* ನನಗೆ 50 ಶಾಸಕರ ಬೆಂಬಲ, ಶೀಘ್ರ ಮುಂಬೈಗೆ ವಾಪಸ್‌: ಶಿಂಧೆ* ತೆರೆಮರೆ ರಾಜಕೀಯ ಬಿಟ್ಟು ಹೋಟೆಲ್‌ನಿಂದ ಹೊರಬಂದ ಬಂಡಾಯ ನಾಯಕ* ನಿಮ್ಮ ಸಂಪರ್ಕದಲ್ಲಿರುವ 20 ಶಾಸಕರ ಹೆಸರು ಬಯಲು ಮಾಡಿ: ಠಾಕ್ರೆಗೆ ಸವಾಲು* ಮೆತ್ತಗಾದ ಉದ್ಧವ್‌: ಮಾತುಕತೆಗೆ ಬನ್ನಿ, ಎಲ್ಲ ಸರಿ ಪಡಿಸಿಕೊಳ್ಳೋಣ ಎಂದು ಆಹ್ವಾನ

ಮುಂಬೈ(ಜೂ.29): ಮಹಾರಾಷ್ಟ್ರ ರಾಜಕೀಯ ಮತ್ತೊಂದು ತಿರುವು ಪಡೆದಿದ್ದು, ಈವರೆಗೆ ಗುವಾಹಟಿ ಹೋಟೆಲ್‌ನಲ್ಲಿ ತೆರೆಮರೆ ರಾಜಕೀಯ ನಡೆಸುತ್ತಿದ್ದ ಬಂಡಾಯ ಶಿವಸೇನಾ ಮುಖಂಡ ಏಕನಾಥ ಶಿಂಧೆ ಮಂಗಳವಾರ ಹೋಟೆಲ್‌ನಿಂದ ಹೊರಬಂದು ಬಹಿರಂಗವಾಗಿ ಮಾತನಾಡಿದ್ದಾರೆ. ‘ನನಗೆ 50 ಶಾಸಕರ ಬೆಂಬಲ ಇದೆ. ಶೀಘ್ರ ಮುಂಬೈಗೆ ಮರಳುವೆ’ ಎಂದು ಘೋಷಿಸಿದ್ದಾರೆ. ಅಲ್ಲದೆ, ‘ಶಿವಸೇನೆಯು ನಮ್ಮ ಬಣದ 20 ಶಾಸಕರ ಜತೆ ಸಂಪರ್ಕದಲ್ಲಿದೆ ಎಂದು ಹೇಳುತ್ತಿದೆ. ಹಾಗಿದ್ದರೆ ಆ ಶಾಸಕರ ಹೆಸರನ್ನು ಬಹಿರಂಗಪಡಿಸಿ’ ಎಂದು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆಗೆ ಸವಾಲು ಹಾಕಿದ್ದಾರೆ.

ಈ ನಡುವೆ, ಈವರೆಗೆ ಖಾರವಾಗಿ ಮಾತನಾಡುತ್ತಿದ್ದ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಮಂಗಳವಾರ ಶಿಂಧೆ ಘೋಷಣೆ ಬೆನ್ನಲ್ಲೇ ಕೊಂಚ ಮೆತ್ತಗಾಗಿದ್ದಾರೆ ಹಾಗೂ ಮಾತುಕತೆಗೆ ಬರುವಂತೆ ಬಂಡಾಯ ಶಾಸಕರಿಗೆ ಆಹ್ವಾನ ನೀಡಿದ್ದಾರೆ. ‘ಒಂದು ಪಕ್ಷದ ಮುಖ್ಯಸ್ಥನಾಗಿ ಹಾಗೂ ಕುಟುಂಬದ ಮುಖ್ಯಸ್ಥನಾಗಿ ನಾನು ನಿಮ್ಮ ಕಾಳಜಿ ವಹಿಸಬೇಕು. ಮುಂಬೈಗೆ ಬಂದು ನನ್ನ ಜತೆ ಮುಖತಃ ಮಾತನಾಡಿ. ಏನು ಭಿನ್ನಾಭಿಪ್ರಾಯ ಇವೆಯೋ ಇತ್ಯರ್ಥ ಮಾಡಿಕೊಂಡು ಮುಂದೆ ಸಾಗೋಣ’ ಎಂದು ಮನವಿ ಮಾಡಿದ್ದಾರೆ.

ಶಿಂಧೆ ಪ್ರತ್ಯಕ್ಷ, ಸವಾಲು:

ಮಂಗಳವಾರ ಮಧ್ಯಾಹ್ನ ಗುವಾಹಟಿಯ ರಾರ‍ಯಡಿಸನ್‌ ಬ್ಲೂ ಹೋಟೆಲ್‌ನಿಂದ ಹೊರಬಂದು ಗೇಟ್‌ ಬಳಿ ಕಿಕ್ಕಿರಿದಿದ್ದ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಶಿಂಧೆ, ‘ಮುಂಬೈನಲ್ಲಿ ಶಿವಸೇನೆ ನಾಯಕರು ನಾವು 20 ಬಂಡಾಯ ಶಾಸಕರೊಂದಿಗೆ ಸಂಪರ್ಕದಲ್ಲಿದ್ದೇವೆ ಎನ್ನುತ್ತಿದ್ದಾರೆ. ಹಾಗಿದ್ದರೆ ಅವರ ಹೆಸರು ಬಹಿರಂಗಪಡಿಸಿ’ ಎಂದು ಸವಾಲೆಸೆದರು.

‘ನನಗೆ ಈಗ 50 ಶಾಸಕರ ಬೆಂಬಲ ಇದೆ. ಎಲ್ಲರೂ ಸ್ವಂತ ಇಚ್ಛೆಯೊಂದಿಗೆ ಇಲ್ಲಿಗೆ ಬಂದಿದ್ದಾರೆ. ಯಾರೂ ಇಲ್ಲಿ ವೈಯಕ್ತಿಕ ಲಾಭಕ್ಕೆ ಬಂದಿಲ್ಲ. ಹಿಂದುತ್ವ ಹಾಗೂ ಶಿವಸೇನೆಯನ್ನು ಮುನ್ನಡೆಸುವುದೇ ನಮ್ಮ ಉದ್ದೇಶ. ಶೀಘ್ರ ಮುಂಬೈಗೆ ಎಲ್ಲರೂ ಮರಳಲಿದ್ದೇವೆ’ ಎಂದು ಘೋಷಿಸಿದರು. ಅಲ್ಲದೆ, ‘ನಮ್ಮ ಮುಂದಿನ ಯೋಜನೆಗಳನ್ನು ಶಾಸಕ ದೀಪಕ್‌ ಕೇಸರಕರ್‌ ವಿವರಿಸಲಿದ್ದಾರೆ’ ಎಂದು ಹೇಳಿ ಹೋಟೆಲ್‌ಗೆ ವಾಪಸ್‌ ತೆರಳಿದರು.

ಈ ನಡುವೆ ಬಂಡಾಯ ಸಚಿವ ಉದಯ ಸಾಮಂತ್‌ ಮಾತನಾಡಿ, ‘ಮುಂಬೈ ಸೇನಾ ನಾಯಕರೊಂದಿಗೆ ಯಾವ ಬಂಡುಕೋರರೂ ಸಂಪರ್ಕದಲ್ಲಿಲ್ಲ’ ಎಂದು ಸ್ಪಷ್ಟಪಡಿಸಿದರು.