ದೇಶದ ಪ್ರತಿಪ್ರಜೆಗೂ ಕೊರೋನಾ ಲಸಿಕೆ: ಹಿರಿಯರು, ಮೊದಲ ಆದ್ಯತೆ!
ದೇಶದ ಪ್ರತಿಪ್ರಜೆಗೂ ಕೊರೋನಾ ಲಸಿಕೆ| ಮೊದಲ ಆದ್ಯತೆ ಮಾತ್ರ ಹಿರಿಯರು, ಕೊರೋನಾ ವಾರಿಯರ್ಸ್: ಮೋದಿ| ಲಸಿಕೆಯ ವ್ಯವಸ್ಥಿತ ನಿರ್ವಹಣೆಗೆ ರಾಜ್ಯ, ಜಿಲ್ಲೆ, ಸ್ಥಳೀಯ ಮಟ್ಟದಲ್ಲಿ ತಂಡ| ಶೀಘ್ರ ಲಸಿಕೆ ಸರಬರಾಜಿಗೆ 28 ಸಾವಿರಕ್ಕೂ ಹೆಚ್ಚು ಶೀಥಲೀಕೃತ ವ್ಯವಸ್ಥೆ
ನವದೆಹಲಿ(ನ.01): ದೇಶದ ಪ್ರತಿಯೊಬ್ಬ ನಾಗರಿಕರಿಗೂ ಕೊರೋನಾ ಲಸಿಕೆ ಲಭ್ಯವಾಗುವಂತೆ ನೋಡಿಕೊಳ್ಳಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ವಾಗ್ದಾನ ಮಾಡಿದ್ದಾರೆ. ಆಂಗ್ಲ ದೈನಿಕ ‘ದಿ ಎಕನಾಮಿಕ್ ಟೈಮ್ಸ್’ಗೆ ವಿಶೇಷ ಸಂದರ್ಶನ ನೀಡಿದ ಮೋದಿ ಅವರು, ಕೊರೋನಾ ತೀವ್ರವಾಗಿ ಬಾಧಿಸುವ ಹಾಗೂ ಸೋಂಕು ನಿಗ್ರಹಕ್ಕೆ ಮುಂಚೂಣಿ ಪಾತ್ರ ನಿರ್ವಹಿಸುತ್ತಿರುವ ವೈದ್ಯರು ಸೇರಿದಂತೆ ಇನ್ನಿತರ ರಕ್ಷಣೆ ಮೊದಲ ಆದ್ಯತೆಯಾಗಿರಬಹುದು. ಆದರೆ, ಯಾವೊಬ್ಬ ಪ್ರಜೆಯೂ ಕೊರೋನಾ ಲಸಿಕೆಯಿಂದ ವಿಮುಖರಾಗದಂತೆ ಕ್ರಮ ವಹಿಸಲಾಗುತ್ತದೆ ಎಂದರು.
ದೇಶದ ಪ್ರತಿಯೊಂದು ಮೂಲೆಗೆ ಲಸಿಕೆ ತಲುಪಿಸುವ ಮಹತ್ವದ ಕಾರ್ಯಕ್ಕಾಗಿ ದೇಶಾದ್ಯಂತ 28 ಸಾವಿರಕ್ಕೂ ಹೆಚ್ಚು ಶೀಥಲೀಕೃತ ವ್ಯವಸ್ಥೆಗಳನ್ನು ಗುರುತಿಸಲಾಗಿದೆ. ಲಸಿಕೆ ಅಗತ್ಯವಿರುವವರ ಪತ್ತೆ, ನೋಂದಣಿಗಾಗಿ ಡಿಜಿಟಲ್ ವೇದಿಕೆ ಸ್ಥಾಪನೆ ಹಾಗೂ ಲಸಿಕೆಯ ವ್ಯವಸ್ಥಿತ ಸರಬರಾಜು ಮತ್ತು ನಿರ್ವಹಣೆಗಾಗಿ ರಾಜ್ಯ, ಜಿಲ್ಲೆ ಹಾಗೂ ಸ್ಥಳೀಯ ಮಟ್ಟದಲ್ಲಿ ತಂಡಗಳನ್ನು ರಚಿಸಲಾಗುತ್ತದೆ ಎಂದಿದ್ದಾರೆ.
ಆರಂಭದಲ್ಲಿ ಕೊರೋನಾ ನಿರ್ವಹಣೆಯಲ್ಲಿ ಕರ್ನಾಟಕ ಮತ್ತು ಕೇರಳ ರಾಜ್ಯಗಳು ದೇಶಕ್ಕೆ ಮಾದರಿಯಾಗಿದ್ದವು. ಆದರೆ, ಆ ವೇಳೆ ಗುಜರಾತ್‌ನಲ್ಲಿ ಕೊರೋನಾ ಅಟ್ಟಹಾಸ ವಿಪರೀತವಾಗಿತ್ತು. ಆದರೆ, ಇದೀಗ ಗುಜರಾತ್‌ನಲ್ಲಿ ಪರಿಸ್ಥಿತಿ ಸುಧಾರಣೆಯಾಗಿದ್ದು, ಕೇರಳದಲ್ಲಿ ಕೊರೋನಾ ಭೀಕರತೆ ಎದುರಾಗಿದೆ. ಹೀಗಾಗಿ, ಕೊರೋನಾ ಬಗ್ಗೆ ನಾವು ಹೆಚ್ಚು ಜಾಗರೂಕರಾಗಿರಬೇಕಿದೆ ಎಂದು ದೇಶದ ಜನತೆಗೆ ಮೋದಿ ಕಿವಿಮಾತು ಹೇಳಿದರು.