ಬೆಂಗಳೂರು :  ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಉಗ್ರರ ನೆಲೆಗಳ ಮೇಲೆ ಭಾರತೀಯ ವಾಯುಪಡೆಯ ಯೋಧರು ನಡೆಸಿದ ಪ್ರತಿದಾಳಿಯ ಕಾರ್ಯಾಚರಣೆಯನ್ನು ಕನ್ನಡ ಚಿತ್ರರಂಗ ಮುಕ್ತ ಮನಸ್ಸಿನಿಂದ ಸ್ವಾಗತಿಸಿದೆ. ಕನ್ನಡ ಚಿತ್ರರಂಗದ ಬಹುತೇಕರು ಸೋಷಿಯಲ್‌ ಮೀಡಿಯಾದಲ್ಲಿ ಈ ದಾಳಿಗೆ ಸಂಭ್ರಮ ವ್ಯಕ್ತಪಡಿಸಿದ್ದು, ಭಾರತೀಯ ವಾಯುಪಡೆಯನ್ನು ಹೊಗಳಿ ಟ್ವೀಟ್‌ ಮಾಡಿದ್ದಾರೆ.

ಅದರಲ್ಲೂ ನಟ ಧ್ರುವ ಸರ್ಜಾ ಮಾಡಿರುವ ‘ಭಾರತೀಯರ ಮೈಯಾಗ್‌ ಎಷ್ಟುಪೊಗರು ಐತೆ ಅಂತ ಚೆಕ್‌ ಮಾಡ್ಲಿಕ್ಕೆ ಬರಬೇಡ, ಬ್ಲಾಸ್ಟ್‌ ಆಗ್‌ ಹೋಗ್ತೀರ’ ಎಂಬ ಟ್ವೀಟ್‌ ವೈರಲ್‌ ಆಗಿದೆ.

 ಏನ್ಮಾಡ್ಬೇಕೆಂದು ತೋಚದೆ ಮೈ ಕೈ ಪರಚಿಕೊಂಡ ಪಾಕ್; ಸಿಟ್ಟು ಹೊರಹಾಕಿದ್ದು ಹೀಗೆ!

ಗೋಲ್ಡನ್‌ ಸ್ಟಾರ್‌ ಗಣೇಶ್‌, ‘ಉಗ್ರರನ್ನು ನಾಶ ಮಾಡಲು ನಮ್ಮ ಭಾರತದ ವಾಯುಪಡೆ ದಾಳಿ ಮಾಡಿದೆ. ಜೈ ಹಿಂದ್‌. ನಮ್ಮ ವಾಯುಪಡೆ ಬಗ್ಗೆ ಹೆಮ್ಮೆ ಇದೆ’ ಎಂದು ಹೇಳಿಕೊಂಡಿದ್ದಾರೆ. ‘ನಮ್ಮ ವೀರ ಯೋಧರನ್ನು ಸ್ಮರಿಸೋಣ, ಉಗ್ರರ ನೆಲೆಗಳನ್ನು ನಾಶ ಮಾಡಿದ ಯೋಧರ ಸಾಹಸವನ್ನು ಮೆರೆಯೋಣ’ ಎಂಬುದಾಗಿ ನಟಿ ರಾಗಿಣಿ ಟ್ವೀಟ್‌ ಮಾಡಿದ್ದಾರೆ.

ನಟರಾದ ಶ್ರೀಮುರಳಿ, ವಸಿಷ್ಠ ಸಿಂಹ, ನಟಿಯರಾದ ಪ್ರಣೀತಾ ಸುಭಾಷ್‌, ಸುಕೃತಾ ವಾಗ್ಳೆ, ನಭಾ ನಟೇಶ್‌, ‘ಭೈರವಗೀತ’ ಚಿತ್ರದ ಖ್ಯಾತಿಯ ಇರಾ ಮೋರ್‌, ಬಹುಭಾಷೆ ನಟಿ ಅನುಪಮಾ ಪರಮೇಶ್ವರನ್‌, ‘ಪೈಲ್ವಾನ್‌’ ಚಿತ್ರದ ನಾಯಕಿ ಆಕಾಂಕ್ಷ ಸಿಂಗ್‌ ವಾಯುಪಡೆ ದಾಳಿಯನ್ನು ಮೆಚ್ಚಿದ್ದಾರೆ. ಇನ್ನೂ ಅನೇಕ ನಿರ್ದೇಶಕ, ನಿರ್ಮಾಪಕರು ಉಗ್ರ ದಮನ ಕಾರ್ಯವನ್ನು ಪ್ರೋತ್ಸಾಹಿಸಿದ್ದಾರೆ. ಎಲ್ಲರೂ ‘ನಮ್ಮ ಸೈನ್ಯ, ನಮ್ಮ ಹೆಮ್ಮೆ’ ಎಂದು ಭಾರತೀಯ ಸೈನ್ಯವನ್ನು ಹೊಗಳಿದ್ದು, ಬಹುತೇಕರು ಹೌ ಇಸ್‌ ದ ಜೋಶ್‌ ಎಂದು ಕೇಳಿ ಸಂಭ್ರಮಿಸಿದ್ದಾರೆ.