ನನ್ನ ಹಿಂದೆ ಬರುವಂತೆ ಭಕ್ತರಿಗೆ ಎಂದೂ ಹೇಳೋದಿಲ್ಲ. ಇದು ಜನರ ತಪ್ಪು. ಪತ್ನಿಗೆ ಏನೇ ಆಗ್ಲಿ, ನಾನು ಭೋಲೆ ಬಾಬಾರ ಪ್ರವಚನ ಕೇಳಲು ಮತ್ತೆ ಹೋಗ್ತೇನೆ ಎಂದು ಶಿವಮಂಗಲ್ ಸಿಂಗ್ ಹೇಳಿದ್ದಾನೆ.
ಭೋಲೆ ಬಾಬಾ ಬಳಿ ಹೋಗಲು ಕಾರಣವೇನು? : ಶಿವಮಂಗಲ್ ಸಿಂಗ್, ತಾನು ಭೋಲೆ ಬಾಬಾ ಬಳಿ ಹೋಗಲು ಕಾರಣವೇನು ಎಂಬುದನ್ನು ಹೇಳಿದ್ದಾನೆ. ಆತ ದೆಹಲಿ ನಿವಾಸಿ. ಒಂದೂವರೆ ವರ್ಷದಿಂದ ಭೋಲೆಬಾಬಾ ಪ್ರವಚನ ಕೇಳಲು ಬರ್ತಿದ್ದಾನೆ. ಭೋಲೆ ಬಾಬಾ, ಪ್ರೇರಿಪಿಸುವಂತೆ ಮಾತನ್ನಾಡ್ತಾರೆ. ಜನರನ್ನು ಒಳ್ಳೆ ಮಾರ್ಗದಲ್ಲಿ ನಡೆಯಲು ಪ್ರೋತ್ಸಾಹಿಸ್ತಾರೆ. ಯಾವುದೇ ಜಾತಿ, ಬೇಧವಿಲ್ಲ. ಎಲ್ಲರೂ ಒಟ್ಟಾಗಿರುವಂತೆ ಸಲಹೆ ನೀಡ್ತಾರೆ. ಹಾಗಾಗಿ ನಾನು ಅವರ ಪ್ರವಚನ ಕೇಳಲು ಹೋಗ್ತೇನೆ ಅನ್ನೋದು ಶಿವಮಂಗಲ್ ಸಿಂಗ್ ಹೇಳಿಕೆ.
ಘಟನೆ ನಡೆದ ಸಮಯದಲ್ಲಿ ಶಿವಮಂಗಲ್ ಸಿಂಗ್ ಸ್ವಲ್ಪ ದೂರದಲ್ಲಿದ್ದನಂತೆ. ಈ ವಿಷ್ಯ ತಿಳಿಯುತ್ತಿದ್ದಂತೆ ಆತ ಪತ್ನಿಗೆ ಕರೆ ಮಾಡಿದ್ದಾನೆ. ಆಕೆ ಬದಲು ಆಕೆ ಪಕ್ಕದಲ್ಲಿರುವವರು ಫೋನ್ ಎತ್ತಿದ್ದಲ್ಲದೆ ವಿಷ್ಯ ತಿಳಿಸಿದ್ದಾರೆ. ಅಲ್ಲಿಗೆ ಹೋದ್ರೆ ಪತ್ನಿ ಇರಲಿಲ್ಲ, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎನ್ನುತ್ತಾನೆ ಶಿವಮಂಗಲ್ ಸಿಂಗ್. ಇಷ್ಟಾದ್ರೂ ಇದೆಲ್ಲ ಭಕ್ತರ ತಪ್ಪು ಎಂದೇ ಆತ ಹೇಳಿದ್ದಾನೆ. ಬಾಬಾ ಆಗ್ಲಿ ಅವರ ಸೆಕ್ಯೂರಿಟಿ ಆಗ್ಲಿ ಇದಕ್ಕೆ ಕಾರಣವಲ್ಲ. ನಿಧಾನವಾಗಿ ಹೋಗಿ, ಮೊದಲು ವೃದ್ಧರು, ಮಹಿಳೆ, ಮಕ್ಕಳಿಗೆ ಅವಕಾಶ ನೀಡಿ ಎಂದು ಬಾಬಾ ಹೇಳ್ತಿರ್ತಾರೆ. ಆದ್ರೆ ಜನರು ಕೇಳೋದಿಲ್ಲ. ಈ ದುರ್ಘಟನೆಗೆ ಭಕ್ತರೇ ಸ್ವಯಂ ಕಾರಣ ಎಂದು ಆತ ಹೇಳಿದ್ದಾನೆ.
ನಾಪತ್ತೆಯಾದ ಭೋಲೆ ಬಾಬಾ : ಘಟನೆ ನಡೆದ ನಂತ್ರ ಭೋಲೆಬಾಬಾ ತಲೆತಪ್ಪಿಸಿಕೊಂಡಿದ್ದಾರೆ. ಅವರನ್ನು ಹುಡುಕುವ ಪ್ರಯತ್ನ ನಡೆದಿದೆ. ಭೋಲೆಬಾಬಾ ಎಷ್ಟು ಸಂಪತ್ತು ಹೊಂದಿದ್ದಾರೆಂಬ ತನಿಖೆ ಕೂಡ ನಡೆದಿದೆ. ಮೈನ್‌ಪುರಿಯ ಬಿಚ್ವಾದಲ್ಲಿ ಭೋಲೆ ಬಾಬಾ ವಾಸಿಸುವ ಆಶ್ರಮವು ಕೋಟಿ ಮೌಲ್ಯದ್ದಾಗಿದೆ. ಅಲಿಗಢ್ ಜಿಟಿ ರಸ್ತೆಯಲ್ಲಿ ಬಳಿ ಇರುವ ಬಾಬಾರವರ ಈ ಆಶ್ರಮವು ಎಲ್ಲಾ ಸೌಲಭ್ಯಗಳನ್ನು ಹೊಂದಿದೆ.