ಕೈಮುಗಿದು ಸ್ವಾಮೀಜಿ ಸ್ವಾಗತಿಸಿ ಕಚೇರಿ ಕುರ್ಚಿಯಲ್ಲಿ ಕೂರಿಸಿದ ಜಿಲ್ಲಾಧಿಕಾರಿಗೆ ಸಂಕಷ್ಟ!
ದೆಹಲಿಯ ಐಎಎಸ್ ಅಧಿಕಾರಿಗೆ ಸಂಕಷ್ಟ ಶುರುವಾಗಿದೆ. ಅಧಿಕಾರಿಯ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋ ಕುರಿತು ತನಿಖೆ ನಡೆಯುತ್ತಿದೆ. ಅಷ್ಟಕ್ಕೂ ಈ ವಿಡಿಯೋದಲ್ಲಿ ಅಧಿಕಾರಿ ತಮ್ಮ ಕಚೇರಿಗೆ ಆಗಮಿಸಿದ ಸ್ವಾಮಿಜಿಯನ್ನು ಕಚೇರಿ ಕುರ್ಚಿಯಲ್ಲಿ ಕೂರಿಸಿ ಗೌರವ ನೀಡಿದ್ದೇ ಮಳುವಾಗಿದೆ.

ದೆಹಲಿ(ಅ.23) ಧಾರ್ಮಿಕ ಗುರುಗಳಿಗೆ ಭಾರತದಲ್ಲಿ ಶ್ರೇಷ್ಠ ಗೌರವ ನೀಡಲಾಗುತ್ತದೆ. ಹೀಗೆ ಕಚೇರಿಗೆ ಆಗಮಿಸಿದ ಧಾರ್ಮಿಕ ಗುರುವಿಗೆ ಜಿಲ್ಲಾಧಿಕಾರಿ ಕೈಮುಗಿದು ಸ್ವಾಗತ ಕೋರಿದ್ದಾರೆ. ಇಷ್ಟೇ ಅಲ್ಲ ತಮ್ಮ ಜಿಲ್ಲಾಧಿಕಾರಿ ಕುರ್ಚಿಯನ್ನು ಧಾರ್ಮಿಕ ಗುರುವಿಗೆ ಬಿಟ್ಟುಕೊಟ್ಟು ಕೈಕಟ್ಟಿ ನಿಂತುಕೊಂಡಿದ್ದಾರೆ. ಗುರುವಿಗೆ ಹಾರ ಹಾಕಿ, ಶಾಲು ಹೊದಿಸಿ ಸನ್ಮಾನ ಮಾಡಿದ ಜಿಲ್ಲಾಧಿಕಾರಿ ಅತ್ಯಂತ ವಿನಯ ಹಾಗೂ ಗೌರವದಿಂದ ನಡೆದುಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ದೆಹಲಿಯ ಜಿಲ್ಲಾಧಿಕಾರಿಗೆ ಸಂಕಷ್ಟ ಶುರುವಾಗಿದೆ.
ನೈಋತ್ಯ ದೆಹಲಿಯ ಜಿಲ್ಲಾಧಿಕಾರ ಲಕ್ಷ್ಯ ಸಿಂಘಾಲ್‌ಗೆ ಸಂಕಷ್ಟ ಶುರುವಾಗಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿಗೆ ಮೀಸಲಿರುವ ಕುರ್ಚಿಯಲ್ಲಿ ಧಾರ್ಮಿಕ ಗುರುವನ್ನು ಕುಳ್ಳಿರಿಸಿ ಸತ್ಕರಿಸಿರುವುದರ ಕುರಿತು ಪರ ವಿರೋಧಗಳು ವ್ಯಕ್ತವಾಗಿದೆ. ಸ್ವಾಮೀಜಿಗೆ ಗೌರವ ನೀಡಿದ್ದು ಸರಿಯಾಗಿದೆ. ಇದರಲ್ಲಿ ತಪ್ಪೇನು ಅನ್ನೋ ವಾದವೂ ಇದೆ. ಇದರ ಜೊತೆಗೆ ಜಿಲ್ಲಾಧಿಕಾರಿ ಕುರ್ಚಿ ಅತ್ಯಂತ ಜವಾಬ್ದಾರಿ ಸ್ಥಾನವಾಗಿದೆ. ಈ ಸ್ಥಾನದಲ್ಲಿರುವ ವ್ಯಕ್ತಿ ಈ ರೀತಿ ನಡೆದುಕೊಂಡಿರುವುದು ಸರಿಯಲ್ಲ ಅನ್ನೋ ವಾದವೂ ವ್ಯಕ್ತವಾಗಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ದೆಹಲಿ ಸರ್ಕಾರ ಲಕ್ಷ್ಯ ಸಿಂಘಾಲ್‌ಗೆ ನೋಟಿಸ್ ನೀಡಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿರುವ ವಿಡಿಯೋ ಕುರಿತು ಸಷ್ಟನೆ ನೀಡುವಂತೆ ನೋಟಿಸ್ ನೀಡಲಾಗಿದೆ. ಸದ್ಯ ಜಿಲ್ಲಾಧಿಕಾರಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಈ ವಿಡಿಯೋ ಕುರಿತು ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲು ದೆಹಲಿ ಸರ್ಕಾರ ಮುಂದಾಗಿದೆ.
ಲಕ್ಷ್ಯ ಸಿಂಘಾಲ್ 2019ರ ಬ್ಯಾಚ್ ಐಎಎಸ್ ಅಧಿಕಾರಿ. ಉತ್ತಮ ಅಧಿಕಾರಿಯಾಗಿ ಹೆಸರು ಪಡೆದಿದ್ದಾರೆ. ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸಿ ತಕ್ಷಣ ಪರಿಹಾರ ಕಲ್ಪಸಿಕೊಡುವ ಮೂಲಕ ನೈಋತ್ಯ ದೆಹಲಿಯಲ್ಲಿ ದಕ್ಷಣ ಆಡಳಿತಾಧಿಕಾರಿಯಾಗಿ ಹೆಸರುವಾಸಿಯಾಗಿದ್ದಾರೆ.