ಇಸ್ಲಮಾಬಾದ್[ಫೆ.28]: ಪಾಕ್ ವಶದಲ್ಲಿರುವ ಭಾರತೀಯ ವಾಯು ಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ರನ್ನು ತಡ ಮಾಡದೇ ಬಿಡುಗಡೆಗೊಳಿಸಬೇಕು. ಅಲ್ಲದೇ ಸುರಕ್ಷಿತವಾಗಿ ಭಾರತ ಸೇರುವಂತೆ ವ್ಯವಸ್ಥೆ ಮಾಡಬೇಕು ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಝುಲ್ಫಿಕರ್ ಅಲಿ ಭುಟ್ಟೋ ಮೊಮ್ಮಗಳು ಹಾಗೂ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಮಗಳು ಫಾತಿಮಾ ಭುಟ್ಟೋ, ಪ್ರಧಾನಿ ಇಮ್ರಾನ್ ಖಾನ್ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಭಾರತ ಹಾಗೂ ಪಾಕ್ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ಸಂದರ್ಭದಲ್ಲಿ ಪಾಕ್ ಭಾರತೀಯ ವಾಯುಪಡೆಯು ಮಿಗ್ 21 ವಿಮಾನವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತ್ತು. ಈ ಸಂದರ್ಭದಲ್ಲಿ ಪೈಲಟ್ ಅಭಿನಂದನ್ ಸುರಕ್ಷಿತವಾಗಿ ಕೆಳಕ್ಕೆ ಹಾರಿದ್ದರು. ಆದರೆ ದುರಾದೃಷ್ಟವಶಾತ್ ಗಡಿ ನಿಯಂತ್ರಣ ರೇಖೆಯಾಚೆ ಇಳಿದಿದ್ದರು. ಹೀಗಾಗಿ ಪಾಕ್ ಸೇನೆ ಅಭಿನಂದನ್ ರನ್ನು ಬಂಧಿಸಿತ್ತು. 

ಸದ್ಯ ಭಾರತವೂ ತನ್ನ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ರನ್ನು ಮರಳಿ ಕರೆತರುವ ಯತ್ನದಲ್ಲಿದೆ. ಈಗಾಗಲೇ ಭಾರತವು ಪಾಕಿಸ್ತಾನಕ್ಕೆ ಸಮನ್ಸ್ ಜಾರಿಗೊಳಿಸಿದ್ದು, ಅಭಿನಂದನ್ ರನ್ನು ಕೂಡಲೇ ಸುರಕ್ಷಿತವಾಗಿ ಬಿಡುಗಡೆ ಮಾಡುವಂತೆ ಒತ್ತಾಯಿಸಿದೆ. ಇದರೊಂದಿಗೆ ಜಿನಿವಾ ಒಪ್ಪಂದದಂತೆ ಬಂಧಿಸಲ್ಪಟ್ಟ ಅಭಿನಂದನ್ ಅವರಿಗೆ ಕಿರುಕುಳ ನೀಡದಂತೆಯೂ ತಾಕೀತು ಮಾಡಿದೆ.