ನವದೆಹಲಿ( ನ. 11)   ಕೊರೋನಾ ಮತ್ತು ವಾಯುಮಾಲಿನ್ಯ ಕಾರಣಕ್ಕೆ ಅನೇಕ ರಾಜ್ಯಗಳು ದೀಪಾವಳಿ ಸಂದರ್ಭದ ಪಟಾಕಿ ನಿಷೇಧ ಮಾಡಿವೆ.  ಸುಪ್ರೀಂ ಕೋರ್ಟ್ ಸಹ ನಿಷೇಧದ ಪರ ನಿಂತಿದೆ.

ಪಟಾಕಿ ನಿಷೇಧದ ವಿರುದ್ಧ ಕೋಲ್ಕತ್ತಾ ಹೈಕೋರ್ಟ್ ನೀಡಿದ ಆದೇಶದ ವಿರುದ್ಧ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್  ತಿರಸ್ಕರಿಸಿ ಪಾಠ ಮಾಡಿದೆ.

'ಹಬ್ಬಗಳು ಬಹುಮುಖ್ಯ ಎನ್ನುವುದು ನಮಗೆ ಗೊತ್ತಿವೆ.  ಆದರೆ ಇಂದು ಜೀವನವೇ ಅಪಾಯದ ಸಂಕಷ್ಟದಲ್ಲಿದೆ'  ಎಂದು ಸುಪ್ರೀಂ ಹೇಳಿದೆ. ಹಬ್ಬಕ್ಕಿಂತ ಜೀವ ಮತ್ತು ಜೀವನ ಮುಖ್ಯ ಎಂದು ನ್ಯಾಯಾಲಯ ಹೇಳಿದೆ.

ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಇದ್ದ ನ್ಯಾಯಾಪೀಠ  ಇಂಥದ್ದೊಂದು ಆದೇಶ ನೀಡಿದೆ.  ಸಾಂಕ್ರಾಮಿಕ ಕರೋನಾ ಎಲ್ಲರನ್ನೂ ಕಾಡುತ್ತಿದ್ದು ನಾವು ಒಗ್ಗಟ್ಟಾಗಿ ಹೋರಾಟ ಮಾಡಬೇಕಿದೆ ಎಂದು ನ್ಯಾಯಮೂರ್ತಿಗಳು ಉಲ್ಲೇಖ ಮಾಡಿದರು.

ಪಶ್ಚಿಮ ಬಂಗಾಳದಲ್ಲಿ ದೀಪಾವಳಿ, ದುರ್ಗಾ ಪೂಜೆ ವೇಳೆ  ಪಟಾಕಿ ನಿಷೇಧ ಮಾಡಿರುವುದನ್ನು ಪ್ರಶ್ನೆ ಮಾಡಿ ಕೋಲ್ಕತ್ತಾ ನ್ಯಾಯಾಲಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಕೋಲ್ಕತ್ತಾ ಕೋರ್ಟ್ ಪಟಾಕಿ ನಿಷೇಧ ಸರಿ ಎಂದು ಹೇಳಿದ್ದಕ್ಕೆ  ಸುಪ್ರೀಂ ಕೋರ್ಟ್ ಮೊರೆಗೆ ಕೆಲವರು ಬಂದಿದ್ದರು.