ದೆಹಲಿ ಹಾಗೂ ರಾಷ್ಟ್ರರಾಜಧಾನಿ ವ್ಯಾಪ್ತಿಯಲ್ಲಿ ಕಂಪಿಸಿದ ಭೂಮಿ, ಆತಂಕದಿಂದ ಹೊರಬಂದ ಜನ!
ರಾಜಧಾನಿ ದೆಹಲಿಯಲ್ಲಿ ಒಂದೆಡೆ ನೂತನ ಸಂಸತ್ ಭವನ ಉದ್ಘಾಟನೆ ಕಾರ್ಯಕ್ರಮ ನಡೆಯುತ್ತಿದ್ದರೆ, ಇತ್ತ ಭೂಕಂಪನ ಸಂಭವಿಸಿದೆ. ದೆಹಲಿ, ಜಮ್ಮ ಮತ್ತು ಕಾಶ್ಮೀರ, ಪಂಜಾಬ್ ಸೇರಿದಂತೆ ಕೆಲ ಭಾಗದಲ್ಲಿ ಭೂಮಿ ಕಂಪಿಸಿದೆ.
ದೆಹಲಿ(ಮೇ.28): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಂದು ಐತಿಹಾಸಿಕ ಉದ್ಘಾಟನಾ ಕಾರ್ಯಕ್ರಮ ನಡೆಯುತ್ತಿದೆ. ನೂತನ ಸಂಸತ್ ಭವನ ಉದ್ಘಾಟನೆಗೊಂಡಿದೆ. ಇತ್ತ ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ಲುಘು ಭೂಕಂಪನ ಸಂಭವಿಸಿದೆ. ದೆಹಲಿ ಸುತ್ತಮುತ್ತ, ಹರ್ಯಾಣ, ಪಂಜಾಬ್, ಜಮ್ಮು ಮತ್ತು ಕಾಶ್ಮೀರದಲ್ಲಿ ಭೂಮಿ ಲುಘುವಾಗಿ ಕಂಪಿಸಿದೆ. ಈ ಬಾರಿಯ ಲಘು ಭೂಕಂಪದ ಕೇಂದ್ರ ಬಿಂದು ಆಫ್ಘಾನಿಸ್ತಾನ. ಕಾಬೂಲ್‌ನಿಂದ 70 ಕಿಲೋಮೀಟರ್ ದೂರದ ಆಗ್ನೇಯ ದಿಕ್ಕಿನ ಫೈಜಾಬಾದ್‌ನಲ್ಲಿ 5.9ರ ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. ಇದರ ಪರಿಣಾಮ ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ 4.6ರ ತೀವ್ರತೆಯ ಭೂಕಂಪನ ಸಂಭವಿಸಿದೆ.
ಫೈಜಾಬಾದ್ ವಲಯದಲ್ಲಿ ಇಂದು ಬೆಳಗ್ಗ 11.49ಕ್ಕೆ ಭೂಮಿ ಕಂಪಿಸಿದೆ. 220 ಕಿಲೋಮೀಟರ್ ಆಳದಲ್ಲಿ ಭೂಮಿ ಕಂಪಿಸಿದೆ. ಇದರ ತೀವ್ರತೆ ಭಾರತದಲ್ಲೂ ದಾಖಲಾಗಿದೆ. ದೆಹಲಿಯಲ್ಲಿ ಭೂಕಂಪನ ಅನುಭವವಾಗುತ್ತಿದ್ದಂತೆ ಜನರು ಆತಂಕಗೊಂಡಿದ್ದಾರೆ. ಮನೆ, ಕಚೇರಿ, ಕಟ್ಟಡಗಳಿಂದ ಜನ ಹೊರಬಂದಿದ್ದಾರೆ. ಇತ್ತ ಹಲವರು ಟ್ವಿಟರ್ ಮೂಲಕ ಆತಂಕ ವ್ಯಕ್ತಪಡಿಸಿದ್ದಾರೆ.
ಗುಮ್ಮಟನಗರಿ ವಿಜಯಪುರದಲ್ಲಿ ಮತ್ತೆ ಭೂಕಂಪನ, ಬೆಚ್ಚಿಬಿದ್ದ ಜನತೆ..!
ಲಘು ಭೂಕಂಪನದ ಅನುಭವವಾಗುತ್ತಿದೆ ಎಂದು ಹಲವರು ಟ್ವೀಟ್ ಮಾಡಿದ್ದಾರೆ. ಆಫ್ಘಾನಿಸ್ತಾನ ಕೇಂದ್ರಿತ ಭೂಕಂಪನ ಭಾರತದಲ್ಲಿ ಲಘು ತೀವ್ರತೆ ಸೃಷ್ಟಿಸಿದೆ. ದೆಹಲಿಯ ಲಘು ಭೂಕಂಪನದಲ್ಲಿ ಅದೃಷ್ಠವಶಾತ್ ಯಾವುದೇ ಹಾನಿಯಾಗಿಲ್ಲ. ಕಟ್ಟಡಗಳು ಮೆಲ್ಲನೆ ಕಂಪಿಸಿದ ಅನುಭವವಾಗಿದೆ. ಆದರೆ ಜನರು ಆತಂಕಗೊಂಡಿದ್ದಾರೆ.
