ನವದೆಹಲಿ(ಜ.18): ಆರ್‌ಟಿಐ ಕಾಯ್ದೆಯಡಿ ಮಾಹಿತಿ ಕೋರಿ ಅರ್ಜಿ ಸಲ್ಲಿಸುವವರು ತಮ್ಮ ಉದ್ದೇಶವನ್ನು ಕಡ್ಡಾಯವಾಗಿ ಬಹಿರಂಗಪಡಿಸಲೇಬೇಕು ಎಂದು ದೆಹಲಿ ಹೈಕೋರ್ಟ್‌ ಹೇಳಿದೆ. ದುರುದ್ದೇಶಪೂರಿತ ಅರ್ಜಿಗಳ ಸಲ್ಲಿಕೆ ತಡೆಯಲು ಇದು ಅನಿವಾರ್ಯ ಎಂದು ಹೇಳಿದೆ.

ಹರ್‌ ಕೃಷ್ಣನ್‌ ಎಂಬುವರು ರಾಷ್ಟ್ರಪತಿ ಎಸ್ಟೇಟ್‌ನ ನಿರ್ದಿಷ್ಟಹುದ್ದೆಗಳಿಗೆ ನಡೆದ ನೇಮಕಾತಿಯಲ್ಲಿ ಅಕ್ರಮ ನಡೆದಿದ್ದು, ಆ ಹುದ್ದೆಗಳಿಗೆ ನೇಮಕವಾದ ಅಭ್ಯರ್ಥಿಗಳ ತಂದೆ ಹೆಸರು ಸೇರಿದಂತೆ ಇತರ ವಿವರ ಬಹಿರಂಗಪಡಿಸುವಂತೆ ಆರ್‌ಟಿಐ ಅರ್ಜಿ ಮೂಲಕ ಕೋರಿದ್ದರು. ಆದರೆ ವಿಚಾರಣೆ ವೇಳೆ ಅರ್ಜಿದಾರನ ಪುತ್ರಿಯೂ ಈ ಹುದ್ದೆಗೆ ಅರ್ಜಿ ಸಲ್ಲಿಸಿದ್ದಳು ಎಂಬುದು ಬಹಿರಂಗವಾಗಿದ್ದು, ಈ ಕುರಿತಾದ ವಿಚಾರವನ್ನು ಅರ್ಜಿದಾರ ತನ್ನ ಆರ್‌ಟಿಐನಲ್ಲಿ ಉಲ್ಲೇಖಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ತನ್ನ ಪುತ್ರಿಗೆ ಹುದ್ದೆ ಸಿಗಲಿಲ್ಲ ಎಂಬ ದುರುದ್ದೇಶದಿಂದ ಆರ್‌ಟಿಐ ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದಾರೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಜೊತೆಗೆ ಈ ಅರ್ಜಿಯನ್ನು ತಿರಸ್ಕರಿಸಿದ ಕೇಂದ್ರೀಯ ಮಾಹಿತಿ ಆಯೋಗದ ಆದೇಶವನ್ನು ದಿಲ್ಲಿ ಹೈಕೋರ್ಟ್‌ ಎತ್ತಿಹಿಡಿದಿದೆ. ಜೊತೆಗೆ ಅರ್ಜಿದಾರನಿಗೆ 25 ಸಾವಿರ ರು. ದಂಡವನ್ನೂ ವಿಧಿಸಿದೆ.