ನವದೆಹಲಿ(ಫೆ.11): ಕೇಂದ್ರದಲ್ಲಿ ಸರ್ಕಾರವನ್ನು ಉರುಳಿಸುವುದು ನಮ್ಮ ಉದ್ದೇಶ ಅಲ್ಲ. ಆದರೆ, ನಮ್ಮ ಸಮಸ್ಯೆಗೆ ಪರಿಹಾರ ದೊರೆಯಬೇಕಿದೆ. ಕೇಂದ್ರ ಸರ್ಕಾರ ರೈತರ ವಿಷಯವನ್ನು ಬಗೆಹರಿಸುವವರೆಗೂ ಪ್ರತಿಭಟನೆ ಮುಂದುವರಿಯಲಿದೆ ಎಂದು ಭಾರತ್‌ ಕಿಸಾನ್‌ ಯೂನಿಯನ್‌ನ ಮುಖಂಡ ರಾಕೇಶ್‌ ಟಿಕಾಯತ್‌ ಹೇಳಿದ್ದಾರೆ.

ಸಿಂಘು ಗಡಿಯಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ವಾಪಸ್‌ ಪಡೆಯಬೇಕು ಮತ್ತು ಕನಿಷ್ಠ ಬೆಂಬಲ ದರವನ್ನು ಖಾತರಿಪಡಿಸಲು ಕಾನೂನು ಜಾರಿ ಆಗಬೇಕು ಎಂದು ನಾವು ಬಯಸಿದ್ದೇವೆ. ಸರ್ಕಾರ ಉರುಳಿಸುವುದು ನಮ್ಮ ಉದ್ದೇಶ ಅಲ್ಲ. ಪ್ರತಿಭಟನೆ ದೀರ್ಘ ಅವಧಿಯದ್ದಾಗಿದ್ದು, ರೈತ ಮುಖಂಡರ ಜೊತೆ ಸರ್ಕಾರ ಮಾತುಕತೆ ನಡೆಸುವವರೆಗೂ ಮುಂದುವರಿಯಲಿದೆ.

ಅಲ್ಲದೇ ಪ್ರತಿಭಟನೆಯನ್ನು ದೇಶದೆಲ್ಲೆಡೆ ವಿಸ್ತರಿಸಲು ರೈತ ಮುಖಂಡರು ವಿವಿಧ ಭಾಗಗಳಿಗೆ ಪ್ರವಾಸ ಕೈಗೊಳ್ಳಲಿದ್ದಾರೆ. ದೇಶದೆಲ್ಲೆಡೆ ದೊಡ್ಡ ಮಟ್ಟದ ಸಭೆಗಳನ್ನು ಆಯೋಜಿಸುವ ಮೂಲಕ ಪ್ರತಿಭಟನೆಯನ್ನು ವಿಸ್ತರಿಸಲಾಗುವುದು. 40 ಲಕ್ಷ ಟ್ರ್ಯಾಕ್ಟರ್‌ಗಳು ಇದಕ್ಕೆ ಬಳಕೆ ಆಗಲಿವೆ. ಸಂಯಕ್ತ ಕಿಸಾನ್‌ ಮೋರ್ಚಾದಲ್ಲಿ ಯಾವುದೇ ಒಡಕು ಇಲ್ಲ. ಈ ಬಗ್ಗೆ ಕೇಂದ್ರ ಸರ್ಕಾರ ಭ್ರಮೆಯಲ್ಲಿ ಇರಬಾರದು ಎಂದು ಟಿಕಾಯತ್‌ ಹೇಳಿದ್ದಾರೆ.