70 ಅಲ್ಲ, 107 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತೆ ರಾಮ ಮಂದಿರ, ಟ್ರಸ್ಟ್‌ನಿಂದ ತಯಾರಿ!
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರದ ಸಂಕೀರ್ಣವನ್ನು ವಿಸ್ತರಿಸುವ ಉದ್ದೇಶ| 1 ಕೋಟಿ ನೀಡಿ ಪಕ್ಕದ ಭೂಮಿ ಖರೀದಿ
ಲಖನೌ(ಮಾ.04): ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರದ ಸಂಕೀರ್ಣವನ್ನು ವಿಸ್ತರಿಸುವ ಉದ್ದೇಶದಿಂದ ದೇಗುಲಕ್ಕೆ ಹೊಂದಿಕೊಂಡಿದ್ದ 676.85 ಚದರ ಮೀಟರ್ ಭೂಮಿಯನ್ನು 1 ಕೋಟಿ ರು. ನೀಡಿ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಖರೀದಿ ಮಾಡಿದೆ.
ಟ್ರಸ್ಟಿನ ಪ್ರಧಾನ ಕಾರ‍್ಯದರ್ಶಿ ಚಂಪತ್ ರೈ ಅವರು ಒಂದು ಕೋಟಿ ರು. ನೀಡಿ ಮಾಲಿಕ ಸ್ವಾಮಿ ದೀಪ್‌ನಾರಾಯಣ್ ಅವರಿಂದ ಭೂಮಿಯನ್ನು ಕೊಂಡುಕೊಂಡಿದ್ದಾರೆ. ಜಮೀನಿನ ನೋಂದಣಿ ಕಾರ‍್ಯ ಮಂಗಳವಾರ ಪೂರ್ಣಗೊಂಡಿದೆ.
ಟ್ರಸ್ಟ್ ಬಳಿ 70 ಎಕರೆ ಜಾಗ ಇದೆ. ಅದನ್ನು 107 ಎಕರೆಗೆ ವಿಸ್ತರಿಸಿ ಅಲ್ಲಿ ಮ್ಯೂಸಿಯಂ, ಗ್ರಂಥಾಲಯ, ರಾಮನ ಜೀವನವನ್ನು ಪ್ರಚುರಪಡಿಸುವ ಫೋಟೋ ಗ್ಯಾಲರಿ ಒಳಗೊಂಡ ಬೃಹತ್ ಸಂಕೀರ್ಣ ನಿರ್ಮಾಣದ ಯೋಜನೆ ರೂಪಿಸಲಾಗಿದೆ. ಮಂದಿರ ನಿರ್ಮಾಣ ಕಾರ‍್ಯಕ್ಕೆ ಈಗಾಗಲೇ 2100 ಕೋಟಿ ರು. ನಿಧಿ ಸಂಗ್ರಹವಾಗಿದೆ.