ನವದೆಹಲಿ(ಅ.28): ವಂಶಪಾರಂಪರ್ಯ ಭ್ರಷ್ಟಾಚಾರದ ವಿರುದ್ಧ ಕಠಿಣ ಕ್ರಮದ ಅಗತ್ಯವನ್ನು ಪ್ರತಿಪಾದಿಸಿರುವ ಪ್ರಧಾನಿ ನರೇಂದ್ರ ಮೋದಿ, ಇದು ಇಂದು ಕೆಲ ರಾಜ್ಯಗಳಲ್ಲಿ ರಾಜಕೀಯ ಸಂಸ್ಕೃತಿಯ ಭಾಗವಾಗಿ ಹೋಗಿದೆ ಮತ್ತು ದೇಶದ ಬೆಳವಣಿಗೆ ಅತಿದೊಡ್ಡ ಸವಾಲಾಗಿ ಹೊರಹೊಮ್ಮಿದೆ. ಗೆದ್ದಲಿನಂದಾಗಿದೆ ಎಂದು ಕಿಡಿಕಾರಿದ್ದಾರೆ.

ಸಿಬಿಐ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ ‘ಭ್ರಷ್ಟಾಚಾರದಂಥ ಒಂದೇ ಒಂದು ಪ್ರಕರಣದಲ್ಲಿನ ನಿಷ್ಕಿ್ರಯತೆಯು, ಭವಿಷ್ಯದಲ್ಲಿ ಇಂಥದ್ದೇ ಹಗರಣ ಮತ್ತು ಭ್ರಷ್ಟಾಚಾರಕ್ಕೆ ಅಡಿಪಾಯವಾಗಬಲ್ಲದು. ವಂಶಪಾರಂಪರ್ಯ ಭ್ರಷ್ಟಾಚಾರದಲ್ಲಿ ಭ್ರಷ್ಟಾಚಾರವು ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ವರ್ಗಾವಣೆಯಾಗುತ್ತಿರುತ್ತದೆ.

ದಶಕಗಳಿಂದ ಇದರ ಹಾವಳಿ ಹೆಚ್ಚಾಗಿದ್ದು, ದೇಶದ ಮುಂದೆ ದೊಡ್ಡ ಸವಾಲಾಗಿ ಹೊರಹೊಮ್ಮಿದೆ. ಇಂಥ ಭ್ರಷ್ಟಾಚಾರದಲ್ಲಿ ತೊಡಗಿದ್ದ ವ್ಯಕ್ತಿಗಳನ್ನು ಸೂಕ್ತವಾಗಿ ಶಿಕ್ಷಿಸದೇ ಹೋದಾಗ, ಅದು ಮುಂದಿನ ತಲೆಮಾರಿನ ಜನರ ಕೂಡ ನಿರ್ಭೀತಿಯಿಂದ ಭ್ರಷ್ಟಾಚಾರದಲ್ಲಿ ಮುಂದುವರೆಯಲು ಹೇಗೆ ಸಾಧ್ಯವಾಯಿತು ಎಂಬುದನ್ನು ಕಳೆದ ಶತಮಾನದಲ್ಲಿ ನಾವು ಗಮನಿಸಿದ್ದೇವೆ ಎಂದು ಹೇಳಿದರು.

ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿ ಯಾರ ಹೆಸರನ್ನು ನೇರವಾಗಿ ಪ್ರಸ್ತಾಪಿಸದೇ ಇದ್ದರೂ, ಬಿಹಾರ ಚುನಾವಣೆಯ ಮತದಾನಕ್ಕೂ ಮುನ್ನಾ ದಿನಗಳಲ್ಲಿ ಆಡಿದ ಈ ಮಾತುಗಳು ಪರೋಕ್ಷವಾಗಿ ಆರ್‌ಜೆಡಿ ಮುಖಂಡ ಲಾಲು ಪ್ರಸಾದ್‌ ಯಾದವ್‌ ಮತ್ತು ಅವರ ಕುಟುಂಬ ಸದಸ್ಯರನ್ನು ಉದ್ದೇಶಿಸಿಯೇ ಆಡಿದ್ದು ಎಂದು ವಿಶ್ಲೇಷಿಸಲಾಗಿದೆ.

ಕುಟುಂಬವೊಂದರಲ್ಲಿ ವ್ಯಕ್ತಿಯನ್ನು ಹೀಗೆ ಭ್ರಷ್ಟಾಚಾರ ಪ್ರಕರಣಗಳದಲ್ಲಿ ಸೂಕ್ತ ಪ್ರಮಾಣದಲ್ಲಿ ಶಿಕ್ಷಿಸದೇ ಹೋದಾಗ, ಅವರು ಕುಟುಂಬ ಸದಸ್ಯರು, ಅಂಥದ್ದೇ ಕೆಲಸವನ್ನು ಹಲವು ಪಟ್ಟು ಹೆಚ್ಚಿಸಲು ಹೇಗೆ ಧೈರ್ಯ ನೀಡುತ್ತದೆ. ಇದರ ಪರಿಣಾಮ ಹಲವು ರಾಜ್ಯಗಳಲ್ಲಿ ವಂಶಪಾರಂಪರ್ಯ ಭ್ರಷ್ಟಾಚಾರ ಎನ್ನುವುದು ರಾಜಕೀಯ ಸಂಸ್ಕೃತಿಯ ಭಾಗವಾಗಿ ಹೋಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.