ಮಾರ್ಚ್ ತಿಂಗಳ ಅಂತ್ಯದಲ್ಲಿ ದೆಹಲಿಯಲ್ಲಿ ಭೂಕಂಪನ ಸಂಭವಿಸಿತ್ತು. ರಿಕ್ಟರ್ ಮಾಪಕದಲ್ಲಿ 6.6ರಷ್ಟುಭಾರೀ ತೀವ್ರತೆ ಹೊಂದಿದ್ದ ಭೂಕಂಪದ ಕೇಂದ್ರಬಿಂದು ಆಷ್ಘಾನಿಸ್ತಾನದ ಹಿಂದುಕುಷ್ ಪರ್ವತದಲ್ಲಿ ಸಂಭವಿಸಿತ್ತು. ಭೂಕಂಪ ಭಾರೀ ತೀವ್ರತೆ ಹೊಂದಿದ್ದ ಕಾರಣ ಅದರ ಅನುಭವ ನೆರೆಹೊರೆಯ ದೇಶಗಳಾದ ತುರ್ಕೇಮೇನಿಸ್ತಾನ, ಭಾರತ, ಕಜಕಿಸ್ತಾನ, ಪಾಕಿಸ್ತಾನ, ಉಜ್ಬೇಕಿಸ್ತಾನ, ಚೀನಾ, ಆಷ್ಘಾನಿಸ್ತಾನ ಮೊದಲಾದ ದೇಶಗಳಲ್ಲಿ ಆಗಿದೆ. ಮಂಗಳವಾರ ರಾತ್ರಿ 10.17ರ ವೇಳೆಗೆ ಭೂಕಂಪ ಸಂಭವಿಸಿದ್ದು, ಈ ವೇಳೆ ಮನೆ, ಕಚೇರಿಯೊಳಗಿದ್ದ ಸಾವಿರಾರು ಜನರು ಹೊರಗೆ ಓಡಿಬಂದು ರಸ್ತೆಯಲ್ಲಿ ಆತಂಕಿತರಾಗಿ ನಿಂತಿದ್ದ ದೃಶ್ಯಗಳು ದೆಹಲಿ, ಪಂಜಾಬ್, ಹರ್ಯಾಣ,ರಾಜಸ್ಥಾನ ಮೊದಲಾದ ರಾಜ್ಯಗಳಲ್ಲಿ ಕಂಡುಬಂದಿತು. ಸುಮಾರು ಒಂದು ನಿಮಿಷಗಳ ಕಾಲ ಭೂಮಿ ನಡುಗಿದ ಅನುಭವ ಆಗಿದೆ ಎಂದು ನಿವಾಸಿಗಳು ಹೇಳಿದ್ದಾರೆ.
ಇಂಡೋನೇಷಿಯಾದಲ್ಲಿ ಕಂಪಿಸಿದ ಭೂಮಿ, ರಿಕ್ಟರ್ ಮಾಪಕದಲ್ಲಿ 7.0 ತೀವ್ರತೆ ದಾಖಲು
ಮಾರ್ಚ್ ತಿಂಗಳ ಆರಂಭದಲ್ಲಿ ಉತ್ತರಾಖಂಡ ರಾಜ್ಯದ ಉತ್ತರಕಾಶಿ ಜಿಲ್ಲೆಯಲ್ಲಿ ಸತತ ಮೂರು ಬಾರಿ ಭೂಕಂಪನ ಸಂಭವಿಸಿತ್ತು. ತಡರಾತ್ರಿ 12.45ರ ವೇಳೆಗೆ ಜಿಲ್ಲೆಯ ಭಾಟ್ವಾರಿಯಲ್ಲಿರುವ ಸಿರೋರ್ ಅರಣ್ಯ ಭಾಗದಲ್ಲಿ 2.5 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾಧಿಕಾರಿಗಳು ತಿಳಿಸಿದ್ದಾರೆ. ಇನ್ನೆರಡು ಬಾರಿ ಹೆಚ್ಚೇನು ತೀವ್ರತೆ ಇಲ್ಲದೆ ಭೂಮಿ ಕಂಪಿಸಿದೆ. ಈ ವೇಳೆ ಮನೆಗಳಲ್ಲಿ ಅಡುಗೆ ಮನೆಯ ಸಮಾನುಗಳು ನೆಲಕ್ಕೆ ಬಿದ್ದಿದ್ದು, ಕಿಟಕಿ ಬಾಗಿಲುಗಳು ಬಡೆದಾಡಿವೆ. ಹೀಗಾಗಿ ಹೆದರಿದ ನಿವಾಸಿಗಳು ರಾತ್ರಿಯಿಡೀ ಮನೆಯಿಂದ ಹೊರಗೆ ಕಾಲ ಕಳೆದ ಘಟನೆ ನಡೆದಿತ್ತು. ಆದರೆ ಯಾವುದೇ ಪ್ರಾಣ ಹಾಗೂ ಆಸ್ತಿಹಾನಿ ವರದಿಯಾಗಿಲ್ಲ.