ನವದೆಹಲಿ (ಸೆ.25): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಉಭಯ ಸಂಸತ್ತಿನಲ್ಲಿ ಮಂಡಿಸಿ ಒಪ್ಪಿಗೆ ಪಡೆದುಕೊಂಡಿರುವ ವಿವಾದಿತ ಮೂರು ಕೃಷಿ ಮಸೂದೆಯನ್ನು ವಿರೋಧಿಸಿ ರೈತ ಸಂಘಟನೆಗಳು ಶುಕ್ರವಾರ ಭಾರತ್‌ ಬಂದ್‌ಗೆ ಕರೆ ಕೊಟ್ಟಿದೆ. 31 ವಿವಿಧ ರೈತ ಸಂಘಟನೆಗಳು ಕರೆ ಕೊಟ್ಟಿರುವ ಬಂದ್‌ಗೆ ವಿರೋಧ ಪಕ್ಷಗಳೂ ಬೆಂಬಲ ನೀಡಿರುವುದರಿಂದ ದೇಶ ಹಲವು ಭಾಗಗಳಲ್ಲಿ ಸಾಮಾನ್ಯ ಜನಜೀವನದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.

"

ಈಗಾಗಲೇ ಹಲವು ದಿನಗಳಿಂದ ಪಂಜಾಬ್‌, ಹರ್ಯಾಣ, ದೆಹಲಿ ಹಾಗೂ ಉತ್ತರ ಪ್ರದೇಶ ಸೇರಿ ಉತ್ತರದ ಹಲವು ರಾಜ್ಯಗಳಲ್ಲಿ ರೈತರು ಭಾರೀ ಪ್ರತಿಭಟನೆ ನಡೆಸುತ್ತಿದ್ದು ಶುಕ್ರವಾರ ಮತ್ತಷ್ಟುತೀವ್ರ ಸ್ವರೂಪ ಪಡೆಯುವ ಸಾಧ್ಯತೆ ಇದೆ. ಅಲ್ಲದೇ ಗುರುವಾರದಿಂದ ಪಂಜಾಬ್‌ ಹಾಗೂ ಹರ್ಯಾಣದಲ್ಲಿ ರೈತರು ರೈಲು ರೋಕೋ ಚಳುವಳಿ ಆರಂಭಿಸಿದ್ದು, ಅದು ದೇಶದ ಇದರ ಭಾಗಕ್ಕೂ ವಿಸ್ತರಿಸುವ ಸಾಧ್ಯತೆ ಇದೆ.

ಸೋಮವಾರ ಕರ್ನಾಟಕ ಬಂದ್? ಏನಿರುತ್ತೆ , ಏನಿರಲ್ಲ? ...

ಅಖಿಲ ಭಾರತ ರೈತರ ಒಕ್ಕೂಟ, ಭಾರತೀಯ ಕಿಸಾನ್‌ ಯೂನಿಯನ್‌, ಅಖಿಲ ಭಾರತ ಕಿಸಾನ್‌ ಮಹಾಸಂಘ, ಅಖಿಲ ಭಾರತ ಕಿಸಾನ್‌ ಸಂಘರ್ಷ ಸಮನ್ವಯ ಸಮಿತಿ ಶುಕ್ರವಾರದ ಬಂದ್‌ಗೆ ಕರೆ ಕೊಟ್ಟಿದ್ದು, ರಾಜ್ಯಗಳ ರೈತ ಸಂಘಟನೆಗಳೂ ಬೆಂಬಲ ಸೂಚಿಸಿವೆ.

ಹೊಸ ಕಾಯ್ದೆಯಲ್ಲಿ ರೈತರಿಗೆ ಭಾರೀ ಅನ್ಯಾಯವಾಗಲಿದೆ. ಕನಿಷ್ಠ ಬೆಂಬಲ ಬೆಲೆಯೂ ರೈತರಿಗೆ ಸಿಗುವುದಿಲ್ಲ. ಹೀಗಾಗಿ ಉಭಯ ಸದನಗಳು ಅಂಗೀಕರಿಸಿರುವ ಈ ಮಸೂದೆಗೆ ಸಹಿ ಹಾಕಕೂಡದು ಎಂದು ರೈತ ಸಂಘಟನೆಗಳು ರಾಷ್ಟ್ರಪತಿ ರಾಮನಾಥ ಕೋವಿಂದ್‌ಗೆ ಮನವಿ ಮಾಡಿದೆ. ಈ ಮಸೂದೆ ಬಗ್ಗೆ ಮಾತುಗಳು ಕೇಳಿ ಬರುತ್ತಿರುವಾಗಿನಿಂದ ಈವರೆಗ ಪ್ರಧಾನಿಗೆ ಸಾವಿರಕ್ಕೂ ಹೆಚ್ಚು ಪತ್ರ ಬರೆಯಲಾಗಿದೆ. ಆದರೆ ಅದ್ಯಾವುದಕ್ಕೂ ಪ್ರಧಾನಿ ಸೊಪ್ಪು ಹಾಕಿಲ್ಲ ಎಂದು ರೈತ ಸಂಘಟನೆಗಳು ಕಿಡಿ ಕಾರಿವೆ.

"

ರೈತರ ಉತ್ಪನ್ನ ಮಾರಾಟ ಹಾಗೂ ವಾಣಿಜ್ಯ ಮಸೂದೆ, ರೈತರ ಸಬಲೀಕರಣ ಹಾಗೂ ರಕ್ಷಣೆ ಮಸೂದೆ ಮತ್ತು ಬೆಲೆ ಒಪ್ಪಂದ ಭರವಸೆ ಹಾಗೂ ಕೃಷಿ ಸೇವೆಗಳು ಈ ಮೂರು ಮಸೂದೆಗಳು ವಿರೋಧ ಪಕ್ಷಗಳ ತೀವ್ರ ವಿರೋಧದ ನಡುವೆಯೂ ಅಂಗೀಕಾರಗೊಂಡಿತ್ತು. ಬಿಜೆಪಿ ನೇತೃತ್ವದ ಸರ್ಕಾರದ ಈ ನಡೆ ರೈತ ವಿರೋಧಿ ಎಂದು ಆರೋಪಿಸಿ ಎನ್‌ಡಿಎ ಮಿತ್ರಕೂಟದ ಅಕಾಳಿದಳದಿಂದ ಸಚಿವರಾಗಿದ್ದ ಹರ್‌ಸಿಮ್ರನ್‌ ಕೌರ್‌ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಲ್ಲದೇ ಈ ಮಸೂದೆಗೆ ಅಂಕಿತ ಹಾಕಬಾರದು ಎಂದು 18 ವಿರೋಧ ಪಕ್ಷಗಳ ನಿಯೋಗ ರಾಷ್ಟ್ರಪತಿ ಭೇಟಿ ಮಾಡಿ ಅಹವಾಲು ಸಲ್ಲಿಸಿತ್ತು.