ನವದೆಹಲಿ(ಜ.31): ‘ರೈತರ ಪ್ರತಿಭಟನೆಗೆ ಕಾರಣವಾಗಿರುವ ವಿವಾದಿತ 3 ಕೃಷಿ ಕಾಯ್ದೆಗಳ ಅನುಷ್ಠಾನಕ್ಕೆ 18 ತಿಂಗಳ ಕಾಲ ತಡೆ ನೀಡಲು ಈಗಲೂ ಸಿದ್ಧರಿದ್ದೇವೆ. ರೈತರಿಂದ ಒಂದು ದೂರವಾಣಿ ಕರೆ ಬಂದರೆ ಸಾಕು, ಈಗಲೂ ಮಾತುಕತೆಗೆ ಸರ್ಕಾರ ತಯಾರಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅನ್ನದಾತರಿಗೆ ಮತ್ತೊಂದು ಆಫರ್‌ ನೀಡಿದ್ದಾರೆ.

ಇದಕ್ಕೆ ಪೂರಕವಾಗಿ ಪ್ರತಿಭಟನೆಯ ನೇತೃತ್ವ ವಹಿಸಿರುವ ಸಂಯುಕ್ತ ಕಿಸಾನ್‌ ಮೋರ್ಚಾ ಪ್ರತಿಕ್ರಿಯಿಸಿದ್ದು, ‘ನಾವು ಕೂಡ ಮಾತುಕತೆ ಬಾಗಿಲನ್ನು ತೆರೆದೇ ಇದ್ದೇವೆ’ ಎಂದಿದೆ. ಈ ಮೂಲಕ ಮತ್ತೆ ಮಾತುಕತೆಯ ಆಸೆ ಚಿಗುರಿದೆ.

ಶನಿವಾರ ಬೆಳಗ್ಗೆ ಸಂಸತ್‌ ಅಧಿವೇಶನದ ಹಿನ್ನೆಲೆಯಲ್ಲಿ ಸರ್ವಪಕ್ಷಗಳ ಸಭಾನಾಯಕರ ಜತೆ ಶನಿವಾರ ಸಭೆ ನಡೆಸಿದ ಮೋದಿ, ಈಗಾಗಲೇ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಅವರು ರೈತರ ಮುಂದೆ ಇಟ್ಟಿರುವ ಪ್ರಸ್ತಾವವನ್ನು ಪುನರುಚ್ಚರಿಸಿದರು.

‘ರೈತರ ವಿಚಾರವನ್ನು ಕೇಂದ್ರ ಸರ್ಕಾರ ಮುಕ್ತ ಮನಸ್ಸಿನಿಂದ ನೋಡುತ್ತಿದೆ. 18 ತಿಂಗಳ ಕಾಲ ಕೃಷಿ ಮಸೂದೆಗಳಿಗೆ ತಡೆ ನೀಡಿ, ರೈತರ ಜತೆ ಮಾತುಕತೆ ಮುಂದುವರಿಸುವ ಪ್ರಸ್ತಾವವನ್ನು ಕೃಷಿ ಸಚಿವರು ನೀಡಿದ್ದರು. ಅದಕ್ಕೆ ನಾವು ಈಗಲೂ ಬದ್ಧರಿದ್ದೇವೆ. ಸಚಿವ ನರೇಂದ್ರ ಸಿಂಗ್‌ ತೋಮರ್‌ ಅವರು ಒಂದು ಫೋನ್‌ ಕರೆ ಮಾಡಿದರೂ ರೈತರ ಜತೆಗೆ ಮಾತುಕತೆಗೆ ಸಿದ್ಧರಿದ್ದಾರೆ ಎಂದು ಮೋದಿ ಅವರು ಸರ್ವಪಕ್ಷ ನಾಯಕರಿಗೆ ತಿಳಿಸಿದರು’ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಅವರು ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.

‘ಪ್ರತಿಭಟನಾ ರೈತರು ವ್ಯಕ್ತಪಡಿಸಿರುವ ವಿಚಾರಗಳನ್ನು ಮಾತುಕತೆ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು’ ಎಂದು ಜೋಶಿ ಹೇಳಿದರು.

ಸಭೆಯಲ್ಲಿ ಕಾಂಗ್ರೆಸ್ಸಿನ ಗುಲಾಂ ನಬಿ ಆಜಾದ್‌, ತೃಣಮೂಲ ಕಾಂಗ್ರೆಸ್ಸಿನ ಸುದೀಪ್‌ ಬಂಡೋಪಾಧ್ಯಾಯ, ಶಿರೋಮಣಿ ಅಕಾಲಿದಳದ ಬಲ್ವಿಂದರ್‌ ಸಿಂಗ್‌ ಭುಂಡೇರ್‌ ಹಾಗೂ ಶಿವಸೇನೆಯ ವಿನಾಯಕ ರಾವುತ್‌ ಅವರು ಪಾಲ್ಗೊಂಡು, ರೈತರ ಪ್ರತಿಭಟನೆ ವಿಚಾರವನ್ನು ಪ್ರಸ್ತಾಪಿಸಿದರು. ಆಗ ಮೋದಿ ಅವರು, ‘ಈ ವಿಚಾರದಲ್ಲಿ ಕಾನೂನು ಪ್ರಕಾರ ಸರ್ಕಾರ ನಡೆಯಲಿದೆ’ ಎಂದು ಹೇಳಿದರು ಎಂದು ಮೂಲಗಳು ತಿಳಿಸಿವೆ.

ಈ ನಡುವೆ, ದೊಡ್ಡ ಪಕ್ಷಗಳು ಸಂಸತ್‌ ಬಜೆಟ್‌ ಅಧಿವೇಶನ ಸರಾಗವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದೂ ಪ್ರಧಾನಿ ಕೋರಿದರು.

