* ಕಾಂಗ್ರೆಸ್‌ ಅವಧಿಯಲ್ಲೂ ಹೀಗೆ ಮಾಡಿಲ್ಲವೆ?* ಆಗೇಕೆ ನೀವು ಆದೇಶ ಪ್ರತಿ ಹರಿದು ಹಾಕ​ಲಿ​ಲ್ಲ?* ದೇಶದ ಆಸ್ತಿ ಮಾರಿ ದುಡ್ಡು ಮಾಡಿ​ದ​ವ​ರು ನೀವು* ಆಸ್ತಿ ನಗದೀಕರಣ ಟೀಕಿಸಿದ ರಾಹುಲ್‌ಗೆ ನಿರ್ಮಲಾ ತಿರುಗೇಟು

ಮುಂಬೈ(ಆ.26): ‘6 ಲಕ್ಷ ಕೋಟಿ ರು.ಬಂಡವಾಳ ಸಂಗ್ರಹಣೆ ಸಲುವಾಗಿ ಸೋಮವಾರ ಘೋಷಿಸಲಾದ ಆಸ್ತಿ ನಗದೀಕರಣ ಯೋಜನೆಯನ್ನು ಟೀಕಿಸಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಹರಿಹಾಯ್ದಿದ್ದಾರೆ. ‘ಈ ಯೋಜನೆ ಏನು? ಅದರಿಂದ ಏನಾಗುತ್ತದೆ ಎಂಬುದರ ಅರಿವಾದರೂ ರಾಹುಲ್‌ಗಿದೆಯೇ? ದೇಶದ ಆಸ್ತಿ ಮಾರಿ​ದುಡ್ಡು ಮಾಡಿ​ಕೊಂಡ​ವರು ನೀವು’ ಎಂದು ವ್ಯಂಗ್ಯವಾಡಿದ್ದಾರೆ.

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಿರ್ಮಲಾ ‘2008ರಲ್ಲಿ ಕಾಂಗ್ರೆಸ್‌ ಅವಧಿಯಲ್ಲಿಯೇ ಮುಂಬೈ-ಪುಣೆ ಹೆದ್ದಾರಿ ನಗದೀಕರಣದ ಮೂಲಕ 8000 ಕೋಟಿ ರು. ಸಂಗ್ರಹಿಸಲಾಗಿತ್ತು. ನವದೆಹಲಿ ರೈಲ್ವೆ ನಿಲ್ದಾಣವನ್ನು ಗುತ್ತಿಗೆ ನೀಡಲು ಯುಪಿಎ ಸರ್ಕಾರವೇ ಆಹ್ವಾನ ನೀಡಿತ್ತು. ಹಾಗಿದ್ದರೆ ನೀವು ರೈಲ್ವೆ ನಿಲ್ದಾಣವನ್ನು ಮಾರಿಕೊಂಡಿದ್ದೀರಾ?’ ಎಂದು ಪ್ರಶ್ನಿಸಿದ್ದಾರೆ.

‘ರಾಹುಲ್‌ ಗಾಂಧಿಗೆ ನಿಜವಾಗಲೂ ಯೋಜನೆ ಬಗ್ಗೆ ವಿರೋಧವಿದ್ದರೆ, ಈ ಹಿಂದೆ ತಮ್ಮದೇ ಸರ್ಕಾರ ಹೊರಡಿಸಿದ್ದ ಸುಗ್ರೀವಾಜ್ಞೆ ಪ್ರತಿಯನ್ನು ಹರಿದು ಎಸೆದಂತೆ ಈ ಯೋಜನೆಯ ಪ್ರತಿಗಳನ್ನು ಏಕೆ ಹರಿದು ಎಸೆಯಲಿಲ್ಲ?’ ಎಂದು ಪ್ರಶ್ನಿಸಿದ್ದಾರೆ.