ರಾಂಚಿ(ಏ.18): ಬಹುಕೋಟಿ ಮೇವು ಹಗರಣದ ದುಮ್ಕಾ ಖಜಾನೆ ಪ್ರಕರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್‌ ಯಾದವ್‌ (73) ಅವರಿಗೆ ಜಾರ್ಖಂಡ್‌ ಹೈಕೋರ್ಟ್‌ ಶನಿವಾರ ಜಾಮೀನು ಮಂಜೂರು ಮಾಡಿದೆ. ಜೈಲು ಶಿಕ್ಷೆಗೆ ಗುರಿಯಾಗಿ ಪ್ರಸ್ತುತ ಚಿಕಿತ್ಸೆಗಾಗಿ ದೆಹಲಿಯ ಏಮ್ಸ್‌ನಲ್ಲಿರುವ ಲಾಲೂ ಪ್ರಸಾದ್‌ ಮೇವಿನ ಹಗರಣಕ್ಕೆ ಸಂಬಂಧಿಸಿದ 4 ಪ್ರಕರಣ ಪೈಕಿ ಮೂರರಲ್ಲಿ ಈಗಾಗಲೇ ಜಾಮೀನು ಪಡೆದಿದ್ದರು.

ಇದೀಗ ನಾಲ್ಕನೇ ಪ್ರಕರಣದಲ್ಲಿಯೂ ಜಾಮೀನು ಲಭಿಸಿದೆ. ಈ ಮೂಲಕ ಲಾಲೂ ಅವರ ಮೂರು ವರ್ಷ 4 ತಿಂಗಳ ಜೈಲುವಾಸಕ್ಕೆ ತೆರೆ ಬೀಳಲಿದೆ. ಆದರೆ ಜಾಮೀನು ಅವಧಿಯಲ್ಲಿ ಅನುಮತಿ ಇಲ್ಲದೆ ವಿದೇಶಕ್ಕೆ ಪ್ರಯಾಣಿಸುವಂತಿಲ್ಲ ಹಾಗೂ ವಿಳಾಸ, ಮೊಬೈಲ್‌ ನಂಬರ್‌ ಬದಲಿಸುವಂತಿಲ್ಲ ಎಂದು ಕೋರ್ಟ್‌ ಆದೇಶಿಸಿದೆ.

ಆದರೆ ಇನ್ನೂ ಹಲವು ಕಾನೂನು ಪ್ರಕ್ರಿಯೆಗಳು ಬಾಕಿ ಇರುವ ಕಾರಣ ಸೋಮವಾರ ಬಿಡುಗಡೆಯಾಗುವ ನಿರೀಕ್ಷೆ ಇದೆ. ಈ ಸಂಬಂಧ ಸೋಮವಾರ ಇಲ್ಲಿನ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ತೆರಳುವುದಾಗಿ ಲಾಲೂ ಪರ ವಕೀಲರು ತಿಳಿಸಿದ್ದಾರೆ. ಬಿಹಾರ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಲಾಲೂ ಇಲ್ಲಿನ ಜಾರ್ಖಂಡ್‌ ನಗರದ ಖಜಾನೆಯಿಂದ 3.13 ಕೋಟಿ ರು. ಅಕ್ರಮವಾಗಿ ಬಳಸಿಕೊಂಡಿದ್ದರು.

 ಈ ಪ್ರಕರಣದಲ್ಲಿ ಮಾ.24, 2018ರಂದು ಕೋರ್ಟ್‌ 14 ವರ್ಷಗಳ ಸೆರೆವಾಸ ಶಿಕ್ಷೆ ಮತ್ತು 90 ಲಕ್ಷ ದಂಡ ವಿಧಿಸಿತ್ತು.