ಶ್ರೀನಗರ[ಫೆ.27]: ಜಮ್ಮು- ಕಾಶ್ಮೀರದ ಉರಿ ಸೇನಾ ನೆಲೆಯ ಮೇಲೆ ಪಾಕಿಸ್ತಾನದ ಉಗ್ರರು ನಡೆಸಿದ ದಾಳಿಯಲ್ಲಿ 18 ಮಂದಿ ಯೋಧರು ಬಲಿಯಾಗಿದ್ದಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ 2016ರ ಸೆ.29ರಂದು ಪಾಕ್‌ ಆಕ್ರಮಿತ ಕಾಶ್ಮೀರದ ಒಳಕ್ಕೆ ನುಗ್ಗಿ ಉಗ್ರರ ಲಾಂಚ್‌ ಪ್ಯಾಡ್‌ಗಳನ್ನು ನಾಶಪಡಿಸಿತ್ತು. ರಾತ್ರೋ ರಾತ್ರಿ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಪಾಕ್‌ ಆಕ್ರಮಿತ ಕಾಶ್ಮೀರದ ಭಾಗಕ್ಕೆ ತೆರಳಿದ್ದ ಯೋಧರು, ಉಗ್ರರ ನೆಲೆಗಳನ್ನು ನಾಶಪಡಿಸಿ ಪುನಃ ಭಾರತದ ಗಡಿಯೊಳಕ್ಕೆ ಹಿಂದಿರುಗಿದ್ದರು. ಈ ದಾಳಿಯಲ್ಲಿ 35ರಿಂದ 40 ಉಗ್ರರು ಹತ್ಯೆ ಯಾಗಿದ್ದಾರೆ ಎಂದು ಅಂದಾಜಿಸಲಾಗಿತ್ತು. ಇದು ಪಾಕಿಸ್ತಾನದ ಮೇಲೆ ಭಾರತ ನಡೆಸಿದ ಮೊದಲ ಸರ್ಜಿಕಲ್‌ ಸ್ಟೈಕ್‌ ಆಗಿತ್ತು.

ಇದೀಗ ಪುಲ್ವಾಮಾ ದಾಳಿಗೆ ಭಾರತ ಮತ್ತೊಮ್ಮೆ ಸರ್ಜಿಕಲ್‌ ಸ್ಟೈಕ್‌ ಮೂಲಕವೇ ಪ್ರತೀಕಾರ ತೀರಿಸಿಕೊಂಡಿದೆ. ಇದನ್ನು ಸರ್ಜಿಕಲ್‌ ಸ್ಟೈಕ್‌ 2.0 ಎಂದೇ ಬಣ್ಣಿಸಲಾಗುತ್ತಿದೆ. ಈ ಬಾರಿ ಭಾರತ ಯುದ್ಧ ವಿಮಾನಗಳ ಮೂಲಕ ಸರ್ಜಿಕಲ್‌ ದಾಳಿ ನಡೆಸಿದೆ. ಭಾರತೀಯ ವಾಯು ಪಡೆಯ ಮಿರಾಜ್‌- 2000 ವಿಮಾನಗಳು ಪಾಕಿಸ್ತಾನದ ಬಾಲಕೋಟ್‌, ಮುಜಾಫರಾಬಾದ್‌ ಹಾಗೂ ಚಕೋಟಿಗಳ ಮೇಲೆ ಮಂಗಳವಾರ ಮುಂಜಾನೆ ದಾಳಿ ನಡೆಸಿ ಹಿಂದಿರುಗಿವೆ. ಈ ದಾಳಿ ಸಂಪೂರ್ಣ ಯಶಸ್ವಿಯಾಗಿದ್ದು, ನೂರಾರು ಉಗ್ರರು ಹತ್ಯೆಯಾಗಿದ್ದಾರೆ.