ನವದೆಹಲಿ[ಡಿ.02]: ದೇಶದ ಶಾಂತಿ ಕಾಪಾಡುವ ದಿಸೆಯಲ್ಲಿ ಹಗಲಿರುಳು ಕಾರ್ಯ ನಿರ್ವಹಿಸುವ ಸಿಆರ್‌ಪಿಎಫ್‌ನ ಯೋಧರಿಗೆ ವಾರ್ಷಿಕ 100 ದಿನಗಳ ಕಾಲ ಕುಟುಂಬ ಸದಸ್ಯರೊಂದಿಗೆ ಕಾಲ ಕಳೆಯುವ ಅವಕಾಶ ಕಲ್ಪಿಸುವ ಸಲುವಾಗಿ ಸರ್ಕಾರ ಕಾರ್ಯಪ್ರವೃತ್ತವಾಗಿದೆ ಎಂದು ಕೇಂದ್ರ ಗೃಹ ಇಲಾಖೆಯ ರಾಜ್ಯ ಸಚಿವ ನಿತ್ಯಾನಂದ ರಾಯ್‌ ತಿಳಿಸಿದ್ದಾರೆ.

ಭಾನುವಾರ ಇಲ್ಲಿ ನಡೆದ ಬಿಎಸ್‌ಎಫ್‌ನ 55ನೇ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಬಿಎಸ್‌ಎಫ್‌ನ ಸೇನಾ ತುಕಡಿಗಳು ಮತ್ತು ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಅವರು, ‘ಕಾಶ್ಮೀರದಲ್ಲಿ ಸೇವೆಗೆ ನಿಯೋಜನೆಯಾಗಿರುವ ಯೋಧರಿಗೆ ದೆಹಲಿಗೆ ಆಗಮಿಸಲು ವಿಮಾನ ಸೇವೆ ಸೇರಿದಂತೆ ಸಿಆರ್‌ಪಿಎಫ್‌ ಯೋಧರಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಯೋಧರ ನಿವೃತ್ತಿ ವಯೋಮಿತಿಯನ್ನು 60 ವರ್ಷಕ್ಕೆ ಏರಿಸಲಾಗಿದ್ದು, ಆಧುನಿಕ ತಂತ್ರಜ್ಞಾನಗಳನ್ನು ಸೈನಿಕರಿಗೆ ಕಲ್ಪಿಸಲು ಸರ್ಕಾರ ಬದ್ಧವಾಗಿದೆ’ ಎಂದಿದ್ದಾರೆ.

ಬಿಎಸ್‌ಎಫ್‌ನ ಅವಿಶ್ರಾಂತ ಸೇವೆಯ ಪರಿಣಾಮ ಡೇರಾ ಬಾಬಾ ನಾನಕ್‌ ಬಳಿಯಿರುವ ಕರ್ತಾರ್‌ಪುರ ಕಾರಿಡಾರ್‌ ಸುರಕ್ಷಿತವಾಗಿದೆ. ಯೋಧರ ಕಾರಣದಿಂದಾಗಿ ಈ ಭಾಗದಲ್ಲಿ ಉಗ್ರರು ಅಥವಾ ಶತ್ರು ಸೈನಿಕರು ಗಡಿ ನುಸುಳಲು ಅಥವಾ ವಿಧ್ವಂಸಕ ಕೃತ್ಯ ಎಸಗಲು ಹಲವು ಬಾರಿ ಯೋಚಿಸುವಂತಾಗಿದೆ ಎಂದು ಯೋಧರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇನ್ನು ಸೇನಾ ಪದಕ ಪಡೆದ ಯೋಧರು ಮತ್ತು ಸೇವಾ ಅವಧಿಯಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧರ ಪತ್ನಿಯರಿಗೆ ಕೈಗೆಟುಕುವ ದರದಲ್ಲಿ 1 ಬಿಎಚ್‌ಕೆ ಫ್ಲಾಟ್‌ಗಳನ್ನು ನೀಡುವುದಾಗಿ ದೆಹಲಿ ಅಭಿವೃದ್ಧಿ ಪ್ರಾಧಿಕಾರ ಹೇಳಿದೆ.

ಕಾಶ್ಮೀರದಲ್ಲಿ ವಿಧ್ವಂಸಕ ಕೃತ್ಯಕ್ಕೆ ಯತ್ನ:

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುತ್ತಿದ್ದ ಸಂವಿಧಾನದ 370ನೇ ವಿಧಿ ರದ್ದು ಬಳಿಕ ಭಾರತ ವಿರೋಧಿ ಪಡೆಗಳು ಆ ಭಾಗದಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ಯತ್ನಿಸುತ್ತಿವೆ. ಆದರೆ, ಬಿಎಸ್‌ಎಫ್‌ ಸೇರಿದಂತೆ ಇನ್ನಿತರ ಭದ್ರತಾ ತಂಡಗಳು ದೇಶವಿರೋಧಿ ಚಟುವಟಿಕೆಗಳನ್ನು ನಡೆಯದಂತೆ ಕಾರ್ಯ ನಿರ್ವಹಿಸುತ್ತಿವೆ. 370ನೇ ವಿಧಿ ರದ್ದು ಬಳಿಕ ಜಮ್ಮು-ಕಾಶ್ಮೀರದಲ್ಲಿ ಧನಾತ್ಮಕ ಬೆಳವಣಿಗೆಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.