Tirupati: 6 ದಿನಗಳ ಅಂತರದಲ್ಲಿ ತಿರುಪತಿಯಲ್ಲಿ ಮತ್ತೊಂದು ಅವಘಡ!
ತಿರುಪತಿಯಲ್ಲಿ ಆರು ದಿನಗಳ ಅಂತರದಲ್ಲಿ ಮತ್ತೊಂದು ಅವಘಡ ಸಂಭವಿಸಿದೆ. ತಿರುಮಲ ತಿರುಪತಿಯ ವೆಂಕಟೇಶ್ವರ ದೇವಸ್ಥಾನದ 47ನೇ ಲಡ್ಡು ವಿತರಣಾ ಕೌಂಟರ್‌ನಲ್ಲಿ ಭಾರೀ ಅಗ್ನಿ ಅನಾಹುತವಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.
ಹೈದರಾಬಾದ್ (ಜ.13): ತಿರುಪತಿಯಲ್ಲಿ ಆರು ದಿನಗಳ ಅಂತರದಲ್ಲಿ ಮತ್ತೊಂದು ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಈ ಬಾರಿ ಯಾವುದೇ ಪ್ರಾಣಹಾನಿಯಾಗಿಲ್ಲ ಅನ್ನೋದು ಸಮಾಧಾನದ ವಿಚಾರವಾಗಿದೆ. ಸೋಮವಾರ ಮಧ್ಯಾಹ್ನ ತಿರುಪತಿ ದೇವಸ್ಥಾನದ ಆವರಣದಲ್ಲಿಯೇ ಅಗ್ನಿ ಅವಘಡ ಸಂಭವಿಸಿದೆ. ತಿರುಮಲ ತಿರುಪತಿಯ ವೆಂಕಟೇಶ್ವರ ದೇವಸ್ಥಾನದ 47ನೇ ಲಡ್ಡು ವಿತರಣಾ ಕೌಂಟರ್‌ನಲ್ಲಿ ಭಾರೀ ಅಗ್ನಿ ಅನಾಹುತವಾಗಿದೆ. ತಕ್ಷಣವೇ ಎಚ್ಚೆತ್ತುಕೊಂಡ ದೇವಸ್ಥಾನದ ಆಡಳಿತ ಮಂಡಳಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದೆ. ವೈಕುಂಠ ಏಕಾದಶಿ ನಿಮಿತ್ತ 10 ದಿನಗಳ ವೈಕುಂಠ ದ್ವಾರ ದರ್ಶನದಲ್ಲಿ ಹಾದು ಹೋಗಲು ಪ್ರತಿದಿನ ಲಕ್ಷಾಂತರ ಭಕ್ತರು ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ. 6 ದಿನಗಳ ಹಿಂದೆ ವೈಕುಂಠ ಏಕಾದಶಿಯ ವೈಕುಂಠ ದ್ವಾರ ದರ್ಶನ ಟಿಕೆಟ್‌ಗಾಗಿ ನಡೆದ ನೂಕುನುಗ್ಗಲಿನ ವೇಳೆ ಕಾಲ್ತುಳಿತ ಉಂಟಾಗಿ 6 ಮಂದಿ ಸಾವು ಕಂಡಿದ್ದರು.
ಬೆಂಕಿ ಹೊತ್ತಿಕೊಳ್ಳಲು ಕಾರಣವೇನು?: 47ನೇ ಕೌಂಟರ್‌ನಲ್ಲಿದ್ದ ಯುಪಿಎಸ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿತ್ತು. ಇದರಿಂದಾಗಿ ಬೆಂಕಿ ಹೊತ್ತಿಕೊಂಡು ದಟ್ಟವಾದ ಹೊಗೆ ಆವರಿಸಿತ್ತು. ಈ ವಿಚಾರ ಗೊತ್ತಾದ ಬೆನ್ನಲ್ಲಿಯೇ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿ ಆಗಬಹುದಾಗಿದ್ದ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ.ಬೆಂಕಿ ಕಾಣಿಸಿಕೊಂಡ ಕಾರಣ ಪ್ರಸಾದ ಪಡೆಯಲು ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರು ಓಡಿದ್ದು, ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು ಎಂದು ತಿಳಿದುಬಂದಿದೆ. ಸದ್ಯ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ.
6 ಭಕ್ತರ ಸಾವಿಗೆ ಕಾರಣವಾಗಿದ್ದ ಕಾಲ್ತುಳಿತ: ಜನವರಿ 10 ರಿಂದ ತಿರುಪತಿ ದೇವಸ್ಥಾನದಲ್ಲಿ ವೈಕುಂಟ ದ್ವಾರ ತೆರೆದಿದೆ. ಆದರೆ, ವೈಕುಂಠ ಏಕಾದಶಿಗೂ ಮುನ್ನವೇ ತಿರುಪತಿಯಲ್ಲಿ ದಾರುಣ ಘಟನೆ ನಡೆಸಿತ್ತು. ಕಳೆದ ಬುಧವಾರ ವೈಕುಂಠ ದ್ವಾರ ದರ್ಶನದ ಟಿಕೆಟ್‌ಗಾಗಿ ಭಾರೀ ಪ್ರಮಾಣದಲ್ಲಿ ನೂಕುನುಗ್ಗಲು ಉಂಟಾಗಿದ್ದರಿಂದ 6 ಮಂದಿ ಭಕ್ತರು ದಾರುಣ ಸಾವು ಕಂಡಿದ್ದರು. ಲಕ್ಷಾಂತರ ಭಕ್ತರ ಆಗಮನದಿಂದ ತಿರುಮಲ ಕ್ಷೇತ್ರ ಸದಾ ಸಡಗರದಿಂದ ಕೂಡಿರುತ್ತದೆ. ಇನ್ನು ವೈಕುಂಠ ಏಕಾದಶಿ ಅಂದರೆ ಅದಕ್ಕೆ ಇನ್ನಿಲ್ಲದ ಮಹತ್ವ. ಇದೇ ಕಾರಣಕ್ಕೆ ತಿರುಪತಿಯಲ್ಲಿ ಜನಸಾಗರವೇ ಹರಿದು ಬರುತ್ತಿದೆ.
ತಿರುಪತಿಯಲ್ಲಿ ಭಾರೀ ಕಾಲ್ತುಳಿತ, 6 ಮಂದಿ ದುರ್ಮರಣ, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ
ಘಟನೆ ನಡೆದ ಬೆನ್ನಲ್ಲಿಯೇ ಆಂಧ್ರ ಪ್ರದೇಶ ಸರ್ಕಾರ ನ್ಯಾಯಾಂಗ ತನಿಖೆಗೆ ಆದೇಶ ನೀಡಿದ್ದು, ಘಟನೆಯ ಸಂಬಂಧ ಇಬ್ಬರು ಡಿಸಿಪಿಗಳನ್ನು ಅಮಾನತು ಮಾಡಲಾಗಿದೆ. ಅದರೊಂದಿಗೆ ಮೃತ ಭಕ್ತರಿಗೆ 25 ಲಕ್ಷ ರೂಪಾಯಿ ಪರಿಹಾರವನ್ನೂ ಘೋಷಣೆ ಮಾಡಲಾಗಿದೆ.
ವೈಕುಂಠ ಏಕಾದಶಿ ಸಂಭ್ರಮ: ತಿರುಪತಿ ಕಾಲ್ತುಳಿತದ ಗಾಯಾಳುಗಳಿಗೆ ತಿಮ್ಮಪ್ಪನ ವಿಶೇಷ ದರ್ಶನ!