ನವದೆಹಲಿ(ಏ.08): ದೇಶದಲ್ಲಿ ಕೊರೋನಾ ವೈರಸ್‌ ವ್ಯಾಪಕವಾಗಿ ಹಬ್ಬಲು ಒಂದು ಸಮುದಾಯವೇ ಕಾರಣ ಎಂಬ ಆರೋಪ ಕೇಳಿಬರುತ್ತಿರುವಾಗಲೇ, ಕೊರೋನಾ ವೈರಸ್‌ ಪ್ರಕರಣಕ್ಕೆ ಮತೀಯ ಬಣ್ಣ ನೀಡುವ ಪ್ರಯತ್ನಗಳಿಂದ ದೂರ ಇರುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಪಕ್ಷದ ಮುಖಂಡರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಪಕ್ಷದ ಕಚೇರಿಯಲ್ಲಿ ಮುಖಂಡರ ಜೊತೆ ಸಭೆ ಸಭೆ ನಡೆಸಿದ ನಡ್ಡಾ, ಯಾವುದೇ ಮುಖಂಡರು ಪ್ರಚೋದನಾಕಾರಿ ಮತ್ತು ವಿಭಜಕ ಹೇಳಿಕೆಗಳನ್ನು ನೀಡಬಾರದು. ಕೊರೋನಾ ವೈರಸ್‌ ನಿಯಂತ್ರಣಕ್ಕೆ ರಾಜ್ಯ ಸರ್ಕಾರಗಳು ಮತ್ತು ಪ್ರಧಾನಮಂತ್ರಿಗಳ ಪ್ರಯತ್ನವನ್ನು ಬೆಂಬಲಿಸಿ ಎಂದು ಕರೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಒಪ್ಪತ್ತು ಊಟ ಬಿಡಿ, ಹಸಿದವರಿಗೆ ಸಾಂತ್ವನ ಹೇಳಿ: ಬಿಜೆಪಿಗರಿಗೆ ನಡ್ಡಾ ಕರೆ

ಕೊರೋನಾ ವೈರಸ್‌ ವಿಶ್ವದ ಎಲ್ಲ ಸಮುದಾಯದವರನ್ನೂ ದುರ್ಬಲಗೊಳಿಸಿದೆ. ದೇಶವನ್ನು ಮುನ್ನಡೆಸುವ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ಕೋಮು ಭಾವನೆ ಕೆರಳಿಸುವ ಹೇಳಿಕೆಗಳನ್ನು ಯಾರೂ ನೀಡದಂತೆ ಪಕ್ಷದ ಮುಖಂಡರಿಗೆ ಜೆ.ಪಿ. ನಡ್ಡಾ ಸೂಚಿಸಿದ್ದಾರೆ ಎಂದು ಸಭೆಯಲ್ಲಿ ಭಾಗಿಯಾಗಿದ್ದ ಮುಖಂಡರೊಬ್ಬರು ಹೇಳಿದ್ದಾರೆ.

ತಬ್ಲೀಘಿ ಜಮಾತ್‌ ಸಭೆಯ ಬಳಿಕ ದೇಶದಲ್ಲಿ ಕೊರೋನಾ ಸೊಂಕು ಹೆಚ್ಚಾಗಿದ್ದನ್ನು ಉದಾಹರಿಸಿ ಬಿಜೆಪಿಯ ಬೆಂಬಲಿಗರು ಸಾಮಾಜಿಕ ಮಾಧ್ಯಮಗಳಲ್ಲಿ ವಿವಾದಿತ ಹೇಳಿಕೆಗಳನ್ನು ನೀಡಿದ್ದರು. ಈ ಹಿನ್ನೆಲೆಯಲ್ಲಿ ಅವರು ಈ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.