ನವದೆಹಲಿ(ಏ.25): ಕೊರೋನಾ ರೋಗಿಗಳ ಚಿಕಿತ್ಸೆಗಾಗಿ ಪ್ರಾಯೋಗಿಕವಾಗಿ ನಡೆಸಲಾದ ‘ಪ್ಲಾಸ್ಮಾ ಥೆರಪಿ’ ಉತ್ತೇಜಕ ಆರಂಭಿಕ ಫಲಿತಾಂಶ ನೀಡಿದೆ. ಇದರಿಂದ ಕೊರೋನಾ ಪೀಡಿತರಿಗೆ ಕಾರ್ಮೋಡದಲ್ಲಿ ಆಶಾಕಿರಣ ಮೂಡಿದಂತಾಗಿದೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಹೇಳಿದ್ದಾರೆ. ಆನ್‌ಲೈನ್‌ ಮೂಲಕ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇನ್ನೂ 2-3 ದಿನ ಫ್ಲಾಸ್ಮಾ ಚಿಕಿತ್ಸೆಯ ಕ್ಲಿನಿಕಲ್‌ ಟ್ರಯಲ್‌ ನಡೆಸಲಾಗುತ್ತದೆ. ಗಂಭೀರ ಸ್ಥಿತಿಯಲ್ಲಿರುವ ಕೊರೋನಾ ಪೀಡಿತರಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಲು ಮುಂದಿನ ವಾರ ಕೇಂದ್ರ ಸರ್ಕಾರದ ಅನುಮತಿ ಕೋರಲಾಗುವುದು. ಕೇಂದ್ರವು ಇದಕ್ಕೆ ಅನುಮತಿ ನೀಡುವ ವಿಶ್ವಾಸವಿದೆ’ ಎಂದರು.

‘10 ದಿನಗಳ ಹಿಂದೆ ಗಂಭೀರ ಸ್ಥಿತಿಯಲ್ಲಿದ್ದ 4 ಕೊರೋನಾ ರೋಗಿಗಳಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಲು ಕೇಂದ್ರ ಸರ್ಕಾರದಿಂದ ಅನುಮತಿ ಪಡೆದಿದ್ದೆವು. ಆರಂಭಿಕ ಫಲಿತಾಂಶ ಆಶಾದಾಯಕವಾಗಿದೆ. ಅವರ ಆರೋಗ್ಯ, ಉಸಿರಾಟ ಸುಧಾರಿಸಿದೆ. ನಾಲ್ವರಲ್ಲಿ ಇಬ್ಬರನ್ನು ಐಸಿಯುದಿಂದ ವಾರ್ಡ್‌ಗೆ ಶಿಫ್ಟ್‌ ಮಾಡಲಾಗಿದೆ’ ಎಂದರು.

ಕೊರೋನಾ: ರಾಜ್ಯದಲ್ಲಿ ಇಂದು ಪ್ಲಾಸ್ಮಾ ಥೆರಪಿ!

‘ಆದರೆ ಕೊರೋನಾಗೆ ಇದರಿಂದ ಸಂಪೂರ್ಣ ಪರಿಹಾರ ಸಿಕ್ಕಿದೆ ಎಂದು ಜನ ಅರ್ಥೈಸಬಾರದು. ಇದು ಕೇವಲ ಆರಂಭಿಕ ಫಲಿತಾಂಶವಾಗಿದೆ’ ಎಂದು ಅವರು ಸ್ಪಷ್ಟಪಡಿಸಿದರು.

ಏನಿದು ಪ್ಲಾಸ್ಮಾ ಥೆರಪಿ?:

ಕೊರೋನಾ ಪೀಡಿತನಾಗಿದ್ದ ವ್ಯಕ್ತಿಯೊಬ್ಬ ಪೂರ್ಣವಾಗಿ ಚೇತರಿಸಿಕೊಂಡ ಬಳಿಕ ಆತನ ದೇಹದಲ್ಲಿ ರೋಗನಿರೋಧಕ ಶಕ್ತಿ ಅಭಿವೃದ್ಧಿಗೊಂಡಿರುತ್ತದೆ. ಇಂಥ ವ್ಯಕ್ತಿಯ ರಕ್ತದಲ್ಲಿನ ಪ್ಲಾಸ್ಮಾ ತೆಗೆದು ಅದನ್ನು ಮತ್ತೊಬ್ಬ ರೋಗಿಗೆ ನೀಡಲಾಗುತ್ತದೆ. ಈ ಮೂಲಕ ಆತನ ರೋಗ ನಿರೋಧಕ ಶಕ್ತಿ ಹೆಚ್ಚಿಸಲಾಗುತ್ತದೆ. ಅದು ಫಲ ಕೊಟ್ಟರೆ ಆತ 2-3 ದಿನಗಳಲ್ಲಿ ಚೇತರಿಕೆ ಹಂತಕ್ಕೆ ತಲುಪುತ್ತಾನೆ.