ರೈತರ ಜತೆ ನಡೆಸಿದ 9ನೇ ಸುತ್ತಿನ ಮಾತುಕತೆ ವೇಳೆ ಕೃಷಿ ಮಸೂದೆಗಳಿಗೆ ಒಂದೂವರೆ ವರ್ಷ ತಡೆ ನೀಡಿ, ರೈತರ ಜತೆ ಮಾತುಕತೆಗೆ ಸಿದ್ಧ ಎಂಬ ಪ್ರಸ್ತಾವವನ್ನು ನರೇಂದ್ರ ಸಿಂಗ್‌ ತೋಮರ್‌ ಇಟ್ಟಿದ್ದರು. ಇದಕ್ಕೆ ರೈತರು ಒಪ್ಪಿರಲಿಲ್ಲ. ಕೃಷಿ ಕಾಯ್ದೆಗಳನ್ನು ಸಾರಾಸಗಟಾಗಿ ಹಿಂಪಡೆಯಬೇಕು ಎಂಬ ಬೇಡಿಕೆ ಇಟ್ಟಿದ್ದರು. 11ನೇ ಸುತ್ತಿನ ಮಾತುಕತೆ ವೇಳೆಯೂ ವಿದೇ ವಿಷಯ ಪ್ರಸ್ತಾಪಿಸಿದ್ದ ತೋಮರ್‌, ಚೆಂಡು ರೈತರ ಅಂಗಳದಲ್ಲಿದೆ ಎಂದು ಘೋಷಿಸಿದ್ದರು. ಅದಕ್ಕೂ ರೈತರು ಸಮ್ಮತಿಸಿಲ್ಲ. ಹೀಗಾಗಿ ವಿಚಾರ ಕಗ್ಗಂಟಾಗಿದೆ. ಸಂಸತ್ತಿನಲ್ಲೂ ಭಾರೀ ಧೂಳೆಬ್ಬಿಸುವ ಸಾಧ್ಯತೆ ಇದೆ.

ದಿಲ್ಲಿಯತ್ತ ಇನ್ನಷ್ಟು ರೈತರ ದಂಡು

ಗಾಜಿಪುರ: ಕೃಷಿ ಕಾಯ್ದೆಗಳ ವಿರುದ್ಧ ಗಾಜಿಪುರದ ದೆಹಲಿ-ಮೇರಠ್‌ ಹೆದ್ದಾರಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಶನಿವಾರ ಮತ್ತಷ್ಟುಜನಸಾಗರ ಹರಿದುಬಂದಿದೆ. ಗಣರಾಜ್ಯೋತ್ಸವದ ದಿನ ನಡೆದ ಹಿಂಸಾಚಾರದ ನಂತರ ಒಂದೊಂದೇ ರೈತ ಸಂಘಟನೆಗಳು ವಾಪಸ್‌ ಹೋಗಿದ್ದವು. ಆದರೆ, ಈಗ ಮತ್ತೆ ವಾಪಸ್‌ ಬರಲು ಆರಂಭಿಸಿವೆ.

ಇಂಟರ್‌ನೆಟ್‌ ಸ್ಥಗಿತ

ರೈತರ ಪ್ರತಿಭಟನೆ ನಡೆಯುತ್ತಿರುವ ದೆಹಲಿಯ ಸುತ್ತಲಿನ ಗಡಿ ಪ್ರದೇಶಗಳಾದ ಸಿಂಘು, ಗಾಜಿಪುರ ಹಾಗೂ ಟಿಕ್ರಿ ಪ್ರದೇಶಗಳಲ್ಲಿ ಕೇಂದ್ರ ಗೃಹ ಇಲಾಖೆ ಶನಿವಾರ ಇಂಟರ್ನೆಟ್‌ ಸೇವೆಯನ್ನು ತಾತ್ಕಾಲಿಕವಾಗಿ ತಡೆ ಹಿಡಿದಿದೆ. ಸುಳ್ಳು ಸುದ್ದಿಗಳು ಹರಿದಾಡಿ ಸಂಭವಿಸಬಹುದಾದ ಅಹಿತಕರ ಘಟನೆ ತಡೆ ಹಾಗೂ ಜನ ಸಾಮಾನ್ಯರ ಸುರಕ್ಷತೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಹಣ ಬಂದಿದ್ದೆಲ್ಲಿಂದ? ಇ.ಡಿ. ತನಿಖೆ ಶುರು

ರೈತರ ಪ್ರತಿಭಟನೆಗೆ ಹಣ ಎಲ್ಲಿಂದ ಹರಿದುಬರುತ್ತಿದೆ ಎಂಬ ಬಗ್ಗೆ ತನಿಖೆ ನಡೆಸಲು ಜಾರಿ ನಿರ್ದೇಶನಾಲಯ (ಇ.ಡಿ.) ಮುಂದಾಗಿದೆ. ಪ್ರತಿಭಟನೆಗೆ ವಿದೇಶಗಳಿಂದ ಹವಾಲಾ ಮೂಲಕ ಹಣ ಬಂದಿರಬಹುದು, ಇವುಗಳನ್ನು ಬಳಸಿ ಎನ್‌ಜಿಒಗಳು ಪ್ರತಿಭಟನೆಗೆ ಉತ್ತೇಜನ ನೀಡಿರಬಹುದು ಎಂಬ ಶಂಕೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಈ ಕುರಿತು ಕೆಲ ಸಾಕ್ಷ್ಯಗಳೂ ಈಗಾಗಲೇ ಸಿಕ್ಕಿವೆ ಎನ್ನಲಾಗಿದೆ.