ನವದೆಹಲಿ[ಫೆ.28]: ಭಾರತೀಯ ವಾಯುಪಡೆಯ 2 ಯುದ್ಧ ವಿಮಾನಗಳನ್ನು ಪಾಕಿಸ್ತಾನ ಹೊಡೆದುರುಳಿಸಿದೆ ಎಂಬಂತೆ ಬಿಂಬಿತವಾಗಿರುವ ನಕಲಿ ವಿಡಿಯೋಗಳನ್ನು ಪಾಕ್‌ ಮಾಧ್ಯಮಗಳು ಪ್ರಸಾರ ಮಾಡಿವೆ. ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನ ತೀವ್ರ ಮುಜುಗರ ಪಡುವ ಸ್ಥಿತಿಗೆ ಸಿಲುಕಿದೆ.

2018ರ ಮಾರ್ಚ್ ನಲ್ಲಿ ಒಡಿಶಾ-ಜಾರ್ಖಂಡ್‌ ಗಡಿ ಭಾಗದ ಸುವರ್ಣರೇಖಾ ನದಿ ಬಳಿ ಭಾರತ ವಾಯುಪಡೆಯ ಹಾಕ್‌ ಯುದ್ಧ ವಿಮಾನ ಪತನಗೊಂಡಿತ್ತು. 2016ರಲ್ಲಿ ರಾಜಸ್ಥಾನದ ಜೋಧ್‌ಪುರದ ವಸತಿ ಪ್ರದೇಶದಲ್ಲಿ ಮಿಗ್‌-27 ಯುದ್ಧ ವಿಮಾನ ಪತನಗೊಂಡಿತ್ತು. ಈ ಯುದ್ಧ ವಿಮಾನಗಳನ್ನು ಪಾಕಿಸ್ತಾನ ಸೇನೆ ಹೊಡೆದುರುಳಿಸಿದೆ ಎಂಬಂತೆ ಪಾಕ್‌ ಮಾಧ್ಯಮಗಳು ಎಕ್ಸ್‌ಕ್ಲೂಸಿವ್‌ ಹೆಸರಿನಲ್ಲಿ ಸುದ್ದಿ ಬಿತ್ತರಿಸಿವೆ.

ಇನ್ನೂ ಕುತೂಹಲಕಾರಿ ಸಂಗತಿಯೆಂದರೆ, ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ನಡೆದ ಏರೋ ಷೋ ನಡೆಯುವ ಮುನ್ನ ದಿನ ಸೂರ್ಯ ಕಿರಣ ವೈಮಾನಿಕ ಪ್ರದರ್ಶನದ ಎರಡು ಯುದ್ಧ ವಿಮಾನಗಳ ನಡುವೆ ಡಿಕ್ಕಿ ಸಂಭವಿಸಿ, ನೆಲಕ್ಕೆ ಉರುಳಿದ್ದವು. ಇದನ್ನು ಭಾರತದ ಯುದ್ಧ ವಿಮಾನಗಳನ್ನು ಪಾಕಿಸ್ತಾನ ಸೇನೆ ಹೊಡೆದುರುಳಿಸಿದ ದೃಶ್ಯಾವಳಿ ಎಂದು ಪಾಕಿಸ್ತಾನದ ಮಾಧ್ಯಮವೊಂದು ಪ್ರಸಾರ ಮಾಡಿದೆ.

ಪಾಕಿಸ್ತಾನದ ಹಲವು ಪ್ರಜೆಗಳು ಈ ನಕಲಿ ವಿಡಿಯೋಗಳು ಅಸಲಿ ಎಂದು ಭಾವಿಸಿ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿಯೂ ಈ ನಕಲಿ ವಿಡಿಯೋಗಳು ಭಾರೀ ಸದ್ದು ಮಾಡಿವೆ. ನಕಲಿ ವಿಡಿಯೋಗಳನ್ನು ಪ್ರಸಾರ ಮಾಡಿದ ಪಾಕ್‌ ಮಾಧ್ಯಮಗಳು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್‌ಗೆ ತುತ್ತಾಗಿವೆ.