ಲಸಿಕೆ ಪಡೆದ ಕೆಲವರಲ್ಲಿ ರಕ್ತದ ಹೆಪ್ಪುಗಟ್ಟುವಿಕೆಯ ಸಮಸ್ಯೆ| ಆಸ್ಟ್ರಾಜೆನೆಕಾ ಕೋವಿಡ್‌ ಲಸಿಕೆಯನ್ನು 55 ವರ್ಷದೊಳಗಿನವರಿಗೆ ನೀಡುವುದನ್ನು ಕೆನಡಾ ಸ್ಥಗಿತಗೊಳಿಸಿದೆ

ಟೊರೆಂಟೋ/ಬರ್ಲಿನ್(ಮಾ.31)‌: ಲಸಿಕೆ ಪಡೆದ ಕೆಲವರಲ್ಲಿ ರಕ್ತದ ಹೆಪ್ಪುಗಟ್ಟುವಿಕೆಯ ಸಮಸ್ಯೆಗೆ ಕಾರಣವಾಗುತ್ತಿದೆ ಎನ್ನಲಾದ ಆಸ್ಟ್ರಾಜೆನೆಕಾ ಕೋವಿಡ್‌ ಲಸಿಕೆಯನ್ನು 55 ವರ್ಷದೊಳಗಿನವರಿಗೆ ನೀಡುವುದನ್ನು ಕೆನಡಾ ಸ್ಥಗಿತಗೊಳಿಸಿದೆ. ಜರ್ಮನಿಯಲ್ಲಿ 60 ವರ್ಷ ಕೆಳಗಿನವರಿಗೂ ಈ ಲಸಿಕೆ ನೀಡಿಕೆ ತಡೆಹಿಡಿಯಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭಾರತ ಸೇರಿದಂತೆ 70ಕ್ಕೂ ಹೆಚ್ಚು ದೇಶಗಳಲ್ಲಿ ಆಸ್ಟ್ರಾಜೆನೆಕಾ ಲಸಿಕೆ (ಆಕ್ಸ್‌ಫರ್ಡ್‌ ವಿವಿ ಮತ್ತು ಆಸ್ಟ್ರಾಜೆನೆಕಾ ಕಂಪನಿಯ ಲಸಿಕೆ. ಭಾರತದಲ್ಲಿ ಇದರ ಹೆಸರು ಕೋವಿಶೀಲ್ಡ್‌) ನೀಡಲಾಗುತ್ತಿದೆ. ಆದರೆ, ಇದನ್ನು ಪಡೆದವರಲ್ಲಿ ಅಪರೂಪದ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆ ಕಂಡುಬರುತ್ತಿದೆ, ಅವರ ಪೈಕಿ ಶೇ.40ರಷ್ಟುಮಂದಿ ಸಾವಿಗೀಡಾಗಬಹುದು ಎಂಬ ಭೀತಿ ಎದುರಾಗಿದೆ.

ಹೀಗಾಗಿ ಹೆಚ್ಚಿನ ಅಧ್ಯಯನಕ್ಕಾಗಿ ಕೆಲವೆಡೆ ಇದರ ಬಳಕೆಯನ್ನು ನಿರ್ಬಂಧಿಸಲಾಗುತ್ತಿದೆ. ಅದರಂತೆ ಕೆನಡಾದಲ್ಲಿ 55 ವರ್ಷದೊಳಗಿನವರಿಗೆ ಹಾಗೂ ಜರ್ಮನಿಯಲ್ಲಿ 60 ವರ್ಷದೊಳಗಿನವರಿಗೆ ಇದನ್ನು ನೀಡುವುದನ್ನು ನಿಲ್ಲಿಸಲಾಗಿದೆ.

ಇದೇ ಕಾರಣಕ್ಕೆ ಈಗಾಗಲೇ ಯುರೋಪ್‌ ಸೇರಿದಂತೆ ಹಲವಾರು ದೇಶಗಳಲ್ಲಿ ಈ ಲಸಿಕೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ.